Advertisement

ಬೆಟ್ಟದ ಜೀವ…ದಿನವೂ ಬೆಟ್ಟವೇರುತಾನೆ ಹಸನ್ಮುಖಿ ರಾಮಿ ಮಾಮ

10:10 AM Feb 09, 2020 | mahesh |

ಮೇಲುಕೋಟೆಯ ಮೆಟ್ಟಿಲೇರಲು ಕೈ-ಕಾಲುಗಳು ಗಟ್ಟಿಯಿರಬೇಕು ಎಂಬ ಮಾತಿದೆ. ಯೋಗಾನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದವರಿಗೆ, ಈ ಮಾತು ಅನುಭವವೇದ್ಯ. ಆದರೆ, ರಾಮಿ ಮಾಮ ದಿನಕ್ಕೆ 2-3 ಬಾರಿಯಾದರೂ ಈ ಮೆಟ್ಟಿಲುಗಳನ್ನು ಸರಸರನೆ ಇಳಿದು, ಹತ್ತಿ ಮಾಡುತ್ತಾರೆ. ಅದೂ, ಖಾಲಿ ಕೈಯಲ್ಲಲ್ಲ, ಹೆಗಲ ಮೇಲೆ ನೀರು ತುಂಬಿದ ಬಿಂದಿಗೆ ಹೊತ್ತು…

Advertisement

ಮೇಲುಕೋಟೆಯ ಅತಿ ಮುಖ್ಯ ಆಕರ್ಷಣೆಗಳು ಮೂರು. ಅಲ್ಲಿನ ಕಲ್ಯಾಣಿ, ಯೋಗಾನರಸಿಂಹ ಸ್ವಾಮಿ ಮತ್ತು ಚೆಲುವರಾಯಸ್ವಾಮಿ ದೇವಾಲಯ. ಮೇಲುಕೋಟೆಯಲ್ಲಿ ಗಂಗೆಯೂ ಪ್ರಮುಖ ದೇವತೆ. ಹಾಗಾಗಿ, ಭಕ್ತಾದಿಗಳೆಲ್ಲ ಮೊದಲು ಕಲ್ಯಾಣಿಗೆ ಹೋಗುತ್ತಾರೆ. ಅಲ್ಲಿ ಗಂಗೆಗೆ ಪೂಜೆ ಸಲ್ಲಿಸಿ ನಂತರ ಯೋಗಾ ನರಸಿಂಹ ಸ್ವಾಮಿಯನ್ನು ನೋಡಲೆಂದು ಬೆಟ್ಟ ಹತ್ತಲು ಆರಂಭಿಸುತ್ತಾರೆ.

ಯೋಗಾನರಸಿಂಹ ಸನ್ನಿಧಿ ತಲುಪಲು 400ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಬೇಕು. ಮೆಟ್ಟಿಲುಗಳ ಗಾತ್ರ ದೊಡ್ಡದಿರುವ ಕಾರಣ, 50 ಮೆಟ್ಟಿಲು ಹತ್ತಿ ಮುಗಿಸುವಷ್ಟರಲ್ಲಿಯೇ “ಉಸ್ಸಪ್ಪಾ’ ಎಂದು ಏದುಸಿರು ಬಿಡುವಂತಾಗುತ್ತದೆ. ಎಷ್ಟೇ ಕಟ್ಟುಮಸ್ತಿನ ಆಸಾಮಿ ಅಂದರೂ, ನೂರು ಮೆಟ್ಟಿಲು ಹತ್ತುವಷ್ಟರಲ್ಲಿ ಅವರಿಗೂ ಆಯಾಸ ಜೊತೆಯಾಗುತ್ತದೆ. ಉಫ್, ಉಫ್… ಎನ್ನುತ್ತಲೇ ಮೆಟ್ಟಿಲೇರುತ್ತ, ಎರಡೂ ಬದಿಯಲ್ಲಿರುವ ಕಂಬಿಗಳನ್ನು ಹಿಡಿದುಕೊಂಡು ಪ್ರಯಾಸದಿಂದಲೇ ಹೆಜ್ಜೆ ಮುಂದಿಡುತ್ತಾ, ಐದು ನಿಮಿಷ ರೆಸ್ಟ್‌ ತಗೊಳ್ಳೋದಾ ಎಂದು ಯೋಚಿಸುತ್ತಲೇ ಮತ್ತೂ ಹತ್ತು ಮೆಟ್ಟಿಲೇರಿ ಕಡೆಗೊಮ್ಮೆ, ಉಸ್ಸಪ್ಪಾ ಅನ್ನುತ್ತಾ ಕೂತೇ ಬಿಡುತ್ತಾರಲ್ಲ; ಆಗಲೇ ಹೆಗಲ ಮೇಲೆ ಕಂಚಿನ ಬಿಂದಿಗೆಯೊಂದನ್ನು ಹೊತ್ತುಕೊಂಡು ಈ ಅಜ್ಜ ಒಂದೊಂದೇ ಮೆಟ್ಟಿಲು ಇಳಿಯತೊಡಗುತ್ತಾನೆ! ಆತನ ಕಂಗಳಲ್ಲಿ ಅದೇನೋ ಆಪ್ತಭಾವ, ತುಟಿಯಂಚಿನಲ್ಲಿ, ಕಂಡೂ ಕಾಣದಂಥ ಕಿರು ನಗೆ.

ಏದುಸಿರು ಬಿಡುತ್ತಲೇ ಬೆಟ್ಟ ಹತ್ತುವವರನ್ನು, ದೇವ ಕಣಗಿಲೆ ಮರದ ನೆರಳಿನಲ್ಲಿ ದಣಿವಾರಿಸಿಕೊಳ್ಳುವವರನ್ನು ನೋಡುತ್ತಾ ಈತ ಕೇಳುತ್ತಾನೆ: “ತುಂಬಾ ಆಯಾಸ ಆಗಿಬಿಡ್ತಾ? ಈಗಾಗ್ಲೆ ಅರ್ಧ ಬೆಟ್ಟ ಹತ್ತಿದ್ದೀರ. ಇನ್ನೊಂದಿಪ್ಪತ್ತು ನಿಮಿಷ ಅಷ್ಟೆ. ಗೋವಿಂದಾ ಅಂದ್ಕೊಂಡು ಒಂದೊಂದೇ ಮೆಟ್ಟಿಲು ಹತ್ತಿಬಿಡಿ…’

ಹೀಗೆ ಹೇಳುತ್ತಲೇ ಈ ಅಜ್ಜ, ಬೆಟ್ಟದ ಮಧ್ಯೆಯಿರುವ ಪುಷ್ಕರಣಿಗೂ ಅಥವಾ ಅದಕ್ಕಿಂತ ದೂರದಲ್ಲಿರುವ ಕಲ್ಯಾಣಿಗೋ ಹೋಗಿ, ಬಿಂದಿಗೆಯಲ್ಲಿ ನೀರು ತುಂಬಿಸಿಕೊಂಡು, ಅದನ್ನು ಹೆಗಲ ಮೇಲಿಟ್ಟುಕೊಂಡು, ಹರಿನಾಮವನ್ನು ಗುನುಗುತ್ತಾ ಸರಸರನೆ ಒಂದೊಂದೇ ಮೆಟ್ಟಿಲೇರತೊಡಗುತ್ತಾನೆ. ಉಹುಂ, ಬೆಟ್ಟದ ತುದಿ ತಲುಪುವವರೆಗೂ ಆತ ವಿಶ್ರಮಿಸುವುದಿಲ್ಲ. ಉಸ್ಸಪ್ಪಾ… ಅನ್ನುವುದೂ ಇಲ್ಲ! ಆತನ ತುಟಿಯಂಚಿನ ಕಿರುನಗೆ, ಯಾವ ಸಂದರ್ಭದಲ್ಲೂ ಮಾಸುವುದೂ ಇಲ್ಲ. ವರ್ಷದಲ್ಲಿ ಮೂರ್ನಾಲ್ಕು ಬಾರಿ ಮೇಲುಕೋಟೆಗೆ ಹೋದವರಿಗೆ, ಈ ಅಜ್ಜ ಖಂಡಿತಾ ಪ್ರತಿ ಬಾರಿಯೂ ಕಾಣಿಸಿರುತ್ತಾನೆ.

Advertisement

ಅಂದಹಾಗೆ, ಇವರ ಹೆಸರು ರಾಮಸ್ವಾಮಿ ಅಯ್ಯಂಗಾರ್‌. ವಯಸ್ಸು 65. ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ದೇವರಿಗೆ ನೈವೇದ್ಯ ತಯಾರಿಸುವ ಕೆಲಸ ಮಾಡಿಕೊಂಡಿರುವ ರಾಮಸ್ವಾಮಿ, ನೀರು ತರುವ ನೆಪದಲ್ಲಿ ದಿನಕ್ಕೆ ನಾಲ್ಕೈದು ಬಾರಿಯಾದರೂ, ಖಾಲಿ ಕೊಡದೊಂದಿಗೆ ಬೆಟ್ಟ ಇಳಿದು, ತುಂಬಿದ ಕೊಡದೊಂದಿಗೆ ಬೆಟ್ಟ ಹತ್ತುತ್ತಾರೆ. ಈ ಅರವತ್ತೈದನೇ ವಯಸ್ಸಿನಲ್ಲೂ ಅವರದು ಉಕ್ಕಿನಂಥ ದೇಹ. (ಮತ್ತು ಮಗುವಿನಂಥ ಮನಸ್ಸು) ಮೂರ್ನಾಲ್ಕು ದಶಕಗಳಿಂದಲೂ ದೇವಾಲಯದಲ್ಲಿ ನೈವೇದ್ಯ ತಯಾರಿಸುವ ಅಡುಗೆಯವರಾಗಿ ಕೆಲಸ ಮಾಡುತ್ತಿರುವ ರಾಮಸ್ವಾಮಿ ಅಯ್ಯಂಗಾರ್‌ ಅವರನ್ನು ಸ್ಥಳೀಯರು “ಫ್ಯಾಂಟಮ್‌’ ಎಂದೇ ಪ್ರೀತಿಯಿಂದ ಕರೆಯುತ್ತಾರೆ. ಒಂದು ದಿನವೂ ನಿಯಮ ತಪ್ಪದಂತೆ ತುಂಬಿದ ಕೊಡ ಹೊತ್ತು, ಸರಸರನೆ ಮೆಟ್ಟಿಲೇರುತ್ತಾರಲ್ಲ; ಅದೇ ಕಾರಣಕ್ಕೆ ಅವರಿಗೆ “ಫ್ಯಾಂಟಮ್‌’ ಎಂಬ ಹೆಸರು ಅಂಟಿಕೊಂಡಿದೆ. ಯೋಗಾನರಸಿಂಹ ದೇವಾಲಯದ ಗರ್ಭಗುಡಿಯ ಸಮೀಪದಲ್ಲೇ ನೈವೇದ್ಯ ಹಾಗೂ ತಿಂಡಿ ತಯಾರಿಸುವ ಪಾಕಶಾಲೆಯಿದೆ. ಅದೇ ರಾಮಸ್ವಾಮಿಯವರ ಕರ್ಮಭೂಮಿ.

ಕಲಾಮೇಘಂ ಕುಟುಂಬಕ್ಕೆ ಸೇರಿದವರಾದ ರಾಮಸ್ವಾಮಿ, ಅವಿವಾಹಿತರು. ದೇವಾಲಯದಲ್ಲಿ ಇರುವ ಜೊತೆಗಾರರು, ಬಂಧುಗಳು ಹಾಗೂ ಪರಿಚಯದವರೆಲ್ಲಾ ಅವರನ್ನು “ರಾಮಿ ಮಾಮಾ’ ಎಂದೂ ಪ್ರೀತಿಯಿಂದ ಕರೆಯುವುದುಂಟು. ದಿನವೂ ಬೆಟ್ಟ ಹತ್ತಿ ಇಳಿಯುವುದರಲ್ಲಿ ನನಗೆ ಬಹಳ ಖುಷಿ ಸಿಗುತ್ತದೆ ಎಂದು ನಸು ನಗುತ್ತಾರೆ ರಾಮಿಮಾಮ.

ನೀವೇನಾದರೂ ಮೇಲುಕೋಟೆಗೆ ಹೋದರೆ, ರಾಮಿ ಮಾಮ ನಿಮಗೂ ಕಾಣಿಸಬಹುದು. ಸಿಕ್ಕರೆ, ಅವರನ್ನು ಮಾತನಾಡಿಸಿಕೊಂಡೇ ಬನ್ನಿ. ಕಳೆದ ನಾಲ್ಕು ದಶಕಗಳಲ್ಲಿ ಮೇಲುಕೋಟೆಯಲ್ಲಿ ಆಗಿರುವ ಅಷ್ಟೂ ಬದಲಾವಣೆಗಳನ್ನು ಕಂಡಿರುವ ರಾಮಿ ಮಾಮ, ಬಿಡುವಿದ್ದರೆ ಅದನ್ನೆಲ್ಲ ಸಂಕ್ಷಿಪ್ತವಾಗಿ ಹೇಳಿಯಾರು. ಅಷ್ಟೇ ಅಲ್ಲ; ನಿಮಗೆ ಅದೃಷ್ಟವಿದ್ದರೆ, ಪ್ರಸಾದದ ರೂಪದಲ್ಲಿ ನೈವೇದ್ಯವೂ ಸಿಗಬಹುದು. ಅದರ ಜೊತೆಗೇ ಬೋನಸ್‌ ರೂಪದಲ್ಲಿ ಮೇಲುಕೋಟೆಯ ರುಚಿರುಚಿಯಾದ ಪುಳಿಯೊಗರೆ!

ಈ ಬಾರಿ ಮೇಲುಕೋಟೆಗೆ ಹೋದರೆ, ರಾಮಿ ಮಾಮನ ಮಾತು ಕೇಳಲು ಮತ್ತು ಪುಳಿಯೋಗರೆಯ ರುಚಿ ನೋಡಲು ಮರೆಯಬೇಡಿ.

-ಪ್ರಸನ್ನ ವಿಶ್ವಾಮಿತ್ರ

Advertisement

Udayavani is now on Telegram. Click here to join our channel and stay updated with the latest news.

Next