Advertisement

Election; ದ್ವೇಷ ಕಾರುವ ಪಿಎಂ ಮೋದಿ ರಾಜಕೀಯ ತ್ಯಜಿಸಲಿ: ಖರ್ಗೆ

10:49 PM May 21, 2024 | Team Udayavani |

ಹೊಸದಿಲ್ಲಿ: ಚುನಾವಣೆ ಪ್ರಚಾರದಲ್ಲಿ ಹಿಂದೂ-ಮುಸ್ಲಿಂ ಬಗ್ಗೆ ಮಾತನಾಡುತ್ತಾ ದ್ವೇಷ ಭಾಷಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಜೀವನವನ್ನು ತ್ಯಜಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

Advertisement

ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಖರ್ಗೆ, “”ಒಂದೆಡೆ ಹಿಂದೂ-ಮುಸ್ಲಿಂ ರಾಜಕೀಯ ಮಾಡಿದರೆ ಸಾರ್ವಜನಿಕ ಜೀವನ ಹಾಗೂ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲು ತಮಗೆ ಹಕ್ಕಿಲ್ಲ ಎನ್ನುವ ಮೋದಿ, ಮತ್ತೂಂದೆಡೆ ಪ್ರತಿ ದಿನ ಅದೇ ರಾಜಕಾರಣ ಮಾಡುತ್ತಿದ್ದಾರೆ. ಹಾಗಾಗಿ, ಅವರು ರಾಜಕೀಯ ಬದುಕಿಗೆ ವಿದಾಯ ಹೇಳುವ ಮೂಲಕ ನುಡಿದಂತೆ ನಡೆಯಬೇಕು” ಎಂದು ಹೇಳಿದ್ದಾರೆ.

ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಒಟ್ಟಿಗೆ ಕರೆದೊಯ್ಯುವ ಮಾತನಾಡುವ ಬದಲು ಮತಗಳಿಗಾಗಿ ಅವರು ವಿಭಜನಕಾರಿಯಾಗಿ ಮಾತನಾಡುತ್ತಾರೆ. ದ್ವೇಷ ಭಾಷಣ ಮಾಡುತ್ತಿದ್ದಾರೆ. ಸಂವಿಧಾನ ಅಥವಾ ಮುಸ್ಲಿಮರ ವಿರುದ್ಧ ಮಾತನಾಡಿದವರನ್ನು ಮೋದಿ ಎಂದಾದರೂ ಖಂಡಿಸಿದ್ದಾರೆಯೇ ಎಂದು ಖರ್ಗೆ ಪ್ರಶ್ನಿಸಿದರು.

ಯಾವುದೇ ಸಮಾಜಕ್ಕೆ ಆದ ಅನ್ಯಾಯವನ್ನು ತಡೆಯುವುದು ತುಷ್ಟೀಕರಣ ಎನಿಸಿಕೊಳ್ಳುವುದಿಲ್ಲ. ಆದರೆ ಬಿಜೆಪಿಯವರು ಮತಕ್ಕಾಗಿ ಧ್ರುವೀಕರಣ ಮಾಡುತ್ತಿದ್ದಾರೆ. ನಾವು ಏನೇ ಮಾಡಿದರೂ ಅದನ್ನು ತುಷ್ಟೀಕರಣ ಎನ್ನುವಂತೆ ಪ್ರತಿಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಖರ್ಗೆ ಹೇಳಿದರು.

ಬಿಜೆಪಿಯನ್ನು ಇಂಡಿಯಾ ಕೂಟ ತಡೆಯಲಿದೆ: ನಮ್ಮ ಪರ ಬೆಂಬಲ  ಗುಪ್ತಗಾಮಿನಿಯಾಗಿದೆ. ಕಾಂಗ್ರೆಸ್‌ ಮತ್ತು ಇಂಡಿಯಾ ಒಕ್ಕೂಟವು ಬಿಜೆಪಿ ಬಹುಮತ ಪಡೆಯುವುದನ್ನು ತಡೆಯಲಿದೆ ಎಂದು ಹೇಳಿದರು.

Advertisement

ಮೋದಿ “ಸುಳ್ಳಿನ ಸರದಾರ’: ಖರ್ಗೆ

ಜಗಾಧರೀ: ಪ್ರಧಾನಿ ನರೇಂದ್ರ ಮೋದಿ “ಸುಳ್ಳಿನ ಸರದಾರ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಹರ್ಯಾಣದಲ್ಲಿ ಮೊದಲ ಬಾರಿಗೆ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ನಾನು ಯಾರನ್ನೂ ಅವಹೇಳನ ಮಾಡುವುದಿಲ್ಲ. ನಾನು ಮೋದಿ ವಿರೋಧಿ ಅಲ್ಲ. ಆದರೆ, ಅವರ ಸಿದ್ಧಾಂತ ವಿರೋಧಿಸುತ್ತೇನೆ. ಕಾಂಗ್ರೆಸ್‌ ಆರ್‌ಎಸ್‌ಎಸ್‌ನ ವೈಚಾರಿಕತೆ ವಿರೋಧಿಸುತ್ತದೆ. ಮೋದಿ ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದ್ದಾರೆ, ನಾವು ಅದರ ವಿರುದ್ಧ ಹೋರಾಡುತ್ತಿದ್ದೇವೆ. ಜನರ ಹಾಗೂ ಮೋದಿ, ಬಿಜೆಪಿ ನಡುವೆ ಈಗಿನ ಹೋರಾಟ ನಡೆಯುತ್ತಿದೆ. ಬಿಜೆಪಿ ಆಡಳಿತಕ್ಕೆ ಜನ ರೋಸಿ ಹೋಗಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next