ಹಾಸನ: ಜಿಲ್ಲೆಯಲ್ಲಿ ಜಲಶಕ್ತಿ ಅಭಿಯಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸ ಬೇಕೆಂದು ಕೇಂದ್ರ ಕೃಷಿ ಸಂಶೋಧನಾ ಮತ್ತು ಶೈಕ್ಷಣಿಕ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸುಶೀಲ್ಕುಮಾರ್ ಸೂಚಿಸಿದರು.
ಕೇಂದ್ರದ ಅಧಿಕಾರಿಗಳಿಗೆ ಮನವಿ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಜಲಶಕ್ತಿ ಯೋಜನೆ ಅನುಷ್ಠಾನಗೊಳುತ್ತಿರುವ ಅರಸೀಕೆರೆ ಮತ್ತು ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಾಮಗ್ರಿ ಹಾಗೂ ಕೆಲಸಗಾರರ ಅನುದಾನ ವೆಚ್ಚದ ಅನುಪಾತದಲ್ಲಿ 60:40ರ ಬದಲು 70:30ಕ್ಕೆ ಹೊಂದಾಣಿಕೆ ಮಾಡಲು ಅನುಕೂಲವಾಗುವಂತೆ ತಾವು ಸಹ ಕೇಂದ್ರದ ಅಧಿಕಾರಿಗಳಿಗೆ ಮನವಿ ಮಾಡುವುದಾಗಿ ಭರವಸೆ ನೀಡಿದರು.
ಜಲಶಕ್ತಿ ಅಭಿಯಾನ ಯಶಸ್ವಿಯಾಗಲಿ: ಜಿಲ್ಲಾಧಿಕಾರಿ ಗಿರೀಶ್ ಮಾತನಾಡಿ, ಜಿಲ್ಲೆಯಲ್ಲಿ ಈ ವರೆಗೆ ಜಲಶಕ್ತಿ ಅಭಿಯಾನ ಆಂದೋಲನ ರೂಪದಲ್ಲಿ ನಡೆದಿರುವುದು ಅಭಿನಂದನಾರ್ಹ. ಆದರೆ ಇದು ಇನ್ನಷ್ಟು ಬಹು ಮುಖೀಯಾಗಿ ಹಾಗೂ ತ್ವರಿತವಾಗಿ ಅನುಷ್ಠಾನಗೊಳಿಸ ಬೇಕಿದೆ. ಪ್ರತಿ ಹನಿ ನೀರು ಮುಖ್ಯ. ಅದರ ಸಂರಕ್ಷಣೆ ಹಾಗೂ ಸದ್ಬಳಕೆಗೆ ವಿಶೇಷ ಗಮನ ಹರಿಸಬೇಕಿದೆ. ಕೃಷಿ, ತೋಟಗಾರಿಕೆ, ಗ್ರಾಮ ಪಂಚಾ ಯಿತಿಗಳು, ನಗರ ಸ್ಥಳಿಯ ಸಂಸ್ಥೆಗಳು, ಜಿಲ್ಲಾ ಪಂಚಾಯಿತಿ ಎಂಜಿ ನಿಯರಿಂಗ್ ವಿಭಾಗ, ಸಣ್ಣ ಹಾಗೂ ಬೃಹತ್ ನೀರಾವರಿ ಇಲಾಖೆಗಳು, ಅರಣ್ಯ ಇಲಾಖೆ ಮತ್ತಿತರ ಇಲಾಖೆಗಳು ಇದರಲ್ಲಿ ಸಂಪೂರ್ಣವಾಗಿ ತೊಡಗಿಕೊಂಡು ಅಭಿಯಾನವನ್ನು ಸಂಪೂರ್ಣ ಯಶಸ್ವಿಗೊಳಿಸಬೇಕು ಎಂದರು.
ಸರ್ಕಾರಿ ಕಚೇರಿಗಳಲ್ಲಿ ಮಳೆಕೊಯ್ಲು ಮಾಡಿ: ಕೊಳವೆ ಬಾವಿಗಳ ಪುನರುಜ್ಜೀವನ, ಜಲ ಮರು ಪೂರಣದ ವೇಳೆ ವಿಶೇಷ ನಿಗಾವಹಿಸಬೇಕು. ಹಾಲಿ ಬಳಕೆಯಾಗುತ್ತಿರುವ ಕೊಳವೆ ಬಾವಿಗಳಲ್ಲಿ ನೀರು ಕಲುಷಿತವಾಗದಂತೆ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಬೇಕು. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಕೆ, ಕೆರೆ ಸಂಜೀನಿ ಯೋಜನೆಯ ಪರಿಣಾಮಕಾರಿ ಅನುಷ್ಠಾನ. ಕೃಷಿ ಹೊಂಡಗಳು, ಪಾಲಿ ಹೌಸ್‌ನ ನಿರ್ಮಾಣ ಸಂಖ್ಯೆಯನ್ನು ಹೆಚ್ಚಳ ಮಾಡಲು ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.
ಜಿಲ್ಲಾ ಪಂಚಾಯಿತಿಯಿಂದ ಉದ್ಯೋಗ ಖಾತರಿ ಯೋಜನೆ ಸದ್ಬಳಕೆ ಮಾಡಿಕೊಂಡು ಹೆಚ್ಚಿನ ಜಲ ಸಂರಕ್ಷಣೆ ಚಟುವಟಿಕೆಗಳನ್ನು ಕೈಗೊಳ್ಳಬೇಕು ಹಾಗೂ ನಗರ ವ್ಯಾಪ್ತಿಯಲ್ಲಿ ಮಳೆ ನೀರು ಕೊಯ್ಲು ಮತ್ತು ಗೃಹ ತ್ಯಾಜ್ಯ ನೀರಿನ ಮರು ಬಳಕೆ ಬಗ್ಗೆ ಅರಿವು ಮೂಡಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳಾದ ಮಹೇಶ್ ಹಾಗೂ ಅರುಣ್ ಕುಮಾರ್ ಅವರು ಜಲಶಕ್ತಿ ಅಭಿಯಾನ ಯೋಜನೆ ಅನುಷ್ಠಾನಕ್ಕೆ ಜಿಲ್ಲಾ ಪಂಚಾಯತಿಯಿಂದ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದರು.
ಕೃಷಿ, ಅರಣ್ಯ, ಮೀನುಗಾರಿಕೆ, ಪಂಚಾಯಿತಿ ಎಂಜಿನಿಯರಿಂಗ್ ವಿಭಾಗ, ನಗರಾಭಿವೃದ್ಧಿ ಹಾಗೂ ತೋಟಗಾರಿಕೆ, ತಾಲೂಕು ಪಂಚಾಯತಿ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.