ಮುಂಬಯಿ: ಈ ಸೀಸನ್‌ನ ಮೊದಲಾರ್ಧದಲ್ಲಿ ಭಾರೀ ಭರವಸೆ ಮೂಡಿಸಿದ್ದ ಆರ್‌ಸಿಬಿ, ದ್ವಿತೀಯಾರ್ಧದಲ್ಲಿ ಸೋಲುವುದನ್ನೇ ಹವ್ಯಾಸವನ್ನಾಗಿ ಮಾಡಿಕೊಂಡಂತಿದೆ. ಮೊದಲ 7 ಪಂದ್ಯಗಳಲ್ಲಿ ಐದನ್ನು ಜಯಿಸಿದ್ದನ್ನು ಕಂಡಾಗ ಆರ್‌ಸಿಬಿಯ ಹಣೆಬರಹ ಬದಲಾಯಿತೆಂದೇ ಭಾವಿಸಲಾಗಿತ್ತು.
ಆದರೆ ಡು ಪ್ಲೆಸಿಸ್ ಪಡೆ ಈಗ ಹ್ಯಾಟ್ರಿಕ್ ಸೋಲಿನ ಸುಳಿಗೆ ಸಿಲುಕಿದೆ. ಉಳಿದಿರುವುದು ಕೇವಲ 4 ಪಂದ್ಯ. ಇವೆಲ್ಲವನ್ನೂ ದೊಡ್ಡ ಅಂತರದಲ್ಲಿ ಗೆದ್ದರಷ್ಟೇ ಆರ್‌ಸಿಬಿ ಟಾಪ್-4ರಲ್ಲಿ ಕಾಣಿಸಿಕೊಂಡು ಮುಂದಿನ ಸುತ್ತು ಪ್ರವೇಶಿಸಲಿದೆ ಎಂಬುದು ಸದ್ಯದ ಲೆಕ್ಕಾಚಾರ.
ಗುಜರಾತ್ ವಿರುದ್ಧ ಜಯ ಸಾಧಿಸಿದ್ದೇ ಆದರೆ ಆರ್‌ಸಿಬಿಯ ಮುಂದಿನ ಹಾದಿ ಸುಗಮಗೊಳ್ಳುತ್ತಿತ್ತು. ಆದರೆ ನಾಯಕ ಡು ಪ್ಲೆಸಿಸ್ ಹೇಳಿದಂತೆ, ಇಲ್ಲಿ ದೊಡ್ಡ ಮೊತ್ತ ದಾಖಲಿಸಲಾಗದೇ ಸೋಲು ಕಾಣಬೇಕಾಯಿತು. “ನಮ್ಮ ಆರಂಭ ಉತ್ತಮವಾಗಿಯೇ ಇತ್ತು. ಮಧ್ಯಮ ಕ್ರಮಾಂಕದಲ್ಲಿ ಸಾಕಷ್ಟು ರನ್ ಬರಲಿಲ್ಲ.
ಹೀಗಾಗಿ 10-15 ರನ್ ಕೊರತೆ ಕಾಡಿತು. ಹಿಂದಿನೆರಡು ಪಂದ್ಯಗಳಲ್ಲಿ ತೀರಾ ಕಳಪೆ ಬ್ಯಾಟಿಂಗ್ ನಡೆಸಿದ್ದರಿಂದ ಒಮ್ಮೆಲೇ ಬೃಹತ್ ಮೊತ್ತ ಗಳಿಸುವುದು ಸುಲಭವಲ್ಲ. ಹಾಗೆಯೇ ನಮ್ಮ ಬೌಲಿಂಗ್ ಕೂಡ ಆರಂಭದಲ್ಲಿ ಗಮನಾರ್ಹ ಮಟ್ಟದಲ್ಲಿತ್ತು. ಬಳಿಕ ಗುಜರಾತ್ ಬ್ಯಾಟರ್ ಎಂದಿನ ಲಯ ಕಂಡುಕೊಂಡರು. ಚೇಸಿಂಗ್ ಸುಲಭವಾಗಿ ಪರಿಣಮಿಸಿತು’ ಎಂದು ಡು ಪ್ಲೆಸಿಸ್ ಹೇಳಿದರು.
ಆರ್‌ಸಿಬಿ ಇನ್ನು ಚೆನ್ನೈ (ಮೇ 4), ಹೈದರಾಬಾದ್ (ಮೇ 8), ಪಂಜಾಬ್ (ಮೇ 13) ಮತ್ತು ಗುಜರಾತ್ (ಮೇ 19) ವಿರುದ್ಧ ಆಡಬೇಕಿದೆ. ಇವೆಲ್ಲವನ್ನೂ ಗೆಲ್ಲುವುದಷ್ಟೇ ಅಲ್ಲ, ರನ್‌ರೇಟನ್ನೂ ಹೆಚ್ಚಿಸಿಕೊಳ್ಳಬೇಕಿದೆ. ಸದ್ಯ -0.558 ರನ್‌ರೇಟ್ ಹೊಂದಿದೆ.
ಗುಜರಾತ್ ಜನರಿಗೆ ಅರ್ಪಣೆ
ರವಿವಾರ “ಗುಜರಾತ್ ಡೇ’ ಆಗಿರುವುದರಿಂದ ಈ ಗೆಲುವನ್ನು ಗುಜರಾತ್ ಜನರಿಗೆ ಅರ್ಪಿಸುವುದಾಗಿ ಹೇಳಿದವರು ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ.
9ರಲ್ಲಿ 8 ಪಂದ್ಯಗಳನ್ನು ಗೆದ್ದು 16 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿರುವ ಗುಜರಾತ್ ಮೊದಲ ಪ್ರವೇಶದಲ್ಲೇ ಪ್ಲೇ ಆಫ್ ಬಾಗಿಲಲ್ಲಿ ನಿಂತಿದೆ. ಇನ್ನೊಂದು ಪಂದ್ಯ ಗೆದ್ದರೆ ತಂಡದ ಮುಂದಿನ ಸುತ್ತು ಅಧಿಕೃತಗೊಳ್ಳಲಿದೆ.