ಕೆಲವು ಸಿನಿಮಾಗಳು ಹಿಟ್ ಆದರೆ ಅಥವಾ ಪಾತ್ರಗಳು ಕ್ಲಿಕ್ ಆದರೆ, ನಂತರ ಆ ಚಿತ್ರದಲ್ಲಿ ನಟಿಸಿದ ಕಲಾವಿದರ ಹೆಸರಿನ ಮುಂದೆ ಚಿತ್ರದ ಅಥವಾ ಪಾತ್ರದ ಹೆಸರು ಅಂಟಿಕೊಂಡ ಬಿಡುತ್ತದೆ. ಜನ ಅದೇ ಹೆಸರಿನಲ್ಲಿ ಗುರುತಿಸುತ್ತಾರೆ ಕೂಡಾ. ಸಿನಿಮಾ, ಪಾತ್ರದ ಹೆಸರಿನಿಂದ ಗುರುತಿಸಿಕೊಳ್ಳುವ ಅನೇಕ ನಟ-ನಟಿಯರು ಕನ್ನಡ ಚಿತ್ರರಂಗದಲ್ಲಿ ಸಿಗುತ್ತಾರೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ ಗುರುನಂದನ್. “ಫಸ್ಟ್ ರ್‍ಯಾಂಕ್ ರಾಜು’ ಚಿತ್ರ ಹಿಟ್ ಆಗುತ್ತಿದ್ದಂತೆ ಗುರುನಂದನ್ ಆ ಪಾತ್ರದ ಹೆಸರಿಗೆ ಬ್ರಾಂಡ್ ಆಗಿಬಿಟ್ಟಂತಿದೆ. ಈಗಾಗಲೇ ಅವರು ನಾಯಕರಾಗಿರುವ “ರಾಜು ಕನ್ನಡ ಮೀಡಿಯಂ’ ಬಂದಿರುವ ವಿಚಾರ ನಿಮಗೆ ಗೊತ್ತಿದೆ. ಈಗ “ರಾಜು’ ಸೀರೀಸ್‌ಗೆ ಹೊಸ ಸೇರ್ಪಡೆ “ರಾಜು ಜೇಮ್ಸ್ ಬಾಂಡ್’. ಇದು ಗುರುನಂದನ್ ನಾಯಕರಾಗಿರುವ ಹೊಸ ಸಿನಿಮಾ. ಇತ್ತೀಚೆಗೆ ಈ ಚಿತ್ರಕ್ಕೆ ಮುಹೂರ್ತ ನಡೆಯಿತು. ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಕ್ಲಾéಪ್ ಮಾಡಿ ಶುಭಕೋರಿದರು. ಸಚಿವ ಜಿ.ಟಿ.ದೇವೇಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೊಸ ತಂಡವನ್ನು ಹರಸಿದರು.
“ರಾಜು ಜೇಮ್ಸ್ ಬಾಂಡ್’ ಚಿತ್ರವನ್ನು ದೀಪಕ್ ಮಧುವನಹಳ್ಳಿ ನಿರ್ದೇಶಿಸುತ್ತಿದ್ದಾರೆ. “ಭಾಗ್ಯರಾಜ್’, “ಕಳ್ಬೆಟ್ಟದ ದರೋಡೆಕೋರರು’ ಚಿತ್ರ ಮಾಡಿರುವ ದೀಪಕ್‌ಗೆ ಇದು ಮೂರನೇ ಸಿನಿಮಾ. “ರಾಜು ಜೇಮ್ಸ್ ಬಾಂಡ್’ ಒಂದು ಕಾಮಿಡಿ ಡ್ರಾಮಾ ಚಿತ್ರವಂತೆ. ಈ ಚಿತ್ರದಲ್ಲಿ ನಾಯಕ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ. “ಇದೊಂದು ಕಾಮಿಡಿ ಡ್ರಾಮಾ ಸಿನಿಮಾ. ಜೊತೆಗೆ ಥ್ರಿಲ್ಲರ್ ಅಂಶಗಳು ಕೂಡಾ ಇರಲಿವೆ. ಚಿತ್ರದ ನಾಯಕ ರಾಜಕುಮಾರ್ ಅವರ ಅಭಿಮಾನಿ. ಅವರ ಬಾಂಡ್ ಸಿನಿಮಾಗಳನ್ನು ನೋಡಿಕೊಂಡು ಬೆಳೆಯುವ ಜೊತೆಗೆ ಅದರಿಂದ ಸ್ಫೂರ್ತಿಗೊಳ್ಳುತ್ತಾನೆ. ಈ ನಡುವೆ ತನ್ನ ಸುತ್ತಲ ಸಮಸ್ಯೆಯನ್ನು ಬಾಂಡ್ ಶೈಲಿಯ ಜೊತೆಗೆ ರಾಜು ಶೈಲಿಯಲ್ಲಿ ಹೇಗೆ ಬಗೆಹರಿಸಿಕೊಳ್ಳುತ್ತಾನೆಂಬ ಅಂಶದೊಂದಿಗೆ ನಡೆಯುತ್ತದೆ’ ಎಂದು ವಿವರ ಕೊಟ್ಟರು ದೀಪಕ್. ಇದು ನೈಜ ಘಟನೆಯಾಧಾರಿತ ಚಿತ್ರ ಎಂಬ ಸುದ್ದಿಯೂ ಓಡಾಡುತ್ತಿತ್ತಂತೆ. ಈ ಬಗ್ಗೆ ಮಾತನಾಡುವ ದೀಪಕ್, ಇದು ಯಾವುದೋ ಬೇರೆ ರಾಜ್ಯದಲ್ಲಿ ನಡೆಯುವ ಅಥವಾ ನೈಜ ಘಟನೆಯಾಧರಿತ ಚಿತ್ರವಲ್ಲ. ಒಂದು ಸಣ್ಣ ಪಟ್ಟಣದಲ್ಲಿ ನಡೆಯುವ ಕಥೆ ಎಂದರು.
ಚಿತ್ರವನ್ನು ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ವರ್ತೂರು ನಿರ್ಮಿಸುತ್ತಿದ್ದಾರೆ. ಕಿರಣ್ ಅವರಿಗೆ, ಗುರುನಂದನ್ ಫೋನ್ ಮಾಡಿ ಈ ತರಹ ಒಂದು ಕಥೆ ಇದೆ, ನೋಡಿ ಎಂದರಂತೆ. ತಕ್ಷಣ ಕಿರಣ್, ಸ್ನೇಹಿತ ಮಂಜುನಾಥ್‌ಗೆ ಹೇಳಿ ಜೊತೆಯಾಗಿ ಸಿನಿಮಾ ಮಾಡಲು ನಿರ್ಧರಿಸಿದರಂತೆ.
ನಾಯಕ ಗುರುನಂದನ್ ಅವರಿಗೆ ತುಂಬಾ ಇಷ್ಟವಾದ ಕಥೆಯಂತೆ. “ನಾನಿಲ್ಲಿ ಅಣ್ಣಾವ್ರ ಚಿತ್ರ ನೋಡಿ ಬೆಳೆದುಕೊಂಡು ಬರುವ ಪಾತ್ರ. ಅವರ ಪಾತ್ರದ ಪ್ರೇರಣೆಯೊಂದಿಗೆ ಮುಂದೆ ಹಲವು ಸಾಹಸಗಳನ್ನು ಮಾಡುತ್ತೇನೆ. ಒಳ್ಳೆಯ ತಂಡ ಸಿಕ್ಕಿದೆ. ಸಂಡೂರು ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರೀಕರಣವಾಗಲಿದೆ’ ಎಂದಷ್ಟೇ ಮಾತನಾಡಿದರು. ಚಿತ್ರದಲ್ಲಿ ಮೃದುಲಾ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ಮನೋಹರ್ ಜೋಷಿ ಛಾಯಾಗ್ರಹಣ, ಅನೂಪ್ ಸೀಳೀನ್ ಸಂಗೀತವಿದೆ. ನಿರ್ಮಾಪಕರಿಗೆ ಒಳ್ಳೆಯ ಸಿನಿಮಾ ಮಾಡಿ ಕೊಡುತ್ತೇವೆ ಎಂದು ಭರವಸೆ ನೀಡಿದರು ಅನೂಪ್.
ರವಿ ರೈ