ಹಟ್ಟಿ ಚಿನ್ನದ ಗಣಿ: ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ನಿರ್ಲಕ್ಷ್ಯದಿಂದಾಗಿ ಸಮೀಪದ ಗುರುಗುಂಟಾ-ಗೌಡೂರು, ಮಾಚನೂರು, ಯಲಗಟ್ಟಾ ರಸ್ತೆ ನಿರ್ವಹಣೆ ಇಲ್ಲದೇ ಹಾಳಾಗಿದ್ದರಿಂದ ವಾಹನ, ಚಾಲಕರು, ಸಾರ್ವಜನಿಕರ ಪ್ರಯಾಣ ಪ್ರಯಾಸವಾಗುತ್ತಿದೆ.
ಗುರುಗುಂಟಾ ಬಳಿ ಹಾದು ಹೋದ ಗೌಡೂರು, ಮಾಚನೂರು ಮತ್ತು ಯಲಗಟ್ಟಾದ 12 ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯಲ್ಲಿ ಗುಂಡಿಗಳು ಬಿದ್ದು, ವಾಹನಗಳ ಸವಾರರು ತೊಂದರೆ ಅನುಭವಿಸುವಂತಾಗಿದೆ. ಗೌಡೂರು-ಗುರುಗುಂಟಾ ಮಧ್ಯದ 5 ಕಿ.ಮೀ. ರಸ್ತೆಯುದ್ದಕ್ಕೂ ತಗ್ಗುಗಳು ಬಿದ್ದಿವೆ. ಇದು ನೀರಾವರಿ ಪ್ರದೇಶವಾಗಿದ್ದರಿಂದ ಗುಂಡಿಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆ ಆಗುತ್ತಿದೆ.
ವಾಹನ ಸವಾರರು ಈ 5 ಕಿ.ಮೀ. ರಸ್ತೆ ಕ್ರಮಿಸಲು ಸುಮಾರು ಅರ್ಧ ಗಂಟೆ ವ್ಯಯಿಸಬೇಕಿದೆ. ಈ ರಸ್ತೆ ಸಂಪೂರ್ಣ ಹದಗೆಟ್ಟಿದ್ದರೂ ವೇಗ ನಿಯಂತ್ರಣಕ್ಕೆ ಅಲ್ಲಲ್ಲಿ ಹಂಪ್ಸ್ ಹಾಕಿದ್ದು, ರಸ್ತೆ ಮತ್ತಷ್ಟು ಹದಗೆಡಲು ಕಾರಣವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಇನ್ನು ಮಾಚನೂರು ಗೌಡೂರು ರಸ್ತೆ ಡಾಂಬರ್ ಸಂಪೂರ್ಣ ಕಿತ್ತಿಹೋಗಿ ಕಂಕರ್‌ಗಳು ತೇಲಿವೆ. ಗೌಡೂರು ಸಮೀಪದ ಹಳ್ಳದ ಬಳಿ ಸಿಸಿ ರಸ್ತೆ ಕಿತ್ತಿದ್ದು ದ್ವಿಚಕ್ರ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಚಿನ್ನದ ಗಣಿ ಕಂಪನಿ ಕೆಲಸಕ್ಕೆ ತೆರಳುವ ಕಾರ್ಮಿಕರ ದ್ವಿಚಕ್ರ ವಾಹನಗಳು ಹಾಳಾಗುತ್ತಿವೆ. ಇದರಂತೆ ಮಾಚನೂರು ಯಲಗಟ್ಟಾ ರಸ್ತೆಯ ಬಹುತೇಕ ಭಾಗ ಹಾಳಾಗಿದೆ. ಗುರುಗುಂಟಾ ಯಲಗಟ್ಟಾ 12 ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ತುರ್ತು ಸಂದರ್ಭದಲ್ಲಿ ಕಾರು, ಆಟೋ, ಸಣ್ಣಪುಟ್ಟ ವಾಹನಗಳವರು ಬಾಡಿಗೆ ಬರಲು ಹಿಂದೇಟು ಹಾಕುತ್ತಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಗುರುಗುಂಟಾ-ಗೌಡೂರು, ಯಲಗಟ್ಟಾ ರಸ್ತೆ ಸಂಪೂರ್ಣ ಹಾಳಾಗಿದ್ದರೂ ಈ ಭಾಗದ ಜನಪ್ರತಿನಿಧಿಗಳು ದುರಸ್ತಿಗೆ ಕ್ರಮ ವಹಿಸದ್ದರಿಂದ ಜನರು ಹಿಡಿಶಾಪ ಹಾಕುತ್ತ ಸಂಚರಿಸುವಂತಾಗಿದೆ. ಇನ್ನಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ರಸ್ತೆ ದುರಸ್ತಿಗೆ ಮುಂದಾಗಬೇಕಿದೆ.
ಗಂಗಾಧರ ನಾಯಕ