ಹಾಸನ: ಜಿಲ್ಲೆಯಲ್ಲಿ ಆಲೂಗಡ್ಡೆ ಬಿತ್ತನೆ ಕಾರ್ಯ ಮುಂದುವರಿದಿದ್ದು, ಈವರೆಗೆ 4,884 ಹೆಕ್ಟೇರ್‌ನಲ್ಲಿ ಆಲೂಗಡ್ಡೆ ಬಿತ್ತನೆಯಾಗಿದೆ. ಹಾಸನ ಎಪಿಎಂಸಿ ಪ್ರಾಂಗಣದಲ್ಲಿ ಇದುವರೆಗೂ 48,838 ಹೆಕ್ಟೇರ್ ಬಿತ್ತನೆ ಆಲೂಗಡ್ಡೆ ಮಾರಾಟವಾಗಿದೆ. ಮೇ 11ರಂದು ಮಾರುಕಟ್ಟೆಯಲ್ಲಿ ಬಿತ್ತನೆ ಆಲೂಗಡ್ಡೆ ಮಾರಾಟ ಆರಂಭವಾಗಿದ್ದು, ಇನ್ನು ಒಂದೆರಡು ವಾರದಲ್ಲಿ ಆಲೂಗಡ್ಡೆ ಮಾರಾಟ ಮುಗಿಯಲಿದೆ.
ತೋಟಗಾರಿಕೆ ಇಲಾಖೆ ಈ ವರ್ಷ ಜಿಲ್ಲೆಯಲ್ಲಿ 11,200 ಹೆಕ್ಟೇರ್‌ನಲ್ಲಿ ಆಲೂಗಡ್ಡೆ ಬಿತ್ತನೆಯಾಗಬಹುದೆಂದು ನಿರೀಕ್ಷಿಸಿತ್ತು. ಆದರೆ ಈವರೆಗಿನ ಬಿತ್ತನೆ ಆಲೂಗಡ್ಡೆ ಮಾರಾಟ ಹಾಗೂ ಬಿತ್ತನೆಯ ಪ್ರಮಾಣವನ್ನು ಗಮನಿಸಿದರೆ ನಿಗದಿತ ಗುರಿ ಸಾಧನೆಯಾಗುವುದು ಕಷ್ಟ ಎಂಬ ಅಭಿಪ್ರಾಯ ಮೂಡುತ್ತಿದೆ. ಕಳೆದ ವರ್ಷ 9,400 ಹೆಕ್ಟೇರ್‌ನಲ್ಲಿ ಮಾತ್ರ ಆಲೂಗಡ್ಡೆ ಬಿತ್ತನೆಯಾಗಿತ್ತು. ಈ ವರ್ಷಅಷ್ಟು ಪ್ರಮಾಣವಾದರೂ ಬಿತ್ತನೆಯಾಗುವುದು ದುಸ್ತರ ಎಂದು ಹೇಳಲಾಗುತ್ತಿದೆ.
ಈ ವರ್ಷ ಸಬ್ಸಿಡಿ ಬರಲಿಲ್ಲ: ಕಳೆದ ವರ್ಷ ಆಲೂಗಡ್ಡೆ ಬಿತ್ತನೆಗೆ ಶೇ.50ರಷ್ಟು ಸಬ್ಸಿಡಿ ಸಿಕ್ಕಿತ್ತು. ಆದರೆ ಈ ವರ್ಷ ಸಬ್ಸಿಡಿಯನ್ನು ಸರ್ಕಾರ ನೀಡಿಲ್ಲ. ಈ ವರ್ಷವೂ ಸಹಾಯ ಧನ ಮುಂದುವರಿಸಬೇಕು ಜಿಲ್ಲೆಯ ಜನಪ್ರತಿನಿಧಿಗಳ ಹೋರಾಟ, ಜಿಲ್ಲಾಡಳಿತದ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ. ಇನ್ನು ಸಹಾಯ ಧನ ಸಿಗುವ ಸಾಧ್ಯತೆಯೂ ಇಲ್ಲ. ಹಾಗಾಗಿ ರೈತರು ಆಲೂಗಡ್ಡೆ ಬಿತ್ತನೆಗೆ ಹಿಂದೇಟು ಹಾಕುತ್ತಿದ್ದು, ಬಿತ್ತನೆಯ ಗುರಿ ಸಾಧನೆ ಕಷ್ಟ .
ಕಳಪೆ ಬೀಜ-ಆರೋಪ: ಬಿತ್ತನೆಯಾಗಿರುವ ಆಲೂಗಡ್ಡೆ ಮೊಳಕೆಯೊಡೆಯದೇ ಭೂಮಿ ಯಲ್ಲಿಯೇ ಕರಗುತ್ತಿದೆ. ಈ ಸಂಬಂಧ ರೈತರು ಪ್ರತಿಭಟನೆಯನ್ನು ನಡೆಸಿದ್ದು, ಕಳಪೆ ಬಿತ್ತನೆ ಬೀಜ ಪೂರೈಕೆಯಾಗಿದೆ ಎಂದು ಆರೋಪಿಸಿದ್ದರು. ಈ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಕ್ಷೇತ್ರ ಪರಿಶೀಲನೆ ನಡೆಸಲಾಗುತ್ತಿದೆ.
* ಎನ್. ನಂಜುಂಡೇಗೌಡ