Advertisement

ಹಾಸನಡ್ಕ ಸ.ಕಿ.ಪ್ರಾ. ಶಾಲೆ ತಾತ್ಕಾಲಿಕ ಬಂದ್‌; ಅರ್ಧ ಶತಮಾನದ ಶಾಲೆಗೂ ಕಾಡಿದ ಮಕ್ಕಳ ಕೊರತೆ

03:15 PM Jun 16, 2023 | Team Udayavani |

ಸುಳ್ಯ: ಅಮರಮುಡ್ನೂರು ಗ್ರಾಮದ ಹಾಸನಡ್ಕ ಕಿ.ಪ್ರಾ. ಶಾಲೆ ಮಕ್ಕಳ ಕೊರತೆಯಿಂದ ತಾತ್ಕಾಲಿಕವಾಗಿ ಈ ವರ್ಷ ಬಾಗಿಲು ಮುಚ್ಚಿದೆ.

Advertisement

ಶಾಲೆಯಲ್ಲಿ ಎರಡು ವರ್ಷಗಳಿಂದ ಒಂದನೇ ತರಗತಿಗೆ ಯಾವುದೇ ಪ್ರವೇಶಾತಿ ನಡೆಯದ ಹಿನ್ನೆಲೆಯಲ್ಲಿ ಆ ಶಾಲೆಯ ಸಮೀಪದ ಕುಕ್ಕುಜಡ್ಕ ಶಾಲೆಯ ಜತೆ ವಿಲೀನ ಮಾಡಿ ಇಲ್ಲಿನ ಮಕ್ಕಳನ್ನು ಅಲ್ಲಿಗೆ ಸೇರ್ಪಡೆ ಮಾಡಲಾಗಿದೆ.

2 ವರ್ಷ ದಾಖಲಾತಿ ಇಲ್ಲ
ಹಾಸನಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದೊಮ್ಮೆ 60-80 ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದರು, ಬರಬರುತ್ತ ಖಾಸಗಿ ಶಾಲೆಗಳು, ಆಂಗ್ಲ ಮಾಧ್ಯಮ ಶಾಲೆಗಳು ಆರಂಭಗೊಂಡ ಹಿನ್ನಲೆಯಲ್ಲಿ ಸರಕಾರಿ ಶಾಲೆಗಳತ್ತ ಮಕ್ಕಳ ಸೇರ್ಪಡೆ ಕಡಿಮೆಯಾಗಿದೆ. ಇಲ್ಲಿಯೂ ಇದೇ ಪರಿಣಾಮ ಉಂಟಾಗಿದ್ದು, ಕೆಲವು ವರ್ಷಗಳಿಂದ ಇಲ್ಲಿಯೂ ಮಕ್ಕಳ ಸಂಖ್ಯೆ ಕುಸಿಯುತ್ತಾ ಬಂದಿದೆ. ಕಳೆದ ವರ್ಷ ಹಾಗೂ ಈ ವರ್ಷ 1ನೇ ತರಗತಿಗೆ ಒಬ್ಬರೂ ದಾಖಲಾಗಿಲ್ಲ.
2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲೂ ಇಲ್ಲಿ 1ನೇ ತರಗತಿಗೆ ಶೂನ್ಯ ದಾಖಲಾತಿ ಹಿನ್ನೆಲೆಯಲ್ಲಿ ಇಲ್ಲಿದ್ದ ನಾಲ್ಕು ಮಕ್ಕಳನ್ನು ಸಮೀಪದ ಕುಕ್ಕುಜಡ್ಕ ಶಾಲೆಗೆ ದಾಖಲಿಸಲಾಗಿದೆ. ಅದರಲ್ಲಿ 6ನೇ ತರಗತಿಗೆ ಇಬ್ಬರು, 5ನೇ ತರಗತಿಗೆ ಓರ್ವ, 4ನೇ ತರಗತಿಗೆ ಓರ್ವ ಸೇರ್ಪಡೆಗೊಂಡವರು.

63 ವರ್ಷದ ಶಾಲೆ
ಹಾಸನಡ್ಕ ಶಾಲೆ 1960ರಲ್ಲಿ ಆರಂಭಗೊಂಡ ಶಾಲೆಯಾಗಿದ್ದು, 2010ರಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶಾಲೆ ಯಲ್ಲಿ ಸುವರ್ಣ ಮಹೋತ್ಸವ ಸಂಭ್ರಮ ಆಚರಿಸಲಾಗಿತ್ತು, ಸುಮಾರು 63 ವರ್ಷಗಳ ಕಾಲ ಶೈಕ್ಷಣಿಕ ಚಟುವಟಿಕೆಗಳಿಂದ ಕಂಗೊಳಿ ಸುತ್ತಿದ್ದ ಶಾಲೆ ಈ ವರ್ಷ ಎಲ್ಲವನ್ನೂ ನಿಲ್ಲಿಸಿದೆ. ಇಲ್ಲಿಗೆ ಓರ್ವ ಶಿಕ್ಷಕರನ್ನು ಡೆಪ್ಯುಟೇಶನ್‌ ಮೇಲೆ ನಿಯೋಜಿಸಲಾಗಿತ್ತು, ಇಬ್ಬರು ಅತಿಥಿ ಶಿಕ್ಷಕರು ಕರ್ತವ್ಯದಲ್ಲಿದ್ದರು. ಇಲ್ಲಿ ಶಾಲೆಗೆ ಬೇಕಾದ ಸಭಾಂಗಣ, ಶೌಚಾ ಲಯ ಮತ್ತಿತರ ವ್ಯವಸ್ಥೆಗಳೂ ಇದ್ದವು. ಆದರೂ ಸರಕಾರಿ ಶಾಲೆಗೆ ಮಕ್ಕಳ ಕೊರತೆ ಊರಿನ ವಿದ್ಯಾದೇಗುಲವನ್ನೇ ನಿಶ್ಯಬ್ದ ಮಾಡಿದೆ.

ಒಂದು ವೇಳೆ ಮುಂದಿನ ವರ್ಷದಿಂದ ಈ ಶಾಲೆಗೆ 5ಕ್ಕಿಂತ ಅಧಿಕ ಮಕ್ಕಳ ಸೇರ್ಪಡೆ ಆದಲ್ಲಿ ಹಾಗೂ ಮತ್ತೂ ಅದು ಮುಂದು ವರಿದಲ್ಲಿ ಮತ್ತೆ ಹಾಸನಡ್ಕ ಶಾಲೆ ತೆರೆಯಲಿದೆ ಎಂದು ಶಿಕ್ಷಕರು ಮಾಹಿತಿ ನೀಡಿದ್ದಾರೆ.

Advertisement

ಹಾಸನಡ್ಕ ಶಾಲೆಯಲ್ಲಿ ಮಕ್ಕಳ ಕೊರತೆಯಿತ್ತು, ಆದ್ದರಿಂದ ಅಲ್ಲಿನ ಮಕ್ಕಳನ್ನು ಪೋಷಕರ ಒಪ್ಪಿಗೆ ಪಡೆದು ಪಕ್ಕದ ಶಾಲೆಗೆ ದಾಖಲಿಸಿದ್ದೇವೆ. ಮುಂದೆ ಸರಿಯಾಗಿ ಮಕ್ಕಳ ದಾಖಲಾತಿ ನಡೆದಲ್ಲಿ ಮತ್ತೆ ಶಾಲೆ ತೆರೆಯುತ್ತೇವೆ.
– ರಮೇಶ್‌ , ಬಿಇಒ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next