ಹಾಸನ: ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ – ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತವಾದ ಬೆನ್ನಲ್ಲೇ ಹಾಸನ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಮೇಲೆ ಆತಂಕದ ಕರಿನೆರಳು ಆವರಿಸಿದೆ.
ಎಚ್.ಡಿ.ಕುಮಾರಸ್ವಾಮಿ ಅವರ ಸಚಿವ ಸಂಪುಟದ ಸಹದ್ಯೋಗಿಯೂ ಆಗಿದ್ದ ಅವರ ಸಹೋದರ ಎಚ್.ಡಿ.ರೇವಣ್ಣ ಅವರು ಕಳೆದೊಂದು ವರ್ಷದಲ್ಲಿ ಹಾಸನ ಜಿಲ್ಲೆಗೆ ಸಾವಿರಾರು ಕೋಟಿ ರೂ. ಅಭಿವೃದ್ಧಿ ಯೋಜನೆಗಳನ್ನು ಮಂಜೂರು ಮಾಡಿಸಿ ದ್ದಾರೆ. ಆದರೆ ಈಗ ರಾಜ್ಯದಲ್ಲಿ ಸರ್ಕಾರ ಬದಲಾಗಿದ್ದು, ಮಂಜೂರಾದ ಯೋಜನೆಗಳ ಅನುಷ್ಠಾನದ ಮೇಲೆ ರಾಜಕೀಯ ದ್ವೇಷದ ಜ್ವಾಲೆ ಆವರಿಸಿ ನೆನಗುದಿಗೆ ಬೀಳಬಹುದೆಂಬ ಆತಂಕ ಜಿಲ್ಲೆಯ ಜನರಿಗಿದೆ.
ಬಿಜೆಪಿ ವಿರುದ್ಧ ಆರೋಪ: 2004 ರಿಂದ 2007 ರ ವರೆಗೆ ಜೆಡಿಎಸ್ ಅಧಿಕಾರದಲ್ಲಿದ್ದಾಗ ಮಂಜೂರಾಗಿದ್ದ ಅಭಿವೃದ್ಧಿ ಯೋಜನೆಗಳು 2008 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ನೆನಗುದಿಗೆ ಬಿದ್ದಿದ್ದವು. ಯೋಜನೆಗಳ ಅನುಷ್ಠಾನಕ್ಕೆ ಅನುದಾನ ನೀಡದೇ ರಾಜಕೀಯ ದ್ವೇಷವನ್ನು ಬಿಜೆಪಿ ಸರ್ಕಾರ ಸಾಧಿಸುತ್ತಿದೆ ಎಂದು ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ನಿವಾಸದ ಮುಂದೆ ಹಾಸನದ ಸಂಸದರೂ ಆಗಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಜೆಡಿಎಸ್ ಶಾಸಕರು ಧರಣಿಯನ್ನೂ ನಡೆಸಿದ್ದರು. ಆದರೂ ನಿರೀಕ್ಷಿತ ಅನುದಾನ ಬಿಡುಗಡೆಯಾಗಿರಲಿಲ್ಲ. ಈಗಲೂ ಅಂತಹುದೇ ಪರಿಸ್ಥಿತಿ ನಿರ್ಮಾಣವಾಗುವ ಸೂಚನೆಗಳು ಗೋಚರಿಸುತ್ತಿವೆ.
ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ: ಒಂದು ದಶಕದಿಂದ ಹಾಸನ ಜಿಲ್ಲೆಯ ಅಭಿವೃದ್ಧಿಯನ್ನು ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ಕಡೆಗಣಿಸುತ್ತಾ ಬಂದಿವೆ ಎಂದು ಮಾಜಿ ಸಚಿವ ಎಚ್‌ಡಿ.ರೇವಣ್ಣ ಅವರು ನಿರಂತರವಾಗಿ ಹೋರಾಟ ಮಾಡುತ್ತಾ ಬಂದ ಪರಿಣಾಮವಾಗಿ ಜಿಲ್ಲೆಯ 7 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳು ಜೆಡಿಎಸ್ ಪಾಲಾಗಿದ್ದವು. ರೇವಣ್ಣ ಅವರ ಸಹೋದರನೇ ಮುಖ್ಯಮಂತ್ರಿ, ರೇವಣ್ಣ ಅವರೇ ಲೋಕೋಪಯೋಗಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಪರಿಣಾಮವಾಗಿ ಹಾಸನ ಜಿಲ್ಲೆ ಯಲ್ಲಿ ಅಭಿವೃದ್ಧಿ ಪರ್ವವೇ ಆರಂಭವಾಗಿತ್ತು. ಕೆಲವು ಯೋಜನೆಗಳ ಕಾಮಗಾರಿಗಳೂ ಭರದಿಂದ ಆರಂಭ ವಾಗಿದ್ದವು. 5 ವರ್ಷ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ರುತ್ತದೆ ಎಂಬ ಅತಿ ವಿಶ್ವಾಸದಿಂದ ಎಚ್.ಡಿ. ರೇವಣ್ಣ ಅವರು ಮಂಜೂರು ಮಾಡಿಸಿದ್ದ ಯೋಜನೆಗಳಿಗೆ ಬಿಜೆಪಿ ಸರ್ಕಾರ ಅನುದಾನ ನೀಡದೆ ಯೋಜನೆಗಳು ನೆನಗುದಿಗೆ ಬೀಳಬಹುದೆಂಬ ಮಾತುಗಳೂ ಜಿಲ್ಲೆಯಲ್ಲಿ ಈಗ ಸಾಮಾನ್ಯವಾಗಿ ಕೇಳಿ ಬರುತ್ತಿವೆ.
ಬೃಹತ್ ಕಾರ್ಯಕ್ರಮದ ರೇವಣ್ಣ ಕನಸು ಭಗ್ನ: ಹಾಸನದ ಸೆಂಟ್ರಲ್ ಬಸ್ ನಿಲ್ದಾಣ ಸಮೀಪ 100 ಕೋಟಿ ರೂ. ಗೂ ಹೆಚ್ಚು ವೆಚ್ಚದಲ್ಲಿ ಜಿಲ್ಲಾ ನ್ಯಾಯಾಯ ಸಂಕೀರ್ಣದ ಬೃಹತ್ ಕಟ್ಟಡ ನಿರ್ಮಾಣ ಒಂದು ದಶಕದ ನಂತರ ಈಗ ಪೂರ್ಣಗೊಂಡಿದೆ. ರಾಜ್ಯದಲ್ಲಿಯೇ ವಿನೂತನವಾಗಿ ನಿರ್ಮಿಸಿರುವ ಈ ಕಟ್ಟಡದ ಉದ್ಘಾಟನೆಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಸೇರಿದಂತೆ ಗಣ್ಯರನ್ನು ಕರೆಸಿ ಬೃಹತ್ ಸಮಾರಂಭ ಮಾಡಬೇಕೆಂದುಸಚಿವರಾಗಿದ್ದ ಎಚ್.ಡಿ. ರೇವಣ್ಣ ಅವರು ಕನಸು ಕಂಡಿದ್ದರು. ಈ ಸಮಾರಂಭದ ಜೊತೆಗೆ ಮುಖ್ಯಮಂತ್ರಿಯವರನ್ನು ಕರೆಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಬೇಕೆಂದೂ ರೇವಣ್ಣ ಅವರು ಯೋಚಿಸಿದ್ದರು. ಆದರೆ ಈಗ ರಾಜ್ಯದ ಸಮ್ಮಿಶ್ರ ಸರ್ಕಾರ ಪತನವಾಗಿದೆ. ರೇವಣ್ಣ ಅವರ ಬೃಹತ್ ಕಾರ್ಯಕ್ರಮದ ಕನಸೂ ಈಗ ಭಗ್ನಗೊಂಡಿದೆ.