ಅಫಜಲಪುರ: ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಿ ಬಡವರಿಗೆ ಕೈಗೆಟುವ ಬೆಲೆಯಲ್ಲಿ ಮರಳು ಸಿಗುವಂತೆ ಮಾಡುವುದಕ್ಕಾಗಿ ಸರ್ಕಾರ ಹಟ್ಟಿ ಗೋಲ್ಡ್ ಮೈನ್ಸ್‌ನವರಿಗೆ ಮರಳು ಗಣಿಗಾರಿಕೆ ನಡೆಸಲು ಅನುಮತಿ ನೀಡಿದೆ ಎಂದು ಸಹಾಯಕ ಆಯುಕ್ತ (ಎಡಿಸಿ) ಭೀಮಾಶಂಕರ ತೆಗ್ಗೆಳ್ಳಿ ತಿಳಿಸಿದರು.
ತಾಲೂಕಿನ ಘತ್ತರಗಿ ಭಾಗ್ಯವಂತಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ಆದೇಶದ ಮೇರೆಗೆ ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್‌ನವರು ಘತ್ತರಗಾ ಒಂದು ಮರಳು ಬ್ಲಾಕ್‌ನಲ್ಲಿ ಸಾಮಾನ್ಯ ಮರಳು ಗಣಿಗಾರಿಕೆಯನ್ನು, ಭೀಮಾ ನದಿ ತೀರದ ಎದುರಿನ ಸರ್ವೇ ನಂ. 62, 95ರಲ್ಲಿ ಒಟ್ಟು 12ಎಕರೆ 4.86 ಹೆಕ್ಟೇರ್ ಪ್ರದೇಶದಲ್ಲಿ ವರ್ಷಕ್ಕೆ 69,379 ಟನ್ ಗಳಷ್ಟು ಸಾಮಾನ್ಯ ಗಣಿಗಾರಿಕೆಯನ್ನು ತೆರೆದ ಕ್ವಾರಿ, ಅರೆ ಯಾಂತ್ರಿಕೃತ ಪದ್ಧತಿ ಪ್ರಕಾರ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದರಿಂದ ಜನಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ಮತ್ತು ಗುಣಮಟ್ಟದ ಮರಳು ಲಭ್ಯವಾಗಲಿದೆ. ಅಲ್ಲದೇ ಅಕ್ರಮ ಮರಳು ದಂಧೆಗೆ ಕಡಿವಾಣ ಬೀಳಲಿದೆ ಎಂದರು.
ಈ ವೇಳೆ ಗ್ರಾಮಸ್ಥರು ಮಾತನಾಡಿ, ಘತ್ತರಗಿ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾಗಿದೆ. ಗ್ರಾಮದಲ್ಲಿ ಗುಣಮಟ್ಟದ ರಸ್ತೆ ನಿರ್ಮಿಸಬೇಕು. ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷ ವಿಠ್ಠಲ ನಾಟಿಕಾರ ಮಾತನಾಡಿ, ಮರಳು ಗಣಿಗಾರಿಕೆಯಿಂದ ಗ್ರಾಮ ಪಂಚಾಯಿತಿಗೆ ತೆರಿಗೆ ಬರುವಂತೆ ಕ್ರಮ ಕೈಗೊಂಡರೆ ಸ್ಥಳೀಯವಾಗಿ ಇನ್ನಷ್ಟು ಸಾರ್ವಜನಿಕ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.
ತಹಶೀಲ್ದಾರ್ ಸಂಜೀವಕುಮಾರ ದಾಸರ್, ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಅಧಿಕಾರಿಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಮಂಜಪ್ಪ, ಗ್ರಾಪಂ ಸದಸ್ಯರು, ಪಿಡಿಒ ಹಾಗೂ ಗ್ರಾಮಸ್ಥರು ಇದ್ದರು.