ಹಾಸನ: ನಗರದ ಹೊಯ್ಸಳ ನಗರ ಬಡಾವಣೆಯಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಆಸೀಫ್ ತನ್ನ ಸ್ನೇಹಿತ ಶರಾಫತ್ ಆಲಿಯನ್ನು ಕೊಲೆಗೈದು ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.
ಶರಾಫತ್ ಆಲಿಗೆ ಮೊದಲು ಗುಂಡು ಹಾರಿಸಿದ ಆಸೀಫ್ ನಂತರ ತಾನು ಕಾರಿನಲ್ಲಿ ಕುಳಿತು ಗುಂಡು ಹಾರಿಸಿಕೊಂಡಿದ್ದಾನೆ. ಬೇರೆಯವರು ಇಬ್ಬರನ್ನು ಹತ್ಯೆ ಮಾಡಿದ್ದರೆ ಹತ್ಯೆಗೆ ಬಳಸಿದ ಆಯುಧವನ್ನು ಬಿಟ್ಟು ಹೋಗುತ್ತಿರಲಿಲ್ಲ. ಆದರೆ ಇಲ್ಲಿ ಆಯುಧ ಅಲ್ಲಿಯೇ ಇತ್ತು ಎನ್ನಲಾಗುತ್ತಿದೆ.
ಮೃತರಿಬ್ಬರೂ ಹಾಸನ ಮೂಲದವರಲ್ಲ, ಬದಲಿಗೆ ಹಾಸನದ ಕುಟುಂಬಗಳ ಅಳಿಯಂದಿರು. ಶುಂಠಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಪಾಲುದಾರರಾಗಿದ್ದರು. ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದರು.
ಇಂದು ಹಾಸನ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನಿವೇಶನವೊಂದರ ನೋಂದಣಿಯಿತ್ತು. ಆ ವ್ಯವಹಾರದಲ್ಲಿ ಇಬ್ಬರೂ ಪಾಲುದಾರರಾಗಿದ್ದರು. ಬೆಳಗ್ಗೆ ಶರಾಫತ್ ನಿವಾಸದಲ್ಲಿ ಇಬ್ಬರೂ ಒಟ್ಟಿಗೆ ಉಪಾಹಾರ ಸೇವಿಸಿ ಮನೆಯಿಂದ ಹೊರಟಿದ್ದರು.
ಉಪ ನೋಂದಣಾಧಿಕಾರಿ ಕಚೇರಿಗೆ ಹೋಗಬೇಕಿದ್ದ ಇಬ್ಬರೂ ನಿವೇಶನದ ಬಳಿ ಹೋಗಿದ್ದು ಏಕೆ? ಅಲ್ಲಿ ತಲೆದೋರಿದ ವೈಮನಸ್ಯ ಏನು ಎನ್ನುವುದು ಬೆಳಕಿಗೆ ಬರಬೇಕಿದೆ.
ಇದನ್ನೂ ಓದಿ: Madikeri: ಕುಸಿದು ಬಿದ್ದ ಹಳೆಯ ಕಟ್ಟಡ.. ಅವಶೇಷಗಳಡಿ ಮೂವರು ಸಿಲುಕಿರುವ ಶಂಕೆ, ಮೂವರ ರಕ್ಷಣೆ