ಹಾಸನ: ಸೂರ್ಯ ಗ್ರಹಣದ ಹಿನ್ನೆಲೆ ಶ್ರೀ ಹಾಸನಾಂಬ ದೇವಾಲಯವು ಮಂಗಳವಾರ ದಿನವಿಡೀ ಬಂದ್ ಆಗಿತ್ತು. ಪೊಲೀಸ್ ಸಿಬ್ಬಂದಿ ಹೊರತುಪಡಿಸಿ ಭಕ್ತರು ದೇಗುಲದತ್ತ ಸುಳಿಯಲಿಲ್ಲವಾದ್ದರಿಂದ ದೇವಾಲಯದ ಒಳ ಮತ್ತು ಹೊರ ಆವರಣ ಬಿಕೋ ಎನ್ನುತ್ತಿತ್ತು.
ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಶ್ರೀ ಹಾಸನಾಂಬ ದೇಗುಲದ ಬಾಗಿಲನ್ನು ಅ.13ರಂದು ತೆರೆದ ನಂತರ ಪ್ರತಿ ದಿನವೂ ಸಾವಿರಾರು ಭಕ್ತರು ದೇವಿ ದರ್ಶನಕ್ಕೆ ಬರುತ್ತಿದ್ದರು.
ಸೂರ್ಯಗ್ರಹಣದ ಪರಿಣಾಮ ಮಂಗಳವಾರ ಬೆಳಗ್ಗೆ 6 ಗಂಟೆಯಿಂದಲೇ ದೇಗುಲ ವನ್ನು ಬಂದ್ ಮಾಡಿ ಮುಖ್ಯಪ್ರವೇಶ ದ್ವಾರ ಸೇರಿ ಎಲ್ಲ ದ್ವಾರಗಳ ಬಾಗಿಲುಗಳಿಗೂ ಬೀಗ ಹಾಕಲಾಗಿತ್ತು.
ಬುಧವಾರ ಹಾಸನಾಂಬೆಗೆ ಮಹಾ ನೈವೇದ್ಯ ಅರ್ಪಣೆ ಸಮಯ ಹೊರತುಪಡಿಸಿ ಬೆಳಗ್ಗೆ 6 ರಿಂದ ಗುರುವಾರ ಬೆಳಗ್ಗೆ 7 ಗಂಟೆವರೆಗೂ ನಿರಂತರವಾಗಿ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಗುರುವಾರ 7 ಗಂಟೆಯ ನಂತರ ಭಕ್ತರಿಗೆ ದರ್ಶನ ಬಂದ್ ಮಾಡಿ ದೇವಿ ಆಭರಣಗಳನ್ನು ತೆಗೆದು ಅಲಂಕಾರ ವಿಸರ್ಜನೆ ಹಾಗೂ ವಿಶೇಷ ಪೂಜೆ ನಂತರ ಮಧ್ಯಾಹ್ನ 12 ಗಂಟೆಗೆ ಶಾಸ್ತ್ರೋಕ್ತವಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಯವರು ಹಾಗೂ ದೇವಾಲಯದ ಆಡಳಿತಾಧಿಕಾರಿಯವರ ಸಮ್ಮುಖದಲ್ಲಿ ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ.