Advertisement

ಅಂತಾರಾಷ್ಟ್ರೀಯ ಸಂಚು!

01:03 AM Oct 06, 2020 | mahesh |

ಲಕ್ನೋ/ಹೊಸದಿಲ್ಲಿ: ಹತ್ರಾಸ್‌ನಲ್ಲಿ ನಡೆದ 19 ವರ್ಷದ ದಲಿತ ಯುವತಿಯ ಅತ್ಯಾಚಾರ ಖಂಡಿಸಿ ನಡೆದ ಪ್ರತಿಭಟನೆಗಳ ಹಿಂದೆ ಯೋಗಿ ಆದಿತ್ಯನಾಥ್‌ ಸರಕಾರದ ಮಾನಹಾನಿ ಮಾಡುವ “ಅಂತಾರಾಷ್ಟ್ರೀಯ ಸಂಚು’ ಕೆಲಸ ಮಾಡಿದೆ ಎಂದು ಉತ್ತರಪ್ರದೇಶ ಪೊಲೀಸರು ಸೋಮವಾರ ಹೇಳಿದ್ದಾರೆ.

Advertisement

ರಾಜ್ಯದಲ್ಲಿ ಗಲಭೆ ಹುಟ್ಟುಹಾಕುವ ಮೂಲಕ ಸರಕಾರಕ್ಕೆ ಮಸಿ ಬಳಿಯುವ ಯತ್ನವನ್ನೂ ನಡೆಸಲಾಗಿದೆ ಎಂದೂ ಪೊಲೀಸರು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಈ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದೆಲ್ಲೆಡೆ 19 ಎಫ್ಐಆರ್‌ಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ದೇಶದ್ರೋಹ, ಸಂಚು, ಧಾರ್ಮಿಕ ದ್ವೇಷಕ್ಕೆ ಪ್ರಚೋದನೆ, ಸರಕಾರದ ವಿರುದ್ಧ ಸಂಚು, ಮಾನಹಾನಿ ಸೇರಿದಂತೆ ಹಲವು ಸೆಕ್ಷನ್‌ಗಳನ್ವಯ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ. ನಮ್ಮ ಸರಕಾರದ ಅಭಿವೃದ್ಧಿ ಕಾರ್ಯ ಗಳನ್ನು ಅರಗಿಸಿಕೊಳ್ಳಲಾಗದ ಕೆಲವರು ಹತ್ರಾಸ್‌ ಘಟನೆ ಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಹಾಗೂ ಕೋಮುಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಸಿಎಂ ಯೋಗಿ ಆದಿತ್ಯನಾಥ್‌ ಹೇಳಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಏನಿದು ಸಂಚು?: justiceforhathrasvictim.carred.co ಎಂಬ ವೆಬ್‌ಸೈಟ್‌ವೊಂದರಲ್ಲಿ ಸುರಕ್ಷಿತವಾಗಿ ಪ್ರತಿಭಟನೆ ನಡೆಸುವುದು ಹೇಗೆ, ಪೊಲೀಸರನ್ನು ಎದುರಿಸುವುದು ಹೇಗೆ ಎಂಬ ಮಾಹಿತಿ ಇದೆ. ಈ ಮಾಹಿತಿಗಳು ಅಂತಾರಾಷ್ಟ್ರೀಯ ಸಂಚಿಗೆ ನಂಟು ಹೊಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಗಲಭೆ ಹಾಗೂ ಪೊಲೀಸರು ಅಶ್ರುವಾಯು ಸಿಡಿಸಿದ ವೇಳೆ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು, ಏನನ್ನು ಮಾಡಬೇಕು, ಏನನ್ನು ಮಾಡಬಾರದು ಎಂಬ ವಿಚಾರವೂ ಆ ವೆಬ್‌ಸೈಟ್‌ನಲ್ಲಿತ್ತು. ಅಮೆರಿಕದಲ್ಲಿ ಇತ್ತೀಚೆಗೆ ಕಪ್ಪುವ ರ್ಣೀಯ ವ್ಯಕ್ತಿ ಜಾರ್ಜ್‌ ಫ್ಲಾಯ್ಡ ಹತ್ಯೆ ವಿರುದ್ಧ ನಡೆದ “ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ಸ್‌’ ಎಂಬ ಪ್ರತಿಭಟನೆಯ ಸಂದರ್ಭದಲ್ಲಿ ಆನ್‌ಲೈನ್‌ನಲ್ಲಿ ಇಂಥ ಟಿಪ್ಸ್‌ಗಳನ್ನು ಹಂಚಿ ಕೊಳ್ಳ ಲಾಗಿತ್ತು. ಅದೇ ಟಿಪ್ಸ್‌ಗಳನ್ನು ಈ ವೆಬ್‌ಸೈಟ್‌ನಲ್ಲೂ ಪ್ರಕಟಿಸಿ, ಹತ್ರಾಸ್‌ ಪ್ರತಿಭಟನೆಯಲ್ಲೂ ಬಳಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. “ಹತ್ರಾಸ್‌ನಲ್ಲಿ ದೊಡ್ಡದೊಂದು ಸಂಚು ನಡೆದಿದೆ. ನಾವು ತನಿಖೆ ನಡೆಸಿ ಸತ್ಯವನ್ನು ಬಹಿರಂಗ ಪಡಿಸುತ್ತೇವೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಪ್ರಶಾಂತ್‌ ಕುಮಾರ್‌ ಹೇಳಿದ್ದಾರೆ.

ಭದ್ರತೆ ಹೆಚ್ಚಳ: ಇದೇ ವೇಳೆ, ಹತ್ರಾಸ್‌ ಸಂತ್ರಸ್ತೆಯ ಕುಟುಂಬಕ್ಕೆ ಭದ್ರತೆ ಹೆಚ್ಚಿಸಲಾಗಿದೆ. ಸಂತ್ರಸ್ತೆಯ ಸಹೋದರನಿಗೆ ಭದ್ರತೆ ಒದಗಿಸಲು ಇಬ್ಬರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾ ಗಿದೆ. ಅವರ ಮನೆಯ ಸುತ್ತಲೂ ಭದ್ರತೆ ಹೆಚ್ಚಿಸಲಾಗಿದೆ ಎಂದು ಉತ್ತರಪ್ರದೇಶ ಸರಕಾರ ಸೋಮವಾರ ತಿಳಿಸಿದೆ.

Advertisement

ಈ ಮಧ್ಯೆ, ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳ ಪರ ವಕಾಲತ್ತು ವಹಿಸಿದ್ದ ಎ.ಪಿ.ಸಿಂಗ್‌ ಅವರೇ ಹತ್ರಾಸ್‌ ಪ್ರಕರಣದಲ್ಲೂ ಆರೋಪಿಗಳ ಪರ ವಾದಿಸಲಿದ್ದಾರೆ. ಸಿಂಗ್‌ ಅವರನ್ನು ಅಖೀಲ ಭಾರತೀಯ ಕ್ಷತ್ರಿಯ ಮಹಾಸಭಾ (ಎಬಿಕೆಎಂ) ಸಂಪರ್ಕಿಸಿದೆ ಎಂದು ಮೂಲಗಳು ತಿಳಿಸಿವೆ.

ಸೋಮವಾರ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿಯಾಗಲೆಂದು ಹತ್ರಾಸ್‌ಗೆ ಬಂದ ಆಪ್‌ ಸಂಸದ ಸಂಜಯ್‌ ಸಿಂಗ್‌ ಮೇಲೆ ವ್ಯಕ್ತಿಯೊಬ್ಬ ಶಾಯಿ ಎಸೆದ ಘಟನೆ ನಡೆದಿದೆ. ಈ ನಡುವೆ, ಸಿಪಿಐ ಮತ್ತು ಸಿಪಿಎಂ ಜಂಟಿ ನಿಯೋಗವು ಮಂಗಳವಾರ ಹತ್ರಾಸ್‌ ಸಂತ್ರಸ್ತೆಯ ಕುಟುಂಬ ವನ್ನು ಭೇಟಿಯಾಗಲಿದೆ ಎಂದು ಪಕ್ಷ ತಿಳಿಸಿದೆ.

ದೂರು ದಾಖಲಿಸಲು 800 ಕಿ.ಮೀ. ಪ್ರಯಾಣ!
ವ್ಯಕ್ತಿಯೊಬ್ಬನ ಮೇಲೆ ಅತ್ಯಾಚಾರ ದೂರು ದಾಖಲಿಸಲು 22 ವರ್ಷದ ನೇಪಾಲಿ ಯುವತಿಯೊಬ್ಬಳು ಬರೋಬ್ಬರಿ 800 ಕಿ.ಮೀ. ಪ್ರಯಾಣಿಸಿದ್ದಾರೆ! ಈಕೆ ಉತ್ತರಪ್ರದೇಶದ ಲಕ್ನೋದಿಂದ 800 ಕಿ.ಮೀ. ಪ್ರಯಾಣಿಸಿ ಮಹಾರಾಷ್ಟ್ರದ ನಾಗ್ಪುರಕ್ಕೆ ಬಂದು ಪೊಲೀಸರಿಗೆ ದೂರು ನೀಡಿದ್ದಾಳೆ. “ಪೊಲೀಸರಿಗೆ ದೂರು ನೀಡಿದರೆ ಸುಮ್ಮನಿರಲ್ಲ’ ಎಂದು ಆರೋಪಿಯು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಯುವತಿ ಅಲ್ಲಿಂದ ತಪ್ಪಿಸಿಕೊಂಡು ಬಂದು, ಮಹಾರಾಷ್ಟ್ರ ಪೊಲೀಸರ ಮೊರೆಹೋಗಿದ್ದಾಳೆ.

ರಾಹುಲ್‌ ಗಾಂಧಿ ಅವರದ್ದು ವಿದೇಶಿ ಮನಸ್ಥಿತಿ
“ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಅವರದ್ದು ವಿದೇಶಿ ಮನಸ್ಥಿತಿ. ಅವರು ರಾಷ್ಟ್ರೀಯವಾದದ ಬಗ್ಗೆ ತಿಳಿದುಕೊಳ್ಳ ಬೇಕು. ರಾಷ್ಟ್ರೀಯವಾದಿಗಳಿಂದ ಭಾರತದ ಸಂಸ್ಕೃತಿಯ ಪಾಠ ಕಲಿಯಬೇಕು’ ಎಂದು ಉತ್ತರಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್‌ ಹೇಳಿದ್ದಾರೆ. “ಹೆತ್ತವರು ತಮ್ಮ ಹೆಣ್ಣುಮಕ್ಕಳಿಗೆ ಸಂಸ್ಕಾರ ಹೇಳಿಕೊಟ್ಟರಷ್ಟೇ ಅತ್ಯಾಚಾರ ಪ್ರಕರಣಗಳನ್ನು ತಡೆಯಲು ಸಾಧ್ಯ’ ಎಂದು ಸುರೇಂದ್ರ ಸಿಂಗ್‌ ಶನಿವಾರ ಹೇಳಿಕೆ ನೀಡಿದ್ದು, ಅದನ್ನು ರಾಹುಲ್‌ ಖಂಡಿಸಿದ್ದರು. ಇದಕ್ಕೆ ಪ್ರತಿಯಾಗಿ ಸಿಂಗ್‌ ಈ ರೀತಿ ಪ್ರತಿಕ್ರಿಯಿಸಿªದಾರೆ.

Advertisement

Udayavani is now on Telegram. Click here to join our channel and stay updated with the latest news.

Next