ಗುಂಡ್ಲುಪೇಟೆ: ಕೋವಿಡ್ ಸೋಂಕಿತ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಹಿನ್ನೆಲೆ ಆಕೆಯ ಸಂಬಂಧಿಕರು ಆಸ್ಪತ್ರೆಗೆ ಧಾವಿಸಿಸಿ ದಾಂಧಲೆ ನಡೆಸಿರುವ ಘಟನೆ ಗುರುವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜರುಗಿದೆ.
ಪಟ್ಟಣದ ನಿವಾಸಿ ಗಂಗಮ್ಮ (52) ಕೊರೊನಾ ದಿಂದ ಬುಧವಾರ ತಡರಾತ್ರಿ ಮೃತರಾದರು. ಇದರ ಪರಿಣಾಮ ಸಂಬಂಧಿಕರು ಆಸ್ಪತ್ರೆಗೆ ಆಗಮಿಸಿ, ಸರಿ ಯಾದ ಚಿಕಿತ್ಸೆ ನೀಡಿಲ್ಲ, ಆಕ್ಸಿಜನ್ ವ್ಯವಸ್ಥೆ ಮಾಡಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಗಿರೀಶ್ ಎಂಬಾತ ಆಕ್ಸಿಜನ್ ಸಿಲಿಂಡರ್ ನಿಂದ ಹಲ್ಲೆಗೆ ಯತ್ನಿಸಿ ಆಸ್ಪತ್ರೆಯ ಕಿಟಕಿಯ ಗಾಜನ್ನು ಹೊಡೆದು ಹಾಕಿ ಗಲಾಟೆ ಮಾಡಿದ್ದು, ಕಿಟಕಿಗೆ ಹೊಡೆದ ರಭಸಕ್ಕೆ ಗಿರೀಶ್‌ಗೆ ಕೈಗೆ ಗಾಜು ಚುಚ್ಚಿ ತೀವ್ರ ರಕ್ತಸ್ರಾವವಾಗಿದೆ. ಆತನನ್ನು ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರಕ್ಕೆ ಕರೆದೊಯ್ಯಲಾಗಿದೆ.
ಕರ್ತವ್ಯದಿಂದ ಹೊರ ನಡೆದ ವೈದ್ಯರು, ಸಿಬ್ಬಂದಿ: ಘಟನೆಯಿಂದ ವೈದ್ಯರು, ಸಿಬ್ಬಂದಿ ಆತಂಕಗೊಂಡು ಕರ್ತವ್ಯ ನಿರ್ವಹಿಸುವುದಿಲ್ಲ. ನಾವು ಅವರನ್ನು ಆದಷ್ಟು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದೇವೆ. ಆದರೆ, ಇದನ್ನು ತಿಳಿಯದೆ ನಮ್ಮ ಮೇಲೆ ಹಲ್ಲೆ ಮಾಡಲು ಮುಂದಾದರೆ ಹೇಗೆ ನಮಗೆ ರಕ್ಷಣೆ ಇಲ್ಲದ ಮೇಲೆ ಏಕೆ ಕರ್ತವ್ಯ ನಿರ್ವಸಬೇಕು ಎಂದು ಆಸ್ಪತ್ರೆಯಿಂದ ಹೊರ ನಡೆದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರವಿಶಂಕರ್, ಪೊಲೀಸ್ ಇನ್ಸ್‌ಪೆಕ್ಟರ್ ಮಹದೇವಸ್ವಾಮಿ, ಸಬ್ ಇನ್ಸ್‌ಪೆಕ್ಟರ್ ರಾಜೇಂದ್ರ ಮಧ್ಯ ಪ್ರವೇಶಿಸಿ ಪರಿಸ್ಥಿತಿ ಯನ್ನು ತಿಳಿಗೊಳಿಸಿ ಆಸ್ಪತ್ರೆಯ ಸಿಬ್ಬಂದಿಯನ್ನು ಸಮಾಧಾನಪಡಿಸಿದರು. ನಂತರ ಕರ್ತವ್ಯಕ್ಕೆ ಹಾಜ ರಾಗುವಂತೆ ಮನವಿ ಮಾಡಿದ ಹಿನ್ನೆಲೆ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಘಟನೆ ನಂತರ ಮಹಿಳೆ ಮೃತ ದೇಹವನ್ನು ಅವರ ಜಮೀನಿಗೆ ರವಾನಿಸಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ದೂರು ನೀಡಿದರೆ ಕ್ರಮ: ಘಟನೆ ಸಂಬಂಧ ಪ್ರತಿ ಕ್ರಿಯಿಸಿರುವ ಸಬ್‌ಇನ್ಸ್‌ಪೆಕ್ಟರ್ ಜೆ.ರಾಜೇಂದ್ರ, ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿ ಕಿಟಕಿ ಗಾಜುಗಳನ್ನು ಹೊಡೆದು ಹಾಕಿದ ವ್ಯಕ್ತಿ ಕೈಗೆ ಗಾಯ ವಾಗಿದ್ದು, ಸದ್ಯ ಚಾಮರಾಜನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತನ ಮೇಲೆ ಆಸ್ಪತ್ರೆ ಸಿಬ್ಬಂದಿ ದೂರು ನೀಡಿಲ್ಲ. ದೂರು ನೀಡಿದರೆ ದಾಖ ಲಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.