ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯಪಾಲರು ಆತುರವಾಗಿ ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ.
ರಾಜ್ಯಪಾಲರ ಮೇಲೆ ಬೇರೆ ಒತ್ತಡ ಇರಬಹುದು. ಆ ರೀತಿಯ ಅನುಮಾನಗಳು ನಮಗೆ ಬಂದಿವೆ. ರಾಜ್ಯಪಾಲರು ಏನೇ ನಿರ್ಧಾರ ಕೈಗೊಳ್ಳಲಿ. ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ಘೋಷಿಸಿದ್ದಾರೆ.
ಪತ್ರಕರ್ತರ ಜತೆ ಮಾತನಾಡಿ, ನಾವು ಕಾನೂನಾತ್ಮಕ ಹೋರಾಟ ಮಾಡಿ ನ್ಯಾಯಾಂಗದ ಬಾಗಿಲು ತಟ್ಟಬೇಕಾಗುತ್ತದೆ. ರಾಜ್ಯಪಾಲರಿಗೆ ನೋಟಿಸ್ ನೀಡುವ ಅಧಿಕಾರವಿದೆ. ಆದರೆ ಅವರು ಅದನ್ನು ದಾಖಲೆ ಸಮೇತ ಸಮರ್ಥಿಸಬೇಕು. ನಾವು ರಾಜ್ಯಪಾಲರಿಗೆ ನಿಮ್ಮಿಂದ ತಪ್ಪಾಗಿದೆ ಅಂತ ಮನವರಿಕೆ ಮಾಡಿಕೊಡುತ್ತೇವೆ. ಅವರು ಸಂವಿಧಾನ ಬದ್ಧ ಅಧಿಕಾರವನ್ನು ಸರಿಯಾಗಿ ಬಳಸಬೇಕು. ಯಾವ ಆಧಾರದಲ್ಲಿ ಪ್ರಾಸಿಕ್ಯೂಷನ್ ಕೊಡುತ್ತಾರೆ ಎಂಬುದು ಬೇಕಲ್ಲ? ನಾವು ಸ್ಪಷ್ಟೀಕರಣ ಕೊಟ್ಟ ಬಳಿಕವೂ ಅನುಮತಿಸಿದರೆ ಅದನ್ನು ಅವರು ಸಮರ್ಥಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಒಳ ಮೀಸಲಾತಿ ನೀಡಲು ಪ್ರಯತ್ನ
ಒಳ ಮೀಸಲಾತಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡುವ ಮೂಲಕ ಒಳ ಮೀಸಲಾತಿ ಗೊಂದಲ ಬಗೆಹರಿಸಿದೆ. ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಸದಾಶಿವ ಆಯೋಗದ ವರದಿ ಜಾರಿ ಬಗ್ಗೆ ಚರ್ಚಿಸುತ್ತೇವೆ. ಒಳ ಮೀಸಲಾತಿ ನೀಡಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.