Advertisement

ಹಸಿ ಕರಗ ಮುಗೀತು, ಇಂದು ವೈಭವದ ಕರಗ ಉತ್ಸವ

09:40 PM May 17, 2019 | Lakshmi GovindaRaj |

ದೊಡ್ಡಬಳ್ಳಾಪುರ: ನಗರದ ವನ್ನಿಗರ ಪೇಟೆಯ ಇತಿಹಾಸ ಪ್ರಸಿದ್ಧ ಶ್ರೀ ಸಪ್ತಮಾತೃಕ ಮಾರಿಯಮ್ಮ ದೇವಾಲಯದಲ್ಲಿ ನಡೆಯಲಿರುವ ಕರಗ ಮಹೋತ್ಸವದ ಅಂಗವಾಗಿ ಹಸಿ ಕರಗ ಉತ್ಸವ ಸಂಭ್ರಮದಿಂದ ನೆರವೇರಿತು. ಹಸಿ ಕರಗ ಉತ್ಸವವನ್ನು ಸಹಸ್ರಾರು
ಜನ ವೀಕ್ಷಿಸಿದರು.

Advertisement

ಕುಪ್ಪಂನ ಪೂಜಾರಿ ಮುನಿರತ್ನಂ ಬಾಲಾಜಿ ಹಸಿ ಕರಗವನ್ನು ಹೊತ್ತು ಕರಗದ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ನಗರದ ಗಗನಾರ್ಯಸ್ವಾಮಿ ಮಠದಿಂದ ಹೊರಟ ಉತ್ಸವ ಹಳೇ ಬಸ್‌ ನಿಲ್ದಾಣ, ಶ್ರೀ ನೆಲದಾಂಜನೇಯಸ್ವಾಮಿ ದೇವಾಲಯ, 7 ಸುತ್ತಿನ ಕೋಟೆ, ತೂಬಗೆರೆ ಪೇಟೆ, ವನ್ನಿಗರಪೇಟೆ ಮೊದಲಾದೆಡೆ ಸಂಚರಿಸಿ ದೇವಾಲಯದ ಬಳಿ ಆಗಮಿಸಿತು.

ಶನಿವಾರ ನಡೆಯಲಿರುವ ಶ್ರೀ ಸಪ್ತಮಾತೃಕ ಮಾರಿಯಮ್ಮ ಕರಗ ಮಹೋತ್ಸವಕ್ಕೆ ಸಿದ್ಧತೆಗಳು ನಡೆದಿವೆ. ದೇವಾಲಯವನ್ನು ವಿದ್ಯುತ್‌ ದೀಪಾಲಂಕಾರಗಳಿಂದ ಅಲಂಕರಿಸಲಾಗಿದೆ. ನಗರದ ವಿವಿಧ ವೃತ್ತಗಳಲ್ಲಿ ತಮಿಳುನಾಡು ಕಲಾವಿದರಿಂದ ತಯಾರಿಸಲಾದ ವಿವಿಧ ದೇವತೆಗಳ ವಿದ್ಯುತ್‌ ದೀಪಾಲಂಕಾರ, ಬೃಹತ್‌ ಕಟೌಟು ಮೆರುಗು ನೀಡಿವೆ.

ಕರಗದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಗಣ ಹೋಮ, ನವಗ್ರಹ ಹೋಮ, ಚಂಡಿಕಾ ಹೋಮ ನಡೆಯಿತು. ಕರಗ ಉತ್ಸವದ ದಿನದ‌ವರೆಗೆ ನಿತ್ಯ ಅಭಿಷೇಕ, ಪೊಂಗಲ್‌ ಸೇವೆ ನಡೆದವು.
ವಸಂತ ಮಾಸದ ಮಲ್ಲಿಗೆ ಪರಿಮಳದೊಂದಿಗೆ ಅಬಾಲವೃದ್ಧಿಯಾಗಿ ಜಾತಿ ಮತ ಧರ್ಮಗಳ ಭೇದವಿಲ್ಲದೆ ಆಚರಿಸುವ ವಿಶಿಷ್ಟ ಉತ್ಸವ ಕರಗ ಮಹೋತ್ಸವ. ಕರಗ ಮಹೋತ್ಸವದ ಧಾರ್ಮಿಕ ವಿಧಿ ವಿಧಾನಗಳು ವೈಶಿಷ್ಟ ಪೂರ್ಣ. ಕೆಲವು ಆಚರಣೆಗಳು ಗೌಪ್ಯವಾಗಿ ಜರುಗುತ್ತವೆ. 9 ದಿನ ಉತ್ಸವದ ವಿಧಿ ವಿಧಾನಗಳು ನಡೆಯಲಿವೆ.

ಕರಗ ಸ್ತ್ರೀ ದೇವತಾರಾಧನೆಯಾದರೂ ಕರಗ ಹೊರುವುದು ಮಾತ್ರ ಗಂಡಸರೇ. ವಹಿ°ಕುಲ ಕ್ಷತ್ರಿಯರು (ತಿಗಳರು) ಈ ಕರಗ ಉತ್ಸವ ಆಚರಿಸುತ್ತಾರೆ. ಮೂಲತಃ ತಮಿಳುನಾಡಿನವರಾದ ಇವರು ತೋಟಗಾರಿಕೆ ನಡೆಸಲು ಕರ್ನಾಟಕವನ್ನು ಪ್ರವೇಶಿಸಿದ ಸಂದರ್ಭದಲ್ಲಿ ಕರಗ ಉತ್ಸವವೂ ಬಂದಿದೆ ಎನ್ನಲಾಗಿದೆ.

Advertisement

ಕರಗ ಉತ್ಸವಕ್ಕೆ ಪೌರಾಣಿಕ ಹಿನ್ನೆಲೆಯಿದ್ದು ಕರಗ ಹೊರಲು ಪ್ರೇರಕವಾಗುವುದನ್ನು ಬಣ್ಣಿಸಲು ವಿವಿಧ ಕಥೆಗಳಿವೆ. ಅಜ್ಞಾತವಾಸದಲ್ಲಿದ್ದ ಪಾಂಡವರು ದ್ರೌಪದಿಯನ್ನು ಗೆದ್ದಾಗ ಆಕೆ ತಲೆ ಮೇಲೆ ಕಳಸ ಧರಿಸಿದ್ದಳು. ಕರಗ ಉತ್ಸವ ದ್ರೌಪದಮ್ಮನ ಕರಗ ಎಂದು ಆಚರಿಸುತ್ತಾ ಬಂದಿದೆಯಾದರೂ ಇದರೊಂದಿಗೆ, ಗ್ರಾಮ ದೇವತೆಗಳಾದ ಸಪ್ತಮಾತೃಕಾ ಮಾರಿಯಮ್ಮ, ಮುತ್ಯಾಲಮ್ಮ, ಕಾವೇರಮ್ಮ, ರೇಣುಕಾಯಲ್ಲಮ್ಮ ಮೊದಲಾಗಿ ಶಕ್ತಿ ದೇವತೆಗಳ ಪ್ರತೀಕವಾಗಿ ಕರಗ ಉತ್ಸವಗಳು ನಡೆಯತ್ತವೆ. ದೊಡ್ಡಬಳ್ಳಾಪುರ ನಗರದಲ್ಲಿ ಶ್ರೀ ಆದಿಶಕಾತ್ಮಕ ದ್ರೌಪದಾದೇವಿ ಕರಗ ಹಾಗೂ ಶ್ರೀ ಸಪ್ತಮಾತೃಕಾ ಮಾರಿಯಮ್ಮ ಕರಗಗಳು ವರ್ಷಕ್ಕೊಮ್ಮೆ ಬದಲಾಗುತ್ತಾ ನಡೆಯುತ್ತಿವೆ.

ಕುರುಕ್ಷೇತ್ರ ಪೌರಾಣಿಕ ನಾಟಕ: ನಗರದ ತೇರಿನ ಬೀದಿ ವಿಶ್ವೇಶ್ವರಯ್ಯ ವೃತ್ತದ ಶ್ರೀ ಆಂಜನೇಯ ಕೃಪಾಪೋಷಿತ ನಾಟಕ ಮಂಡಲಿ ವತಿಯಿಂದ ಮೇ 18ರ ಶ ನಿವಾರ ರಾತ್ರಿ 8.30ಕ್ಕೆ ಅರಳು ಮಲ್ಲಿಗೆ ಬಾಗಿಲು ವಿಶ್ವೇಶ್ವರಯ್ಯ ಆಟದ ಮೈದಾನದಲ್ಲಿ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ. ಕಲಾಭಿಮಾನಿಗಳು ನಾಟಕಕ್ಕೆ ಪ್ರೋತ್ಸಾಹಿಸಬೇಕೆಂದು ಮಂಡಳಿ ಪ್ರಕಟಣೆ ತಿಳಿಸಿದೆ.

ಇಂದು ಕರಗ ಮಹೋತ್ಸವ: ಶ್ರೀ ಸಪ್ತಮಾತೃಕಾ ಮಾರಿಯಮ್ಮದೇವಿ ಕರಗ ಮಹೋತ್ಸವ ಮೇ 18ರ ರಾತ್ರಿ 11 ರಿಂದ ನಡೆಯಲಿದೆ. 9 ವರ್ಷಗಳಿಂದ ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಸೇರಿ ಆಂಧ್ರ, ತಮಿಳುನಾಡುಗಳಲ್ಲಿಯೂ ಕರಗ ಹೊತ್ತಿರುವ ಆಂಧ್ರದ ಕುಪ್ಪಂ ಪೂಜಾರಿ ಮುನಿರತ್ನಂ ಬಾಲಾಜಿ ಇದೇ 2ನೇ ಬಾರಿಗೆ ದೊಡ್ಡಬಳ್ಳಾಪುರದಲ್ಲಿ ಕರಗ ಹೊರಲಿದ್ದಾರೆ. ಮೇ 20 ರ ಸಂಜೆ 4ಕ್ಕೆ ಒನಕೆ ನಾಟ್ಯ ಮತ್ತು ವಸಂತೋತ್ಸವವಿದೆ.

ಕರಗ ಮಹೋತ್ಸವದ ಅಂಗವಾಗಿ ನೆಲದಾಂಜನೇಯಸ್ವಾಮಿ, ಚೌಡೇಶ್ವರೀದೇವಿ, ಜನಾರ್ಧನಸ್ವಾಮಿ, ಧರ್ಮರಾಯಸ್ವಾಮಿ ಮೊದಲಾದ ದೇವರ ಉತ್ಸವಗಳು ನಡೆಯಲಿವೆ. ನಗರದ ಬೆಸ್ತರಪೇಟೆಯ ವಿವೇಕಾನಂದ ಪ್ರತಿಮೆ ಬಳಿ ಶ್ರೀ ವಿವೇಕಾನಂದ ಗೆಳೆಯರ ಬಳಗದ ವತಿಯಿಂದ ಗೊರವನಹಳ್ಳಿ ಮಹಾಲಕ್ಷ್ಮೀ ದೇವಿಯನ್ನು ಕರೆತಂದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next