Advertisement

ವರ್ತುಲ ರಸ್ತೆ ಕಾಮಗಾರಿ ಆರಂಭ

05:56 PM Nov 21, 2019 | Naveen |

ಹಾಸನ: ನಗರದ ವರ್ತುಲ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಸಾಲಗಾಮೆ ರಸ್ತೆಯಿಂದ ಬೇಲೂರು ರಸ್ತೆಗೆ ವರ್ತುಲ ರಸ್ತೆ ಸಂಪರ್ಕ ಕೊನೆಗೂ ಸಾಧ್ಯವಾಗಿದೆ.

Advertisement

ವರ್ತುಲ ರಸ್ತೆ ನಿರ್ಮಾಣಕ್ಕೆ ಪ್ರಮುಖ ಉದ್ದೂರು ಗ್ರಾಮದ ಬಳಿ ಭೂ ಸ್ವಾಧೀನದ ಸಮಸ್ಯೆ ಅಡ್ಡಿಯಾಗಿತ್ತು. ಶಾಸಕ ಪ್ರೀತಂ ಜೆ.ಗೌಡ ಅವರು ಗ್ರಾಮಸ್ಥರನ್ನು ಮನವೊಲಿಸಿ ಸೂಕ್ತ ಪರಿಹಾರದ ವ್ಯವಸ್ಥೆ ಮಾಡುವ ಭರವಸೆಗೆ ಸ್ಪಂದಿಸಿರುವ ಗ್ರಾಮಸ್ಥರು ಕಾಮಗಾರಿ ಆರಂಭಕ್ಕೆ ಅನುವು ಮಾಡಿಕೊಟ್ಟಿದ್ದು, ಈಗ ಕಾಮಗಾರಿ ಪ್ರಗತಿಯಲ್ಲಿದೆ.

ತೇಜೂರು ಕಡೆಗೆ ಹೋಗುವ ರಸ್ತೆ ಬಳಿಯಿಂದ ಬೇಲೂರು ರಸ್ತೆ ರಾಷ್ಟ್ರೀಯ ಹೆದ್ದಾರಿಯವರೆಗೆ ರಸ್ತೆ ನಿರ್ಮಾಣದ ಕಾಮಗಾರಿ ಆರಂಭವಾಗಿದ್ದು, ರಸ್ತೆ ಬದಿಯ ಚರಂಡಿ ನಿರ್ಮಾಣ ಮತ್ತು ರಸ್ತೆಗೆ ಮಣ್ಣು ತುಂಬಿ ಸಮತಟ್ಟು ಮಾಡುವ ಕಾಮಗಾರಿ ನಡೆಯುತ್ತಿದೆ.

ಚತುಷ್ಪಥ ರಸ್ತೆಯಾಗಿ ನಿರ್ಮಾಣ ವಾಗುವ ಈ ರಸ್ತೆಯಲ್ಲಿ ಈಗ ಒಂದು ಭಾಗಕ್ಕೆ ಅಂದರೆ ದ್ವಿಪಥ ರಸ್ತೆಯ ರೂಪಿಸುವ ಕಾಮಗಾರಿ ನಡೆದಿದ್ದು, ಮಣ್ಣಿನ ರಸ್ತೆಯಲ್ಲಿ ದ್ವಿಚಕ್ರ ಮತ್ತು ಲಘು ವಾಹನಗಳು ಮಣ್ಣಿನ ರಸ್ತೆಯಲ್ಲಿಯೇ ಬೇಲೂರು ರಸ್ತೆಯ ಕಡೆಗೆ ಸಂಚಾರ ಆರಂಭಿಸಿವೆ.

ಎರಡು ಪ್ಯಾಕೇಜ್‌ಗಳಲ್ಲಿ ಕಾಮಗಾರಿ: ಈಗ ವರ್ತುಲ ರಸ್ತೆ ನಿರ್ಮಾಣಕ್ಕೆ 9.85 ಕೋಟಿ ರೂ. ನಿಗದಿಯಾಗಿದ್ದು, ಎರಡು ಪ್ಯಾಕೇಜ್‌ಗಳಲ್ಲಿ ಸಾಲಗಾಮೆ ರಸ್ತೆಯಿಂದ ಬೇಲೂರು ರಸ್ತೆ ಸಂಪರ್ಕಿಸುವ ವರ್ತುಲ ರಸ್ತೆ ನಿರ್ಮಾಣದ ಕಾಮಗಾರಿಯನ್ನು ಗುತ್ತಿಗೆದಾರರು ಕೈಗೆತ್ತಿಕೊಂಡಿದ್ದಾರೆ. ಒಂದೊಂದು ಪ್ಯಾಕೇಜ್‌ಗೆ ತಲಾ 3.75 ಕೋಟಿ ರೂ. ಹಾಗೂ ರಸ್ತೆ ಬದಿ ಕಾಂಕ್ರೀಟ್‌ ಚರಂಡಿ ನಿರ್ಮಾಣಕ್ಕೆ 2.80 ಕೋಟಿ ರೂ. ನಿಗದಿಯಾಗಿದೆ. ಚರಂಡಿ ನಿರ್ಮಾಣ ಭರದಿಂದ ನಡೆಯುತ್ತಿದೆ. ಮಾರ್ಚ್‌ ಅಂತ್ಯದ ವೇಳೆಗೆ ರಸ್ತೆ ನಿರ್ಮಾಣದ ಪೂರ್ಣ ಗೊಳಿಸುವ ಗುರಿಯನ್ನು ನಿಗದಿಪಡಿಸಲಾಗಿದ್ದು, ಅಷ್ಟರೊಳಗೆ
ರಸ್ತೆ ಮಧ್ಯದ ವಿಭಜಕದಿಂದ ಎರಡೂ ಬದಿ 55 ಅಡಿ ಅಗಲಕ್ಕೆ ಅಂದರೆ ಒಟ್ಟು 110 ಅಡಿ ಅಗಲದ ರಸ್ತೆ ರೂಪಿಸಲು ಯೋಜಿಸಲಾಗಿದೆ. ಮೊದಲ ಹಂತದಲ್ಲಿ ರಸ್ತೆ ವಿಭಜಕದಿಂದ ಎರಡೂ ಬದಿಗಳಲ್ಲಿ ಒಂದೊಂದು ಪಥದ ಡಾಂಬರು ರಸ್ತೆ ನಿರ್ಮಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವುದು. ಅನಂತರ ಎರಡನೇ ಹಂತದಲ್ಲಿ ಮತ್ತೂಂದು ಪಥಕ್ಕೆ ಡಾಂಬರು ಹಾಕಿ ವರ್ತುಲ ರಸ್ತೆ ನಿರ್ಮಿಸುವ ಉದ್ದೇಶವಿದೆ ಎಂದು ಎಂಜಿನಿಯರುಗಳು ಮಾಹಿತಿ ನೀಡಿದ್ದಾರೆ.

Advertisement

ಮಂದಗತಿ ಕಾಮಗಾರಿ: ವರ್ತುಲ ರಸ್ತೆ ನಿರ್ಮಾಣದ 2ನೇ ಹಂತದ ಕಾಮಗಾರಿ ಆರಂಭವಾಗಿದೆ. ಆದರೆ ಕಾಮಗಾರಿಯ ವೇಗ ಮಂದಗತಿಯಲ್ಲಿದೆ. ಒಂದು ಜೆಸಿಬಿ ಮಣ್ಣು ತೆಗೆಯುವ, ಸಮತಟ್ಟು ಮಾಡುವ ಕೆಲಸದಲ್ಲಿ ನಿರತ ವಾಗಿದ್ದು 2 – 3 ಟಿಪ್ಟರ್‌ಗಳು ಮಣ್ಣು ಸಾಗಣೆ ಮಾಡುತ್ತಿವೆ. ಈ ವೇಗದಲ್ಲಿ ನಡೆದರೆ ನಿಗದಿಯಂತೆ ಮಾರ್ಚ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವೇ ಎಂಬ ಅನು ಮಾನವಿದೆ.

ಈಗ ಮಳೆಗಾಲ ಮುಗಿದಿದ್ದು, ಕಾಮ ಗಾರಿಯ ವೇಗವನ್ನು ಹೆಚ್ಚಿಸಬೇಕಾಗಿದೆ. ಆಗ ಮಾತ್ರ ನಿಗದಿತ ಗುರಿ ಸಾಧಿಸಲು ಸಾಧ್ಯವಾದೀತು. ಇಲ್ಲದಿದ್ದರೆ ಮಣ್ಣಿನ ರಸ್ತೆಯಲ್ಲಿ ದೂಳು ಕುಡಿಯುತ್ತಾ ವಾಹನಗಳಲ್ಲಿ ಸಂಚರಿಸ ಬೇಕಾದೀತು. ರಸ್ತೆ ಬದಿಯ ಮನೆಗಳ ನಿವಾಸಿಗಳೂ ದೂಳು ಕುಡಿಯಬೇಕಾದೀತು.

Advertisement

Udayavani is now on Telegram. Click here to join our channel and stay updated with the latest news.

Next