Advertisement

ಅ.17ರಿಂದ 29ರವರೆಗೆ ಹಾಸನಾಂಬ ಜಾತ್ರೆ

04:18 PM Sep 19, 2019 | Naveen |

ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆಯ ಜಾತ್ರಾ ಮಹೋತ್ಸವ ಅ. 17 ರಿಂದ 29 ರವರೆಗೆ ಒಟ್ಟು 13 ದಿನಗಳ ಕಾಲ ನಡೆಯಲಿದೆ.

Advertisement

ಜಾತ್ರಾ ಮಹೋತ್ಸವ ಸಿದ್ಧತೆಯ ಬಗ್ಗೆ ಸುದ್ದಿಗೋಷ್ಠಿ ಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು, ಅ.17ರಂದು ಮಧ್ಯಾಹ್ನ 12.30ಕ್ಕೆ ಬಾಗಿಲು ತೆರೆಯಲಿದ್ದು, ಅ. 29ರಂದು ಮಧ್ಯಾಹ್ನ 12ಗಂಟೆ ನಂತರ ಬಾಗಿಲು ಮುಚ್ಚ ಲಾಗುವುದು ಎಂದು ಹೇಳಿದರು. ಬಾಗಿಲು ತೆರೆಯುವ ಅ.17ರಂದು ಹಾಗೂ ಬಾಗಿಲು ಮುಚ್ಚುವ ಅ.29 ರಂದು ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಅ. 18 ರಿಂದ ಪ್ರತಿದಿನ ದೇವಿಗೆ ನೈವೇದ್ಯ ಪೂಜಾ ಸಮಯ ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ ಭಕ್ತರಿಗೆ ದರ್ಶನ ಇರುವುದಿಲ್ಲ. ಉಳಿದ ಅವಧಿಯಲ್ಲಿ ರಾತ್ರಿ11ಗಂಟೆಯವರೆಗೆ ದರ್ಶಕ್ಕೆ ಆವಕಾಶವಿರುತ್ತದೆ. ಅ.23, 25 ಮತ್ತು ಅ.27ರ ದಿನಾಂಕಗಳಂದು ರಾತ್ರಿ 11ರಿಂದ ಬೆಳಗ್ಗೆ 6 ಗಂಟೆಯವರೆಗೆ ದೇವಿಗೆ ವಿಶೇಷ ನೈವೇದ್ಯ ಮತ್ತು ಪೂಜೆ ಇರುತ್ತದೆ ಎಂದರು.

ಜಾತ್ರೆಗೆ ಸಿದ್ಧತೆ: ಜಾತ್ರಾ ಮಹೋತ್ಸವದ ಸಿದ್ಧತೆಯ ಸಂಬಂಧ ಎರಡು ಪೂರ್ವಭಾವಿ ಸಭೆ ನಡೆಸಿದ್ದು, ದೇವಾಲಯದ ಸಂಪರ್ಕ ರಸ್ತೆ ದುರಸ್ತಿ, ಪೊಲೀಸ್‌ ಬಂದೋಬಸ್ತ್, ಬ್ಯಾರಿಕೇಡಿಂಗ್‌ ಅಳವಡಿಕೆ, ಆರೋಗ್ಯ ಸ್ವಚ್ಛತೆ ನೈರ್ಮಲ್ಯ ಶೌಚಾಲಯ ಇತರೆ ವ್ಯವಸ್ಥೆಗಳ ಬಗ್ಗೆ ತಯಾರಿ ಮಾಡಿಕೊಳ್ಳಲಾಗಿದೆ.

ಭಕ್ತರಿಗೆ ನೀರಿನ ವ್ಯವಸ್ಥೆ: ದೇವಿಯ ದರ್ಶನ ಪಡೆಯಲು ಸರದಿ ಸಾಲಿನಲ್ಲಿ ಬರುವ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ದೇವಸ್ಥಾನದ ಮುಂಬಾಗಿಲು ಪ್ರವೇಶದ್ವಾರದ ಹತ್ತಿರ, ದೇವಸ್ಥಾನದ ಹಿಂಭಾಗ ವಿಶೇಷ ದರ್ಶನದ ಸರದಿ ಸಾಲಿನ ಹತ್ತಿರ ಹಾಗೂ ಟಿಕೆಟ್ ಕೌಂಟರ್‌ ಹತ್ತಿರ ಶುದ್ಧಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ದೇವಾಲಯದ ಹೊರಗೆ ಸಾಲಿನಲ್ಲಿರುವ ಭಕ್ತಾದಿಗಳಿಗೂ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಮಾಡಲಾಗುತ್ತದೆ. ಮಾಜಿ ಪ್ರಧಾನಿ ದೇವೇಗೌಡರು, ಮುಖ್ಯಮಂತ್ರಿ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲಾ ಸಚಿವರು, ಸಂಸದರು ಶಾಸಕರಿಗೆ ಆಹ್ವಾನ ನೀಡಲಾಗುವುದು ಎಂದರು.

Advertisement

ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ: ದೇವಾಲಯದ ಬಾಗಿಲು ತೆರೆಯುವ ದಿನ ಅ.17 ರಂದು ವಿವಿಧ ಪ್ರಕಾರಗಳ ಕಲಾ ತಂಡಗಳನ್ನು ಕರೆಸಿ ಹಾಸನ ನಗರದಲ್ಲಿ ಸಾಂಪ್ರಾದಾಯಿಕ ಮೆರವಣಿಗೆ ನಡೆಸಲಾಗುವುದು. ದೇವಾಲಯದ ಮುಚ್ಚುವ ಅ.29ರಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ10 ಗಂಟೆಯವರೆಗೆ ಹಾಸನಾಂಬ ಕಲಾಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಆವರಣದಲ್ಲಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭಕ್ತರು ಮತ್ತು ಸಾರ್ವಜನಿಕರ ಹಿತ ದೃಷ್ಟಿಯಿಂದ ಎಲ್ಇಡಿ ಸ್ಕ್ರೀನ್‌ ಟೀವಿ ವ್ಯವಸ್ಥೆ ದೇವಸ್ಥಾನದ ಆಯಕಟ್ಟಿನ ಜಾಗದಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ. ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಪ್ರಭಾರಿ ಅಪರ ಜಿಲ್ಲಾಧಿಕಾರಿ ಎಚ್.ಎಲ್. ನಾಗರಾಜ್‌, ಮುಜಾರಾಯಿ ತಹಶೀಲ್ದಾರ್‌ ಶಾರದಾಂಬ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next