ಬೆಂಗಳೂರು ಅಂದಾಕ್ಷಣ ಏನೊ ಒಂಥರ ಸೆಳೆತ. ಈ ಮಾಯಾನಗರಿ ಸೊಬಗನ್ನು ಟಿ.ವಿಯಲ್ಲಿ ನೋಡಿದವರಿಗೆ ಇದನ್ನು ನೋಡಬೇಕೆಂದು, ಅಲ್ಲಿ ಜೀವನ ನಡೆಸಿದರೆ ಎಷ್ಟೊಂದು ಚಂದ ಅಂತ ಅನಿಸುವುದು ಸಹಜ. ದೆಹಲಿ, ಮುಂಬೈಯಂಥ ನಗರದಲ್ಲಿ ಇರುವವರೂ ಕೂಡ ಬೆಂಗಳೂರ ಬದುಕನ್ನು ಇಷ್ಟಪಡುತ್ತಾರೆ. ಅಂಥದರಲ್ಲಿ ನನ್ನಂಥ ಹಳ್ಳಿಯಲ್ಲಿ ಜನಿಸಿದವಳಿಗೆ ಒಮ್ಮೆಯಾದರೂ ಇಲ್ಲಿಗೆ ಹೋಗಿ ಬರಬೇಕೆಂಬ ಆಸೆ ಉಂಟಾಗುವುದು ಆಶ್ಚರ್ಯವೇನಲ್ಲ.
ಈ ಎಲ್ಲ ಕನಸುಗಳನ್ನು ಹೊತ್ತು ಬೆಂಗಳೂರಿಗೆ ಬಂದೆ. ಅಲ್ಲಿ ನಡೆದ ಸುಮಾರು ಎರಡು ವರ್ಷದ ಹಿಂದಿನ ಘಟನೆ ಇದು. ಈ ಮಾಯನಗರಿಯಲ್ಲಿ ಪ್ರತಿ ದಿನವು, ಪ್ರತಿಕ್ಷಣವು ಗಾಲಿ ಯಂತ್ರಗಳಂತೆ ಜೀವನ ನಡೆಸಬೇಕು. ಪ್ರತಿ ಕ್ಷಣವು ಮೈಯಲ್ಲ ಕಣ್ಣಾಗಿದ್ದರೆ ಮಾತ್ರ ಇಲ್ಲಿ ಬಾಳ ಬಂಡಿ ಹೂಡಲು ಸಾಧ್ಯ ಅನ್ನೋದು ತಿಳಿದದ್ದೇ ಬೆಂಗಳೂರು ಸೇರಿದ ಮೇಲೆ. ಆವತ್ತು ಎಂದಿನಂತೆ ಕಾಲೇಜು ಮುಗಿಸಿ ಮನೆಗೆ ಹಿಂತಿರುಗುವ ವೇಳೆ ರಸ್ತೆ ದಾಟುತ್ತಿದ್ದೆ. ಯಾರೋ ಒಬ್ಬ ಬೈಕ್ ಸವಾರ ನೋಡ ನೋಡುತ್ತಿದ್ದಂತೆ ಜೋರಾಗಿ ಬಂದು ಗುದ್ದಿಯೇ ಬಿಟ್ಟ. ಆತನು ಗುದ್ದಿದ ರಭಸಕ್ಕೆ ರಸ್ತೆ ಬದಿಯಲ್ಲಿದ್ದ ಕಲ್ಲಿಗೆ ನನ್ನ ತಲೆ ಬಡಿಯಿತು. ತಕ್ಷಣ ರಕ್ತ ಸುರಿದದ್ದು ಮಾತ್ರ ನೆನಪು. ಜ್ಞಾನ ತಪ್ಪಿತು. ಎಷ್ಟೋ ಹೊತ್ತಿನ ನಂತರ ಮಂಪರು, ಮಂಪರಾಗಿ ಕಾಣ ತೊಡಗಿತು. ಅಷ್ಟರಲ್ಲಿ ಸುತ್ತ ಒಂದಷ್ಟು ಜನಗಳ ಗುಂಪು ಇದ್ದದ್ದು ನೆನಪು. ಅದರಲ್ಲಿ ಒಬ್ಬರು “ಪಾಪ, ಆಕೆಗೆ ನೀರು ಕೊಡಿ’ ಅನ್ನುತ್ತಿದ್ದಾರೆ. “ಅಯ್ಯೋ, ರಕ್ತ ಜಾಸ್ತಿ ಹೋಗ್ತಿದೆ’ ಅಂತ ಇನ್ನೊಂದಷ್ಟು ಜನ ಅವರವರಲ್ಲೇ ಪೇಚಾಡಿಕೊಳ್ಳುತ್ತಿದ್ದಾರೆ.
ಆದರೆ, ಯಾರೂ ಕೂಡ ಸಹಾಯ ಮಾಡಲು ಮುಂದೆ ಬರುತ್ತಿಲ್ಲ. ನನಗೋ ಜ್ಞಾನ ಬೇರೆ ಬಂದಿದೆ. ಸಿಕ್ಕಾಪಟ್ಟೆ ನೋವಿನ ಅರಿವಾಗುತ್ತಿದೆ. ತಡೆಯೋದಕ್ಕೆ ಆಗ್ತಿಲ್ಲ. ಅವರು ಪೇಚಾಟಗಳು ನನ್ನ ನೋವನ್ನೇನು ಕಡಿಮೆ ಮಾಡ್ತಿಲ್ಲ ಅನ್ನೋ ಸತ್ಯ ಕೂಡ ಅಲ್ಲಿದ್ದವರಿಗೆ ತಿಳಿಯುತ್ತಿಲ್ಲ. ದೇವರೆ ಏನಪ್ಪ ಮಾಡೋದು ಅಂತ ಅಂದುಕೊಳ್ಳುವ ಹೊತ್ತಿಗೇ, ಗುಂಪಿನ ಮಧ್ಯೆಯಿಂದ ಕಾಕಿ ಬಣ್ಣದ ಷರಟು ಧರಿಸಿದ ವ್ಯಕ್ತಿ ಬಂದ. ಏನಾಗಿದೆ, ಈಕೆ ಯಾಕೆ ಈ ರೀತಿ ಬಿದ್ದಿದ್ದಾಳೆ ಅಂತ ಯಾರನ್ನೂ, ಏನೂ ಕೇಳದೆ. ಎಲ್ಲವೂ ಗೊತ್ತಿದೆ ಅನ್ನೋ ರೀತಿ ನನ್ನ ಎತ್ತಿಕೊಂಡು ಸುಮಾರು ಒಂದು ಕಿ.ಲೋ ಮೀಟರ್ ದೂರದಲ್ಲಿ ಆಸ್ಪತ್ರೆಗೆ ಸೇರಿಸಿದ. ಅಲ್ಲಿ ನನಗೆ ಚಿಕಿತ್ಸೆ ಕೊಡಿಸಿ. ಮನೆಯವರಿಗೆ ಫೋನ್ ಮಾಡಿ ವಿಷಯ ತಿಳಿಸಿ, ಅವರು ಬರುತ್ತಿರುವುದರ ಬಗ್ಗೆ ಖಾತ್ರಿ ಮಾಡಿಕೊಂಡು ಅಲ್ಲಿಂದ ಹೊರಟ.
ಆವತ್ತು ಆ ಆಟೋ ಡ್ರೈವರ್ ದೇವರಂತೆ ಬರದೇ ಇದ್ದಿದ್ದರೆ, ಜನರ ಮಧ್ಯೆಯೇ ನಾನು ಒದ್ದಾಡಿಕೊಂಡು ಇರಬೇಕಾಗಿತ್ತು. ಆವತ್ತು ಆಟೋ ಡ್ರೈವರ್ ಹೆಸರೇನು, ಎಲ್ಲಿಂದ ಬಂದರು ಯಾವ ವಿವರವೂ ಕೊಡಲಿಲ್ಲ. ನಾನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಇಂದು ಆತ ಎಲ್ಲಿದ್ದರೂ ಹೇಗಿದ್ದರೂ ಚೆನ್ನಾಗಿರಲಿ. ನನಗೆ ಮರು ಜನ್ಮ ನೀಡಿದ ಆತನಿಗೆ ದೊಡ್ಡ ಸಲಾಮ್.
ವೈಸಿರಿ ಗೌಡ