ಹಾಸನ: ವಿಭಿನ್ನ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಾ ಬಂದಿರುವ ಹಾಸನ ಜಿಲ್ಲೆಯ ರಾಜಕಾರಣ ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶದೊಂದಿಗೆ ಹೊಸ ದಾಖಲೆ ನಿರ್ಮಿಸಿದೆ. ನಿರೀಕ್ಷೆಯಂತೆ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರು ವಿಜಯಿಯಾಗಿದ್ದಾರೆ. ದೇವೇಗೌಡರು 5 ಬಾರಿ ಪ್ರತಿನಿಧಿಸಿದ್ದ ಹಾಸನ ಲೊಕಸಭಾ ಕ್ಷೇತ್ರಕ್ಕೆ ದೇವೇಗೌಡರ ಮೊಮ್ಮಗ ಪ್ರಜ್ವಲ್ ಉತ್ತರಾಧಿಕಾರಿಯಾಗಿದ್ದಾರೆ.
ಹಿಂದೆಂದೂ ಚುನಾವಣೆ ಎದುರಿಸದ ಪ್ರಜ್ವಲ್ ರೇವಣ್ಣ ಅವರಿಗೆ ಪಿತ್ರಾರ್ಜಿತ ರಾಜಕೀಯ ಶಕ್ತಿ ನೆರವಾಗಿದೆ. ಕಳೆದ ಮೂರು ದಶಕಗಳಿಂದ ಎಚ್.ಡಿ. ದೇವೇಗೌಡರು ಮತ್ತು ಅವರ ಪುತ್ರ ಎಚ್.ಡಿ.ರೇವಣ್ಣ ಅವರು ಹಾಸನ ಜಿಲ್ಲೆಯಲ್ಲಿ ರೂಪಿಸಿದ ರಾಜಕೀಯ ನೆಲೆ ನಿರಂತರವಾಗಿ ದೇವೇಗೌಡರ ಕುಟುಂಬಕ್ಕೆ ಫಲ ಕೊಡತ್ತಲೇ ಬಂದಿದೆ. ರಾಜ್ಯ ರಾಜಕೀಯದಲ್ಲಿ ಏನೇ ಬದಲಾವಣೆಗಳಾಗುತ್ತಾ ಬಂದಿದ್ದರೂ ಹಾಸನ ಜಿಲ್ಲೆಯ ಜನರು ಮಾತ್ರ ದೇವೇಗೌಡರು ಮತ್ತು ಜೆಡಿಎಸ್ ಬೆಂಬಲಿಸುತ್ತಾ ಬಂದಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅವರ ಸುನಾಮಿ ಅಲೆಯ ನಡುವೆಯೂ ಜಿಲ್ಲೆಯ ಮತದಾರರು ಜೆಡಿಎಸ್ ಕೈ ಹಿಡಿದು ಪಕ್ಷದ ಅಸ್ಥಿತ್ವ ಉಳಿಸಿಕೊಟ್ಟಿದ್ದಾರೆ.
ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ: ಅಧಿಕಾರದಲ್ಲಿರಲಿ, ಇಲ್ಲದಿರಲಿ ಜಿಲ್ಲೆಯ ಅಭಿವೃದ್ಧಿ, ಜಿಲ್ಲೆಯ ಜನರ ಕೆಲಸಗಳಿಗೆ ದನಿಯಾಗಿ ಸ್ಪಂದಿಸುತ್ತಿರುವ ದೇವೇಗೌಡರು ಮತ್ತು ಎಚ್.ಡಿ.ರೇವಣ್ಣ ಅವರ ಕುಟುಂಬದ ಕುಡಿಯನ್ನು ಗೆಲ್ಲಿಸುವ ಮೂಲಕ ಜಿಲ್ಲೆಯ ಜನರೂ ಅಪ್ಪ – ಮಕ್ಕಳಿಗೆ ಪ್ರತಿಸ್ಪಂದಿಸಿದ್ದಾರೆ. ಕಳೆದ ವರ್ಷ ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಾಸನ ಜಿಲ್ಲೆಯಲ್ಲಿ ಅಭಿವೃದ್ಧಿಯ ಪರ್ವವೇ ಆರಂಭ ವಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಅವರು ಅಧಿಕಾರದಲ್ಲಿದ್ದಾಗಲೆಲ್ಲಾ ಜಿಲ್ಲೆಯ ಜನರ ನಿರೀಕ್ಷೆ ಮೀರಿ ಅಭಿವೃದ್ದಿ ಕೆಲಸ ಮಾಡಿದ್ದಾರೆ. ಅದರ ಫಲ ರೇವಣ್ಣ ಅವರಿಗೆ ಪುತ್ರನ ಗೆಲುವಿನಲ್ಲಿ ಸಿಕ್ಕಿದೆ.
ಮೈತ್ರಿಯ ಸದ್ಬಳಕೆ: ಈ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಆದ ಮೈತ್ರಿಯ ಲಾಭವನ್ನೂ ಜೆಡಿಎಸ್ ಸಮರ್ಥವಾಗಿ ಬಳಸಿಕೊಂಡಿತು. ಹಳೆಯ ರಾಜ ಕೀಯ ವೈರತ್ವವನ್ನು ಎಚ್.ಡಿ.ರೇವಣ್ಣ ಅವರು ಕಾಂಗ್ರೆಸ್ ನಾಯಕ ಮನೆ ಬಾಗಿಲಿಗೆ ಹೋದಾಗ ಕಾಂಗ್ರೆಸ್ ನಾಯಕರ ಸಂತಸದಿಂದಲೇ ಸ್ವಾಗತಿಸಿ ಜೆಡಿ ಎಸ್‌ಗೆ ಸ್ಪಂದಿಸಿದರು. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಕೆಲವು ಮುಖಂಡರೂ ಗೌಡರ ಋಣ ತೀರಿಸ ಬೇಕೆಂದು ಪ್ರಜ್ವಲ್ ರೇವಣ್ಣ ಅವರನ್ನು ಬೆಂಬಲಿಸಿದರು.
ಕಾಂಗ್ರೆಸ್ ಪಕ್ಷದಲ್ಲಿದ್ದು, ಶಾಸಕರಾಗಿ, ಸಚಿವರಾಗಿದ್ದ ಎ.ಮಂಜು ಪಕ್ಷದ ಸಂಘಟನೆ ಮಾಡಿದ್ದಕ್ಕಿಂತ ಶತ್ರುಗಳನ್ನು ಪಕ್ಷದಲ್ಲಿ ಶತ್ರುಗಳನ್ನು ಸೃಷ್ಟಿಸಿಕೊಂಡಿದ್ದೇ ಹೆಚ್ಚು. ಕಾಂಗ್ರೆಸ್‌ನಲ್ಲಿ ಸಚಿವನಾಗಿ ಅಧಿಕಾರ ಅನಭವಿಸಿ ಬಿಜೆಪಿಗೆ ಹಾರಿದ ಎ.ಮಂಜು ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಕಾಂಗ್ರೆಸ್ ಮುಖಂಡರಿಗೆ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡುವ ಅವಕಾಶಕ್ಕಿಂತ ಎ.ಮಂಜು ವಿರುದ್ಧ ಸೇಡು ತೀರಿಸಿಕೊಳ್ಳುವ ಸದಾವಕಾಶ ಸಿಕ್ಕಿತು. ಅದು ಪ್ರಜ್ವಲ್ ರೇವಣ್ಣ ಅವರಿಗೆ ವರವಾಗಿ ಪರಿಣಿಮಿಸಿತು.
ಇದೆಲ್ಲದರ ಜೊತೆಗೆ ಎಚ್.ಡಿ. ದೇವೇಗೌಡರು ಮತ್ತು ಎಚ್.ಡಿ.ರೇವಣ್ಣ ಅವರ ವರ್ಚಸ್ಸು, ಜೆಡಿಎಸ್ ಅಧಿಕಾರದಲ್ಲಿರುವ ಅವಕಾಶದ ಜೊತೆಗೆ ಹಾಸನ ಜೆಡಿಎಸ್ ಭದ್ರಕೋಟೆಯೆಂಬ ಅಸ್ಮಿತೆಯೂ ಮೋದಿ ಅಲೆಯ ನಡುವೆಯೂ ಪ್ರಜ್ವಲ್ ಗೆಲುವಿಗೆ ನೆರವಾಯಿತು.
● ಎನ್. ನಂಜುಂಡೇಗೌಡ