ಬೆಂಗಳೂರು: ಹಾಸನ ಟಿಕೆಟ್ ವಿಚಾರದಲ್ಲಿ ಜೆಡಿಎಸ್‌ನಲ್ಲಿ ಬಿಕ್ಕಟ್ಟು ಮುಂದುವರಿದಿದೆ. ಅತ್ತ ಎಚ್.ಡಿ.ರೇವಣ್ಣ ಪಟ್ಟು ಸಡಿಲಿಸುತ್ತಿಲ್ಲ, ಇತ್ತ ಎಚ್.ಡಿ.ಕುಮಾರಸ್ವಾಮಿ ಹಠ ಬಿಡುತ್ತಿಲ್ಲ ಎಂಬಂತಾಗಿದೆ. ಇದರ ನಡುವೆ ಶನಿವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪದ್ಮನಾಭನಗರ ನಿವಾಸದಲ್ಲಿ ಹಾಸನ ಜಿಲ್ಲೆಯ ಶಾಸಕರು ಹಾಗೂ ಮಾಜಿ ಶಾಸಕರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು.
ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕೆಂದು ಬೆಂಬಲಿಗರು ಒತ್ತಡ ಹೇರಿದ್ದು, ಇದು ದೇವೇಗೌಡರನ್ನು ವಿಚಲಿತಗೊಳಿಸಿತು. “ದಯವಿಟ್ಟು ಯಾರೂ ಒತ್ತಡ ಹಾಕಲು ಹೋಗಬೇಡಿ. ಹಾಸನ ಗೆಲ್ಲುವುದು ನಮ್ಮ ಗುರಿ. ನನಗೆ ಹಾಸನ ರಾಜಕಾರಣ ಏನು ಎಂಬುದು 40 ವರ್ಷಗಳಿಂದ ಗೊತ್ತು. ಟಿಕೆಟ್ ತೀರ್ಮಾನ ನನಗೆ ಬಿಡಿ, ನನ್ನ ನಿರ್ಧಾರಕ್ಕೆ ಎಲ್ಲರೂ ಬೆಂಬಲ ನೀಡಿ’ ಎಂದು ಹೇಳಿದರೆನ್ನಲಾಗಿದೆ.
ಪಕ್ಷ ಉಳಿಸಿಕೊಳ್ಳಬೇಕಾಗಿದೆ, ಮುಂದೆ ಅಧಿಕಾರಕ್ಕೆ ತರಬೇಕಾಗಿದೆ. ಯಾವುದೇ ಗೊಂದಲ ಇಲ್ಲದೆ ಚುನಾವಣೆ ಎದುರಿಸಬೇಕಾಗಿದೆ. ಯಾರೂ ಬಹಿರಂಗವಾಗಿ ಮಾತನಾಡಬೇಡಿ. ಅಗತ್ಯ ಬಿದ್ದರೆ ನಾನೇ ಬಂದು ಪ್ರಚಾರ ಮಾಡುತ್ತೇನೆಂದು ಇದೇ ಸಂದರ್ಭದಲ್ಲಿ ತಾಕೀತು ಮಾಡಿದರು ಎಂದು ತಿಳಿದು ಬಂದಿದೆ. ಇನ್ನು ಒಂದೆರಡು ದಿನಗಳಲ್ಲಿ ಜೆೆಡಿಎಸ್ ಟಿಕೆಟ್ ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ನನ್ನ ನಿಲುವು ಬದಲು ಇಲ್ಲ
ಈ ಮಧ್ಯೆ, ನೆಲಮಂಗಲದಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡುವುದು ಖಚಿತ. ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ. ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿದ್ದಾರೆ.