ಹಾಸನ: ದಕ್ಷಿಣ ಕನ್ನಡದ ದಕ್ಷ ಹಾಗೂ ಖಡಕ್ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ರೆಡ್ಡಿ ಅವರನ್ನು ದಿಢೀರ್ ಆಗಿ ವರ್ಗಾವಣೆ ಮಾಡಿರುವುದಕ್ಕೆ ಜನರು ಅಸಮಾಧಾನಗೊಂಡಿದ್ದಲ್ಲದೇ, ವೀ ವಾಂಟ್ ಸುಧೀರ್ ರೆಡ್ಡಿ ಟ್ವೀಟ್ ಅಭಿಯಾನ ಆರಂಭಿಸಿದ್ದಾರೆ. ಏತನ್ಮಧ್ಯೆ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯನ್ನು ವರ್ಗಾಯಿಸಿರುವುದಕ್ಕೆ ಜೆಡಿಎಸ್, ಬಿಜೆಪಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗಿವೆ.
ರೋಹಿಣಿ ಸಿಂಧೂರಿ ಅವರ ದಿಢೀರ್ ವರ್ಗಾವಣೆ ವಿರೋಧಿಸಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಜಿಲ್ಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಜನವರಿ 25ರಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.
ಅಷ್ಟೇ ಅಲ್ಲ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳನ್ನು ದಿಢೀರ್ ವರ್ಗಾಯಿಸುತ್ತಿರುವ ಸರ್ಕಾರದ ಧೋರಣೆ ಖಂಡಿಸಿ ಮಂಗಳವಾರ ಮಧ್ಯಾಹ್ನವೇ ಹಾನಸದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಹೇಳಿದೆ.
ಇತ್ತೀಚೆಗಷ್ಟೇ ಕರ್ನಾಟಕ ಹೈಕೋರ್ಟ್ ಸಹ 2, 3 ಬಾರಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ಇದೆಯಾ? ಈ ಪರಿ ಅಧಿಕಾರಿಗಳನ್ನು ಯಾಕೆ ವರ್ಗಾವಣೆ ಮಾಡುತ್ತೀರಿ?ಇದಕ್ಕೆ ಮಾನದಂಡವೇನು ಎಂದು ತರಾಟೆಗೆ ತೆಗೆದುಕೊಂಡಿದ್ದನ್ನು ಇಲ್ಲಿ ಗಮನಿಸಬಹುದು.