ಯಲಬುರ್ಗಾ: ದೀಪಾವಳಿ ಹಬ್ಬವನ್ನು ನಾನಾ ರೀತಿಯಿಂದ ಆಚರಿಸುವ ಪದ್ಧತಿ ಹಿಂದಿನಿಂದಲೂ ಬಂದಿದೆ. ಆದರೆ ತಾಲೂಕಿನಲ್ಲಿ ಕುರಿಗಾಹಿಗಳು ಕುರಿ ನಿಲ್ಲಿಸುವ ಸ್ಥಳದಲ್ಲೇ ಹಟ್ಟಿ ಪೂಜೆ ಮಾಡಿ ಸೋಮವಾರ ಸಂಭ್ರಮದಿಂದ ದೀಪಾವಳಿ ಆಚರಿಸಿದರು.
ನಾಡಿನಾದ್ಯಂತ ಸಂಚರಿಸುತ್ತ ಕುರಿಗಳನ್ನು ಕಾಯುವ ಕುರುಬರು ದೀಪಾವಳಿ ಪಾಡ್ಯದ ದಿನದಂದು ದೊಡ್ಡಿ ಪೂಜೆ ಮಾಡುವುದರೊಂದಿಗೆ ಹಟ್ಟಿ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಿದರು. ತಾಲೂಕಿನ ಯರೇಭಾಗದ ಭಟಪ್ಪನಹಳ್ಳಿ, ಚಿಕೇನಕೊಪ್ಪ, ತಳಕಲ್, ಸಿದೆಕೊಪ್ಪ, ಬೆಣಕಲ್, ಸೋಂಪುರ, ಯರೇಹಂಚಿನಾಳ, ಕೋಮಲಾಪುರ, ಬನ್ನಿಕೊಪ್ಪ ಸೇರಿದಂತೆ ಮಸಾರಿ ಭಾಗದ ಗ್ರಾಮದ ಕುರಿಗಾರರು ಪ್ರತಿವರ್ಷ ದೊಡ್ಡಿ ಪುಜೆಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇದರಿಂದ ಕುರಿ ಸಂತತಿ ಹೆಚ್ಚುತ್ತದೆ ಎಂಬ ನಂಬಿಕೆ ಅವರಲ್ಲಿದೆ.
ವಿಶೇಷತೆ: ಬೆಳಗ್ಗೆ ಎದ್ದು ಕುರಿ ಹಿಕ್ಕಿಯನ್ನು ತೆಗೆದುಕೊಂಡು ಹಟ್ಟಿ ಮುಂದೆ ಸಾರಿಸಿ ಸುತ್ತಲೂ ಸುಣ್ಣದ ಪಟ್ಟಿ ಹಾಕುತ್ತಾರೆ. ಕುರಿ ಹಿಕ್ಕೆಯನ್ನು ನೀರು ತುಂಬಿದ ಕೊಡ ಕೂಡ್ರುವಂತೆ ಗುಡ್ಡೆ ಹಾಕುತ್ತಾರೆ. ಅದನ್ನು ಬಾಳೆ ಕಂಬಗಳು, ತೆಂಗಿನ ಗರಿಗಳು, ಕಬ್ಬಿನ ಗಳಗಳಿಂದ ಅಲಂಕರಿಸುತ್ತಾರೆ. ಕುರಿ ಹಿಕ್ಕೆಯ ಮಧ್ಯ ತುಂಬಿದ ಕೊಡ ಇಟ್ಟು ಅದನ್ನೇ ಲಕ್ಷ್ಮೀ ಎಂದು ಭಾವಿಸಿ ಹೊಸ ಸೀರೆ ಉಡಿಸಿ, ಹಸಿರು ಬಳೆ, ಖಣ, ಮಂಗಳಸೂತ್ರ, ಮೂಗುತಿ ಹಾಕುತ್ತಾರೆ. ಲಕ್ಷ್ಮೀಯನ್ನು ಸೂರ್ಯಕಾಂತಿ ಹೂವುಗಳು, ಚೆಂಡು ಹೂವುಗಳಿಂದ ಅಲಂಕರಿಸುತ್ತರೆ.
ಟಗರು-ಕುರಿಗಳ ಅಲಂಕಾರ: ಇದಕ್ಕೂ ಮುನ್ನ ಟಗರುಗಳ ಕೊಂಬುಗಳಿಗೆ ಬಣ್ಣ ಹಚ್ಚಿ ಅವುಗಳ ಕೊರಳಿಗೆ ಅರಿಶಿಣ-ಕುಂಕುಮದಲ್ಲಿ ಅದ್ದಿ ತೆಗೆದ ದಾರವನ್ನು ಹಾಕಿ ಅಲಂಕರಿಸುತ್ತಾರೆ. ನಂತರ ಹಟ್ಟಿಯ ಮುಂದೆ ಕಬ್ಬುಗಳಿಂದ ಮಂಟಪವನ್ನು ಮಾಡಿ ಎರಡು ಟಗರು, ಮೂರು ಕುರಿಗಳ ಕೊರಳಿಗೆ ಜೋಳದ ದಂಟಿನ ಎಲೆಗಳನ್ನು ಹಾಕಿ ಶೃಂಗರಿಸಿ ಪೂಜಿಸುತ್ತಾರೆ. ಈ ಸಂದರ್ಭಕ್ಕೆಂದೇ ತಯಾರಿಸಿದ ಸಿಹಿ ತಿನಿಸುಗಳ ಎಡೆಯನ್ನು ಲಕ್ಷ್ಮೀ ದೇವಿಗೆ ನೈವೆದ್ಯ
ಮಾಡಿ ಕುರಿಗಳ ಮೇಲೆ ಭಂಡಾರ ಎರಚಿ ವರ್ಷವಿಡಿ ಕುರಿ ಹಿಂಡುಗಳ ಸಂತತಿ ಹೆಚ್ಚಾಗಲಿ ಎಂದು ಲಕ್ಷ್ಮೀದೇವಿಯಲ್ಲಿ ಪ್ರಾರ್ಥಿಸುತ್ತಾರೆ. ಕುರಿಹಟ್ಟಿಯಲ್ಲಿ ಮಾಡಿದ ಲಕ್ಷ್ಮೀ ಪೂಜೆಯಲ್ಲಿ ತಮ್ಮ ಆಯುಧಗಳಾದ ಕೊಡಲಿ, ಕುರಿಯ ಉಣ್ಣೆ ಕತ್ತರಿಸುವ ಕತ್ತರಿ, ಬಗಲಿಗೆ ಹಾಕಿಕೊಳ್ಳುವ ಹೊಟ್ಟೆಚೀಲ ಇಟ್ಟು ಪೂಜೆ ಮಾಡುತ್ತಾರೆ.
ಹಾಲು ಉಕ್ಕಿಸುವ ಪದ್ಧತಿ: ಹೊಸ ಮಣ್ಣಿನ ಮಗಿಯಲ್ಲಿ ಈ ದಿನ ಬೆಳಗ್ಗೆ ಹಾಲು ಉಕ್ಕಿಸುತ್ತಾರೆ. ಈ ದಿನ ಹಾಲು ಯಾವ ದಿಕ್ಕಿಗೆ ಉಕ್ಕಿ ಚೆಲ್ಲಿತೋ ಆ ದಿಕ್ಕಿನ ಕಡೆಗೆ ಶುಭ ಸೂಚನೆ ಎಂದು ಭಾವಿಸಿ ಕುರಿ ಹಿಂಡು ಮೇಯಿಸಲು ತೆರಳುತ್ತಾರೆ. ಕುರಿಗಾರರಿಗೆ ದೀಪಾವಳಿ ಮುಖ್ಯ ಹಬ್ಬವಾಗಿದೆ. ಕುರಿಗಾರರು ಯಾವುದೇ ಪ್ರದೇಶದಲ್ಲಿರಲಿ ಅವುಗಳನ್ನು ಅತ್ಯಂತ ಭಕ್ತಿ, ಶ್ರದ್ಧೆಯಿಂದ ಪೂಜೆ ಮಾಡುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಈ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಕುರಿಗಾಹಿಗಳು ಮಾತ್ರ ಕುರಿಹಟ್ಟಿಹಬ್ಬ ಎಂದು ಆಚರಿಸುವುದು ಈ ಭಾಗದ ವಿಶೇಷವಾಗಿದೆ.
-ಮಲ್ಲಪ್ಪ ಮಾಟರಂಗಿ