Advertisement

ಬಿಡಾಡಿ ದನಗಳ ಹಾವಳಿಗೆ ಜನತೆ ಹೈರಾಣ

12:06 PM Nov 27, 2019 | Naveen |

ಹಟ್ಟಿ ಚಿನ್ನದ ಗಣಿ: ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಿದ್ದು, ಇದರಿಂದ ಜನ, ವಾಹನ ಸಂಚಾರಕ್ಕೆ ಅಡೆತಡೆ ಆಗುತ್ತಿದೆ. ಪಟ್ಟಣದಲ್ಲಿ ಬಿಡಾಡಿ ದನಗಳ ಮೂರ್‍ನಾಲ್ಕು ಗುಂಪು ಇದ್ದು, ಒಂದು ಗುಂಪಿನಲ್ಲಿ 20ರಿಂದ 25 ದನಗಳಿವೆ. ಈ ಗುಂಪುಗಳು ಪಟ್ಟಣದ ಪ್ರಮುಖ ರಸ್ತೆ, ಬಡಾವಣೆಗಳಲ್ಲಿ ಠಿಕಾಣಿ ಹೂಡುತ್ತಿವೆ. ಕೆಲವೊಮ್ಮೆ ರಸ್ತೆಯಲ್ಲೇ ಮಲಗುವುದರಿಂದ ಜನ, ವಾಹನ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ.

Advertisement

ಕಾಕಾನಗರದಿಂದ, ಪಾಮನಕೆಲ್ಲೂರು ಕ್ರಾಸ್‌ವರೆಗಿನ ಅಂದಾಜು 2 ಕಿ.ಮೀ. ದ್ವಿಪಥ ರಸ್ತೆ ಇದೆ. ಈ ರಸ್ತೆಯಲ್ಲಿ ಬಿಡಾಡಿ ದನಗಳು ಠಿಕಾಣಿ ಹೂಡುತ್ತಿವೆ. ರಸ್ತೆಯಲ್ಲೇ ಮಲಗುತ್ತಿವೆ. ವಾಹನ ಸವಾರರು ಎಷ್ಟೇ ಹಾರ್ನ್ ಹಾಕಿದರೂ ಅತ್ತಿತ್ತ ಸರಿಯುವುದಿಲ್ಲ. ಇದರಿಂದ ಸಂಚಾರಕ್ಕೆ ಅಡಚಣೆ ಆಗುತ್ತಿದೆ.

ಪಟ್ಟಣದ ಬಸ್‌ ನಿಲ್ದಾಣ, ದಾಸಪ್ಪಗೌಡ ಕಾಂಪ್ಲೆಕ್ಸ್‌, ಕೋಠಾ ಕ್ರಾಸ್‌, ಕಾಕಾನಗರ, ಕ್ಯಾಂಪ್‌ ಬಸ್‌ ನಿಲ್ದಾಣದಲ್ಲಿ ದನಗಳ ಗುಂಪು ರಸ್ತೆಯೇ ಮೇಲೆಯೇ ಇರುತ್ತದೆ. ಚಿನ್ನದ ಗಣಿ ಕ್ರೀಡಾಂಗಣಕ್ಕೆ ತೆರಳುವ ದನಗಳು ಅಲ್ಲಿಯೇ ಆಶ್ರಯ ಪಡೆಯುತ್ತಿವೆ. ಇಷ್ಟು ದಿನಗಳ ಕಾಲ ಎಲ್ಲಿದ್ದವೊ ಗೊತ್ತಿಲ್ಲ, ಆದರೆ ಕಳೆದ ವಾರದಿಂದ ದನಗಳು ರಸ್ತೆಯಲ್ಲಿಯೇ ಮಲಗುವುದು, ನಿಲ್ಲುವುದು ಮಾಡುತ್ತಿವೆ. ಇದರಿಂದ ಚಿನ್ನದ ಗಣಿಗೆ ವಾಹನಗಳಲ್ಲಿ ಕೆಲಸಕ್ಕೆ ತೆರಳುವ ಕಾರ್ಮಿಕರಿಗೆ, ನೌಕರರಿಗೆ ಸಮಸ್ಯೆ ಆಗುತ್ತಿದೆ.

ದನಗಳ ಕದನ: ಕೆಲವೊಮ್ಮೆ ದನಗಳ ಮಧ್ಯೆ ಕದನ ನಡೆಯುವುದರಿಂದ ವೇಗವಾಗಿ ಅತ್ತಿತ್ತ ಓಡುತ್ತವೆ. ಇಂತಹ ವೇಳೆ ಬೈಕ್‌ ಸವಾರರು, ಪಾದಚಾರಿಗಳಿಗೆ ಹಾದ ಉದಾಹರಣೆಗಳಿವೆ. ಬೈಕ್‌ ಸವಾರರು ದನಗಳ ಕಾದಾಟದ ಸಂದರ್ಭದಲ್ಲಿ ಯಾವ ಕಡೆ ತೆರಳಬೇಕೆಂದು ಯೋಚಿಸುವಾಗಲೆ ವಾಹಗಳ ಮೇಲೆ ಬಂದು ಬಿಡುತ್ತವೆ. ಇದರಿಂದ ವಾಹನಗಳು ಜಖಂಗೊಂಡರೆ, ಸವಾರರು ಗಾಯಗೊಂಡ ಘಟನೆಗಳು ನಡೆದಿವೆ. ಪಟ್ಟಣದಲ್ಲಿರುವ ದನಗಳಿಗೆ ಮಾಲೀಕರು ಇದ್ದಾರೆ. ಆದರೆ ಸಾಕಿದ ಜಾನುವಾರುಗಳನ್ನು ಅಡವಿಗೆ ಹೊಡೆದುಕೊಂಡು ಹೋಗಿ ಮೇಯಿಸುವ ಬದಲಿಗೆ, ಇಲ್ಲವೇ ಮನೆಯಲ್ಲಿ ಕಟ್ಟುವ ಬದಲಿಗೆ ರೋಡಿಗೆ ಬಿಟ್ಟಿದ್ದಾರೆ. ಶಾಲಾ ಮಕ್ಕಳು ರಸ್ತೆಯಲ್ಲಿ ಭಯದಿಂದ ಸಂಚರಿಸುವಂತಾಗಿದೆ. ಕೂಡಲೇ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಜಾನುವಾರುಗಳನ್ನು ಕಟ್ಟಿ ಹಾಕಲು ಮಾಲೀಕರಿಗೆ ಸೂಚಿಸಬೇಕು. ಇಲ್ಲವೇ ಅವುಗಳನ್ನು ವಶಕ್ಕೆ ಪಡೆದು ಗೋಶಾಲೆಗೆ ಸಾಗಿಸಬೇಕೆಂದು ಮುನ್ನಾ ಮೆಕ್ಯಾನಿಕ್‌ ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

ದನಗಳನ್ನು ರಸ್ತೆಗೆ ಬಿಡದಂತೆ ಮಾಲೀಕರು ಎಚ್ಚರ ವಹಿಸಬೇಕು. ರಸ್ತೆಗೆ ಬಿಡದಂತೆ ಸೂಚಿಸಿದರೂ ಸ್ಪಂದಿಸುತ್ತಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಬಿಡಾಡಿ ದನಗಳನ್ನು ಹಿಡಿಯುವ ಕಾರ್ಯ ಕೈಗೊಳ್ಳಲಾಗುವುದು.
ದುರುಗಪ್ಪ ಹಗೆದಾಳ,
ಮುಖ್ಯಾಧಿಕಾರಿ ಹಟ್ಟಿ ಪಟ್ಟಣ ಪಂಚಾಯಿತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next