Advertisement

ಚುನಾವಣೆ ಮುಗಿದ್ರೂ ಅಭ್ಯರ್ಥಿಗಳಿಗಿಲ್ಲ ವಿಶ್ರಾಂತಿ

04:05 PM Apr 20, 2019 | Naveen |

ಹಾಸನ: ಜಿಲ್ಲೆಯ ರಾಜಕಾರಣಿಗಳಿಗೆ ಚುನಾವಣೆಗಳೆಂದರೆ ಹಬ್ಬ. ಹಾಗಾಗಿ ಚುನಾವಣೆಗಳಲ್ಲಿ ದಣಿವರಿಯದೆ ಕಳೆದ ಒಂದು
ತಿಂಗಳಿನಿಂದ ಅಬ್ಬರದ ಪ್ರಚಾರ ನಡೆಸಿದ್ದರು. ಚುನಾವಣೆ ಮುಗಿದ ಮರುದಿನವೂ ವಿಶ್ರಾಂತಿ ಬಯಸದೇ, ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಮುಖಂಡರು, ಕಾರ್ಯಕರ್ತರನ್ನು
ಮಾತನಾಡಿಸುತ್ತಾ ಕಾಲ ಕಳೆದರು. ಇನ್ನು ವಿವಿಧ
ಪಕ್ಷಗಳ ಮುಖಂಡರು ತಮ್ಮ ಅಭ್ಯರ್ಥಿಯ ಗೆಲುವಿನ ಲೆಕ್ಕಾಚಾರದಲ್ಲಿದ್ದರು.

Advertisement

ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು ಮತದಾನದ ಮರುದಿನವಾದ ಶುಕ್ರವಾರ ಮಾಧ್ಯಮ ಗೋಷ್ಠಿ ನಡೆಸಿ ಮತದಾರರು, ತಮ್ಮ ಪರ ಪ್ರಚಾರ ನಡೆಸಿದವರಿಗೆ ಧನ್ಯವಾದ ಹೇಳಿ ಶಿವಮೊಗ್ಗಕ್ಕೆ ಬಿಜೆಪಿ ಅಭ್ಯರ್ಥಿಪರ ಪ್ರಚಾರಕ್ಕೆ ತೆರಳುವ ಉತ್ಸಾಹದಲ್ಲಿದ್ದರು.

ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರು ಹೊಳೆನರಸೀಪುರದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿಯಾಗಿ ಚುನಾವಣೆಯ ಬೂತ್‌ವಾರು ಮತದಾನದ ವಿವರ ಪಡೆದು ತಮಗೆ ಬರಬದುದಾದ ಮತಗಳ ಲೆಕ್ಕಾಚಾರದಲ್ಲಿ ಮುಳುಗಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಅವರು ಮುಂಜಾನೆಯಿಂದಲೇ ತಮ್ಮ ನಿವಾಸಕ್ಕೆ ಬಂದ ಮುಖಂಡರು, ಕಾರ್ಯಕರ್ತರನ್ನು ಮಾತನಾಡಿಸಿ ಮತದಾನದ ವಿವರ ಪಡೆದರು. ನಂತರ ಹೊಳೆನರಸೀಪುರ, ಹಾಸನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೇವರ ಉತ್ಸವ ಜಾತ್ರೆಗಳಲ್ಲಿ ಪಾಲ್ಗೊಂಡರು. ಅದರ ನಡುವೆಯೇ ಸುದ್ದಿಗೋಷ್ಠಿ ನಡೆಸಿ ಮತದಾರರು, ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಧನ್ಯವಾದ ಹೇಳಿದರು.ಮಧ್ಯಾಹ್ನ ಶಿವಮೊಗ್ಗಕ್ಕೆ ಜೆಡಿಎಸ್‌ ಅಭ್ಯರ್ಥಿ ಪರ ಪ್ರಚಾರ ನಡೆಸಲು ಹೊರಟರು.

ನಿದ್ದೆ ಮಾಡದ ರೇವಣ್ಣ
ಚುನಾವಣಾ ಪ್ರಚಾರದಲ್ಲಿ ಕಳೆದ ಒಂದು ತಿಂಗಳಿನಿಂದ ತೊಡಗಿಕೊಂಡಿದ್ದ ರೇವಣ್ಣ ಅವರು ಕಣ್ತುಂಬ ನಿದ್ದೆ ಮಾಡಿದ್ದೇ ಇಲ್ಲ. ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗಲೂ ಅವರ ಕಣ್ಣುಗಳು ನಿದ್ದೆಯ ಮಂಪರಿನಲ್ಲಿದ್ದವು. ವಿಶ್ರಾಂತಿಗೆ ಹೋಗಿವಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ವಿಶ್ರಾಂತಿಗೆಂದು ಎಲ್ಲೂ ಹೋಗಲ್ಲ. ಜಿಲ್ಲೆಯ ಜನರ ಋಣ ತೀರಿಸುವುದೊಂದೇ ನಮ್ಮ ಪ್ರಮುಖ ಗುರಿ ಎಂದು ಹೇಳಿದರು. ಏ.21ರ ವರೆಗೂ ಶಿವಮೊಗ್ಗ, ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್‌ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕೆ ತೆರಳುವೆ. ಅಲ್ಲಿಂದ ಬಂದ ಮೇಲೆ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸುವೆ ಎಂದರು.

Advertisement

7 ಕೆ.ಜಿ. ಇಳಿದ ಎ.ಮಂಜು
ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು ಮತದಾನದ ಮರುದಿನ ಹಾಸನಕ್ಕೆ ಬಂದು ವಾಪಸ್‌ ತಮ್ಮ ಹುಟ್ಟೂರು ಹನ್ಯಾಳಿಗೆ ತೆರಳಿದರು. ನಾನು ವಿಶ್ರಾಂತಿಗೆ ಬೇರೆ ಸ್ಥಳಗಳಿಗೆ ಹೋಗುವುದಿಲ್ಲ.
ಇಂದು ನನ್ನ ಮನೆಯಲ್ಲಿ ಪತ್ನಿ ಮತ್ತು ಮೊಮ್ಮಕ್ಕಳೊಂದಿಗೆ ಕಳೆಯುವೆ. ಶನಿವಾರ ಶಿವಮೊಗ್ಗಕ್ಕೆ ತೆರಳಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುವೆ ಎಂದು ಹೇಳಿದರು. ಚುನಾವಣಾ ಪ್ರಚಾರ ಆರಂಭಿಸಿದ ನಂತರ 7 ಕೆ.ಜಿ. ತೂಕ ಇಳಿದಿದೆ. 97
ಕೆ.ಜಿಯಿಂದ 90 ಕ್ಕೆ ಇಳಿದಿರುವೆ ಎಂದೂ 60ರ ಹರೆಯದ ಎ.ಮಂಜು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next