ಹಾಸನ: ರಾಜ್ಯ ರಾಜಕೀಯದ ಬದಲಾದ ಬೆಳವಣಿಗೆ ನಡುವೆ ನಾನು ಕೆಎಂಎಫ್ ಅಧ್ಯಕ್ಷನಾಗಿ ರಾಜ್ಯದ ಹಾಲು ಉತ್ಪಾದಕರಿಗೆ ತೊಂದರೆಯಾಗಬಾರದೆಂದು ಅಧ್ಯಕ್ಷ ಸ್ಥಾನದ ಚುನಾವಣೆಯಿಂದ ಸಂತೋಷದಿಂದಲೇ ದೂರ ಉಳಿದು ಬಾಲಚಂದ್ರ ಜಾರಕಿಹೊಳಿಯವರು ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ್ದೇನೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಮುಖ್ಯಮಂತ್ರಿಯಾದ ಕೆಲ ಕ್ಷಣಗಳಲ್ಲಿಯೇ ಯಡಿಯೂರಪ್ಪ ಅವರು ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ರದ್ದುಪಡಿಸಿದರು. ರೇವಣ್ಣ ಅಧ್ಯಕ್ಷನಾಗಲೇ ಬಾರದು ಎಂಬುದು ಯಡಿಯೂರಪ್ಪ ಅವರ ಗುರಿ. ಇಂಥ ಪರಿಸ್ಥಿತಿ ಯಲ್ಲಿ ನಾನು ಅಧ್ಯಕ್ಷನಾದರೆ ಹಾಲು ಉತ್ಪಾದಕರಿಗೆ ತೊಂದರೆಯಾಗುತ್ತದೆ. ವಾಲ್ಮೀಕಿ ಸಮುದಾಯದವರು ಅಧ್ಯಕ್ಷನಾಗುವುದನ್ನು ರೇವಣ್ಣ ತಪ್ಪಿಸಿದರು ಎಂಬ ಭಾವನೆ ರಾಜ್ಯದ ಜನರಲ್ಲಿ ಮೂಡುತ್ತದೆ. ನನಗೆ ಅಧಿಕಾರ ಮುಖ್ಯವಲ್ಲ. ಹಾಲು ಉತ್ಪಾದಕರ ಹಿತ ಮುಖ್ಯ. ಹಾಗಾಗಿ, ಅಧ್ಯಕ್ಷ ಸ್ಥಾನದ ಚುನಾವಣೆಯಿಂದ ದೂರ ಉಳಿದೆ’ ಎಂದರು.
“ನಾನು ಅಧ್ಯಕ್ಷನಾಗಲೇಬೇಕು ಎಂದಿದ್ದರೆ ಜು.15ರ ನಂತರ ಯಾವ ದಿನ ಬೇಕಾದರೂ ಅಧ್ಯಕ್ಷ ಸ್ಥಾನದ ಚುನಾವಣೆಗೆ ದಿನಾಂಕ ನಿಗದಿಪಡಿಸಿ ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ ಇದ್ದಾಗಲೇ ಚುನಾವಣೆ ನಡೆಸಿ, ಅಧ್ಯಕ್ಷನಾಗುತ್ತಿದ್ದೆ. ಜು.29ರಂದು ಅಧ್ಯಕ್ಷ ಸ್ಥಾನದ ಚುನಾವಣೆ ನಿಗದಿಯಾಗಿದ್ದಾಗ ನಾನೊಬ್ಬನೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದೆ. ಅಂದು ನನ್ನ ಪರವಾಗಿ 10ಕ್ಕೂ ಹೆಚ್ಚು ನಿರ್ದೇಶಕರಿದ್ದರು. ಕೊನೇ ಕ್ಷಣದಲ್ಲಿ ಮುಖ್ಯಮಂತ್ರಿಯವರು ಚುನಾವಣಾಧಿಕಾರಿಗೆ ಹೆದರಿಸಿದ್ದರಿಂದ ಚುನಾವಣೆ ರದ್ದುಪಡಿಸಲಾಗಿತ್ತು.
ಅದನ್ನು ಪ್ರಶ್ನಿಸಿ ನಾನು ಹೈಕೋರ್ಟ್‌ಗೆ ಹೋಗಿದ್ದೆ. ಏಕ ಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ನಾನು ಮೇಲ್ಮನವಿ ಸಲ್ಲಿಸಬಹುದಿತ್ತು. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಭೀಮಾ ನಾಯಕ್ ಅವರೂ ವಾರದ ಹಿಂದೆ ನನ್ನನ್ನು ಸಂಪರ್ಕಿಸಿ, ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಬೆಂಬಲಿಸುವುದಾಗಿ ಹೇಳಿದ್ದರು. ಜಾರಕಿಹೊಳಿ ಅವರೂ ಅವಿರೋಧ ಆಯ್ಕೆಗೆ ಸಹಕರಿಸಿ ಎಂದು ಮನವಿ ಮಾಡಿದರು. ನನ್ನ ಪರವಾಗಿದ್ದ ನಿರ್ದೇಶಕರಿಗೂ ಬಿಜೆಪಿ ಮುಖಂಡರು ಬೆದರಿಕೆಯೊಡಿª ಜಾರಕಿಹೊಳಿ ಬೆಂಬಲಿಸಬೇಕೆಂದು ಒತ್ತಡ ಹೇರಿದ್ದರು’ ಎಂದು ಹೇಳಿದರು.
ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಯಡಿಯೂರಪ್ಪ ಅವರಿಂದಾಗಲಿ, ಬಿಜೆಪಿಯ ವರಿಂದಾಗಲಿ ಸಾಧ್ಯವಿಲ್ಲ. ಎಷ್ಟು ದಿನ ದ್ವೇಷದ ರಾಜಕಾರಣ ಮಾಡುತ್ತಾರೋ ಮಾಡಲಿ. ನೋಡುತ್ತೇವೆ. ಜನರು ಮತ್ತು ದೇವರ ಆಶೀರ್ವಾದ ಇರುವವರೆಗೂ ದೇವೇಗೌಡರ ಕುಟುಂಬದವರಿಗೆ ಯಾರಿಂದಲೂ ಏನನ್ನೂ ಮಾಡಲು ಸಾಧ್ಯವಿಲ್ಲ.
-ಎಚ್.ಡಿ.ರೇವಣ್ಣ, ಮಾಜಿ ಸಚಿವ