Advertisement

ಹಾಸನಾಂಬೆ ಹುಂಡಿಯಲ್ಲಿ ಸಿಕ್ಕಿದವು ಭಕ್ತರ ವಿಚಿತ್ರ ಬೇಡಿಕೆಗಳು

10:09 AM Nov 01, 2019 | Team Udayavani |

ಹಾಸನ: ಹಾಸನಾಂಬಾ ಜಾತ್ರಾ ಮಹೋತ್ಸವದ 11 ದಿನಗಳಲ್ಲಿ ದೇವಾಲಯಕ್ಕೆ ಒಟ್ಟು 3.06 ಕೋಟಿ ರೂ.ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 58.12 ಲಕ್ಷ ರೂ.ಆದಾಯ ಹೆಚ್ಚಾಗಿದೆ.
ವಿಶೇಷ ದರ್ಶನದ ಟಿಕೆಟ್‌ಗಳ ಮಾರಾಟದಿಂದ 1.75 ಕೋಟಿ ರೂ.ಸಂಗ್ರಹವಾಗಿದ್ದರೆ, ಹುಂಡಿ ಕಾಣಿಕೆಯಿಂದ 1.31 ಕೋಟಿ ರೂ.ಸಂಗ್ರಹವಾಗಿದೆ. ಹಾಸನಾಂಬೆ ದೇಗುಲದ ಆವರಣದಲ್ಲಿರುವ ಸಿದ್ದೇಶ್ವರ ದೇವಾಲಯದ ಮುಂಭಾಗ ಬುಧವಾರ ಬೆಳಗ್ಗೆ 8 ಗಂಟೆಗೆ ಆರಂಭವಾದ ಹುಂಡಿಯ ಎಣಿಕೆ ಸಂಜೆ 5.30ರ ವೇಳೆಗೆ ಮುಗಿಯಿತು. ಈ ವರ್ಷ ಹಾಸನಾಂಬ ದೇವಾಲಯದ ಬಾಗಿಲು ಒಟ್ಟು 13 ದಿನ ತೆರೆದಿತ್ತು.

Advertisement

ಈ ಮಧ್ಯೆ, ಭಕ್ತರು ಹಾಸನಾಂಬೆಯ ಸನ್ನಿಧಿಯಲ್ಲಿ ಚಿತ್ರ- ವಿಚಿತ್ರ ಬೇಡಿಕೆಗಳನ್ನು ಮಂಡಿಸಿದ್ದು, ಹುಂಡಿ ತೆರೆದಾಗ ಕಾಣಿಕೆ, ಚಿನ್ನ, ಬೆಳ್ಳಿಯ ಜೊತೆಗೆ ಲಿಖೀತ ಬೇಡಿಕೆಗಳೂ ಅನಾವರಣಗೊಂಡವು;

– ತಾಯೇ ನಮ್ಮ ಸಾಲಗಳನ್ನೆಲ್ಲಾ ತೀರಿಸಿ, ಒಂದು ನಿವೇಶನ ತೆಗೆದುಕೊಳ್ಳಲು ದಯೆ ತೋರಮ್ಮ.

– ನನ್ನ ಮಕ್ಕಳಿಗೆ ಒಳ್ಳೆ ವಿದ್ಯೆ, ಬುದ್ದಿ ಮತ್ತು ಗಂಡನಿಗೆ ಹಾಗೂ ಕುಟುಂಬದವರಿಗೆ ಆಯಸ್ಸು ಕೊಡು ತಾಯಿ.

– ನಾನು ದ್ವಿತೀಯ ಪಿಯುಸಿಯಲ್ಲಿ ಪಾಸ್‌ ಆಗುವಂತೆ ಮಾಡು ತಾಯಿ. ಓದುವ ಆಸಕ್ತಿ ಕರುಣಿಸು, ಒಳ್ಳೆ ಕಾಲೇಜಿನಲ್ಲಿ ಸೀಟು ಸಿಗುವಂತೆ ಮಾಡು.

Advertisement

– ನನ್ನ ತಾಯಿಗೆ ಸರ್ಕಾರಿ ಇಲಾಖೆಯಲ್ಲಿ ಕೆಲಸ ಸಿಗುವಂತೆ ಮಾಡು.

– ಪ್ರೀತಿ ಮಾಡುತ್ತಿರುವ ಹುಡುಗಿ ಮನೆಯವರು ಮತ್ತು ನಮ್ಮ ಮನೆಯವರು ಒಪ್ಪಿಕೊಳ್ಳುವಂತೆ ಮಾಡಿದರೇ ನಾನು ಪ್ರತಿ ವರ್ಷ ನಿನ್ನ ದರ್ಶನಕ್ಕೆ ಬರುತ್ತೀನಿ.

– ಹಾಸನ ಉಪ ವಿಭಾಗಾಧಿಕಾರಿ ಎಚ್‌.ಎಲ್‌.ನಾಗರಾಜ್‌ ಹಾಸನದಲ್ಲೇ ಇರಬೇಕು.

– ನನ್ನ ಮಗಳ ಮದುವೆ ಮಾಡಿ 6 ತಿಂಗಳಾಯ್ತು, ನನ್ನ ಸೈಟು ಮಾರಿ 20 ಲಕ್ಷ ಖರ್ಚು ಮಾಡಿ ಮದುವೆ ಮಾಡಿದೆ, ಈಗ ಗಂಡನ ಮನೆಯಲ್ಲಿ ಹಿಂಸೆ ಕೊಡುತ್ತಿದ್ದಾರೆ. ಅವಳಿಗೆ ನೆಮ್ಮದಿ ಕೊಡು ತಾಯಿ.

– ಬೀಗರ ಮನೆಗೆ ಹೋದರೆ ನಾಯಿಗಿಂತ ಕಡೆಯಾಗಿ ನಮ್ಮ ಕಾಣುತ್ತಿದ್ದಾರೆ. ಸರಿ ಮಾಡು ತಾಯಿ.

– ನನಗೆ ಬೇಗ ಸೈಟು ಸಿಕ್ಕಿ ಮನೆ ಕಟ್ಟಬೇಕು.

– ನನ್ನ ಗಂಡನಿಗೆ ಒಳ್ಳೆ ಬುದ್ದಿ ಕೊಡವ್ವ, ನನ್ನ ಗಂಡ ನಾನು ಹೇಳಿದ ಹಾಗೇ ಕೇಳಬೇಕು.

– ನಾನು ಮದುವೆಯಾಗಿ 10 ವರ್ಷ ಕಳೆದಿದೆ, ನಮಗೆ ಸಂತಾನ ಫ‌ಲ ನೀಡಮ್ಮ. ಇನ್ನು ಒಂದು ವರ್ಷದೊಳಗೆ ಮಗುವಾದರೆ ಪ್ರತಿ ವರ್ಷ ನಿನ್ನ ಸನ್ನಿದಿಗೆ ಬಂದು ಹರಕೆ ತೀರಿಸುತ್ತೇನೆ.

Advertisement

Udayavani is now on Telegram. Click here to join our channel and stay updated with the latest news.

Next