Advertisement

ಹಾಸನ: ವ್ಯಾಪಾರ,ವಹಿವಾಟು ಆರಂಭಕ್ಕೆ ಸಿದ್ಧತೆ

05:25 PM May 03, 2020 | Suhan S |

ಹಾಸನ: ಲಾಕ್‌ಡೌನ್‌ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಿದ ಬೆನ್ನಲ್ಲೆ ಹಸಿರು ವಲಯದಲ್ಲಿರುವ ಹಾಸನ ಜಿಲ್ಲೆಯಲ್ಲಿ ವ್ಯಾಪಾರ, ವಹಿವಾಟು ಮತ್ತು ವಾಣಿಜ್ಯ ಚಟುವಟಿಕೆಗಳು ಗರಿಗೆದರಿವೆ.

Advertisement

ಹಾಸನ ನಗರದಲ್ಲಿ ವಾಹನಗಳ ಸಂಚಾರದ ದಟ್ಟಣೆಯೂ ಶನಿವಾರದಿಂದಲೇ ಹೆಚ್ಚಾಗಿದೆ. ಹಸಿರು ವಲಯದಲ್ಲಿರುವ ಹಾಸನ ಜಿಲ್ಲೆ ಯಲ್ಲಿ ಲಾಕ್‌ಡೌನ್‌ ಸಡಿಲಿಕೆ ಸುಳಿವು ಸಿಗುತ್ತಿದ್ದಂತೆ ಜನರು ವಹಿವಾಟು ಆರಂಭಕ್ಕೆ ಸಜ್ಜಾಗುತ್ತಿದ್ದಾರೆ. ಮೇ 3ರ ನಂತರ ಮಾರ್ಗದರ್ಶಿ ಸೂತ್ರಗಳು ಜಾರಿಯಾಗಲಿದ್ದರೂ ಶನಿವಾರವೇ ತಮ್ಮ ಅಂಗಡಿಗಳ ಬಳಿ ಸ್ವತ್ಛತೆಯ ಕಾರ್ಯದಲ್ಲಿ ನಿರತರಾಗಿದ್ದರು.

ಅಗತ್ಯ ಸರಕು ದಾಸ್ತಾನು: ಮೇ 4ರಿಂದ ಜಿಲ್ಲೆಯ ವ್ಯಾಪ್ತಿಯಲ್ಲಿ ಬಸ್‌ಗಳ ಸಂಚಾರವೂ ಸೇರಿದಂತೆ ಬಹುತೇಕ ವಾಣಿಜ್ಯ ಚಟುವಟಿಕೆ ಗಳಿಗೆ ಅವಕಾಶ ನೀಡುವ ಘೋಷಣೆ ಆಗುತ್ತಿದ್ದಂತೆ ವರ್ತಕರು ನಿಟ್ಟುಸಿರು ಬಿಟ್ಟಿದ್ದಾರೆ. ಶನಿವಾರದಿಂದಲೇ ತಮ್ಮ ಅಂಗಡಿಗಳಲ್ಲಿ ಅಗತ್ಯವಾದ ಸರಕುಗಳನ್ನು ದಾಸ್ತಾನು ಮಾಡುವ ಚಟುವಟಿಕೆ ಆರಂಭಿಸಿದ್ದಾರೆ.

ಸೋಮವಾರದಿಂದ ಮದ್ಯದಂಗಡಿಗಳು, ಜವಳಿ ಅಂಗಡಿಗಳು, ಸಲೂನ್‌ಗಳು ಸೇರಿದಂತೆ ಬಹುತೇಕ ವಾಣಿಜ್ಯ ಚಟುವಟಿಕೆಗಳಿಗೆ ದಿನವಿಡೀ ಅವಕಾಶ ಸಿಗಲಿದೆ. ನಗರ ಪ್ರದೇಶ ಗಳಲ್ಲಿ ಕೈಗಾರಿಕೆಗಳನ್ನು ಆರಂಭಿಸಲು ಹಾಗೂ ನಿರ್ಮಾಣ ಚಟುವಟಿಕೆಗಳಿಗೂ ಅವಕಾಶವಿದೆ. ಹಾಗಾಗಿ ಹಾಸನ ನಗರ ಹಾಗೂ ಎಲ್ಲ ತಾಲೂಕು ಕೇಂದ್ರಗಳಲ್ಲೂ ಜನಜಂಗುಳಿ ಸಹಜವಾಗಿಯೇ ನಿರ್ಮಾಣವಾಗಲಿದೆ.

ಸೋಮವಾರದಿಂದ ಚಲನಚಿತ್ರ ಮಂದಿರಗಳು, ಶಾಲಾ – ಕಾಲೇಜುಗಳು, ಜಿಮ್‌ಗಳು, ಧಾರ್ಮಿಕ ಸ್ಥಳಗಳ ಚಟುವಟಿಕೆ, ಚಿನ್ನಾಭರಣಗಳ ಅಂಗಡಿಗಳ ಹೊರತುಪಡಿಸಿ ಉಳಿದೆಲ್ಲ ಆರ್ಥಿಕ ಚಟುವಟಿಕೆಗಳು ಆರಂಭವಾಗಲಿವೆ. ಹಾಗಾಗಿ ಹಾಸನ ನಗರ ಹಾಗೂ ಜಿಲ್ಲೆಯ ಎಲ್ಲ ಪಟ್ಟಣಗಳಲ್ಲೂ ವ್ಯಾಪಾರ ವಹಿವಾಟು ಚಟುವಟಿಕೆಗಳು ಜೋರಾಗಲಿವೆ.

Advertisement

ಕೃಷಿ ಚಟುವಟಿಕೆಗೆ ಅನುಕೂಲ: ಕೃಷಿ ಚಟುವಟಿಕೆಗಳ ಮೇಲಿನ ನಿರ್ಬಂಧವನ್ನು ಎರಡು ವಾರಗಳ ಹಿಂದೆಯೇ ಸಡಿಸಲಾಗಿತ್ತು.  ಆದರೆ ಮಳೆಯಾಗದಿದ್ದರಿಂದ ಕೃಷಿ ಚಟುವಟಿಕೆಗಳು ಬಿರುಸಾಗಿರಲಿಲ್ಲ. ಆದರೆ ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಮುಂದಿನ ವಾರದಲ್ಲಿ ಬಿತ್ತನೆ ಆಲೂಗಡ್ಡೆ ಮಾರಾಟವೂ ಆರಂಭವಾಗಲಿದೆ. ಬಸ್‌ಗಳ ಸಂಚಾರ ರಂಭವಾಗುವುದ ರಿಂದ ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ರೈತರು, ಬಿತ್ತನೆ ಬೀಜ. ಕೃಷಿ ಪರಿಕರಗಳ ಖರೀದಿಗೆ ಆಗಮಿಸಲಿದ್ದಾರೆ. ಬ್ಯಾಂಕ್‌, ಅಂಚೆ ಕಚೇರಿಗಳಲ್ಲಿ ವ್ಯವಹಾರ ನಡೆಯುತ್ತಿದೆ. ಹಾಗೆಯೇ ಖಾಸಗಿ ಆಸ್ಪತ್ರೆ ಗಳಲ್ಲೂ ಆರಂಭವಾಗಿವೆ. ಪೆಟ್ರೋಲ್‌ ಬಂಕ್‌ ಗಳೂ ತೆರೆದಿವೆ. ಈ ಎಲ್ಲ ಕ್ಷೇತ್ರಗಳಲ್ಲೂ ಸೋಮವಾರದಿಂದ ವ್ಯವಹಾರ ಚಟುವಟಿಕೆ ಗಳು ಮತ್ತಷ್ಟು ಚುರುಕಾಗಲಿವೆ.

ಮದ್ಯದಂಗಡಿಗಳ ಬಳಿ ಗಲಾಟೆ ಸಾಧ್ಯತೆ: ಕಳೆದ 33 ದಿನಗಳಿಂದ ಮಚ್ಚಿದ್ದ ಮದ್ಯದಂಗಡಿ ಗಳು ಸೋಮವಾರಿಂದ ತೆರೆಯಲಿವೆ. ಮದ್ಯ ಪ್ರಿಯರು ಮದ್ಯ ಖರೀದಿಗೆ ಮುಗಿಬೀಳುವ ಸಾಧ್ಯತೆ ಹೆಚ್ಚಿದೆ. ಮದ್ಯದಂಗಡಿಗಳ ಬಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಷರತ್ತು ಇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಮದ್ಯ ವ್ಯಾಪಾರಕ್ಕೆ ಸಿದ್ದತೆನಡೆಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಮದ್ಯದಂಗಡಿಗಳ ಬಳಿ ಪೊಲೀಸ್‌ ರಕ್ಷಣೆ ಅಗತ್ಯವಿದೆ ಎಂದು ಮದ್ಯದ ವ್ಯಾಪಾರಿಗಳು ಅಭಿಪ್ರಾಯಪಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next