ಬಳ್ಳಾರಿ : ಬಳ್ಳಾರಿ ನಗರ ಸೇರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ಯಾರೊಬ್ಬರು ಬರುವಂತಿಲ್ಲ ಎಂಬ ಜಿಲ್ಲಾಧಿಕಾರಿಗಳ ಆದೇಶದ
ನಡುವೆಯೂ ಹರ್ಯಾಣ ರಾಜ್ಯದಿಂದ ಪ್ಯಾರಾಮೆಡಿಕಲ್ ಪರೀಕ್ಷೆ ನೆಪದಲ್ಲಿ ನೂರಾರು ಯುವಕ-ಯುವತಿಯರು ಭಾನುವಾರ ನಗರಕ್ಕೆ ಬಂದಿದ್ದಾರೆ.
ನರ್ಸಿಂಗ್ ವಿದ್ಯಾರ್ಥಿಗಳಂತೆ ರೈಲು ಮೂಲಕ ನಗರಕ್ಕೆ ಬಂದಿರುವ ನೂರಾರು ವಿದ್ಯಾರ್ಥಿಗಳು, ನಗರದ ವಿವಿಧ ಲಾಡ್ಜ್ ಗಳಲ್ಲಿ ತಂಗಿದ್ದಾರೆ. ತಾವು ಎರಡು ಡೋಸ್ ಲಸಿಕೆ ಪಡೆದಿದ್ದು,
ಕೋವಿಡ್ ಪರೀಕ್ಷೆಯನ್ನೂ ಮಾಡಿಸಿ ಕೊಂಡಿದ್ದೇವೆಂದು ಹೇಳುತ್ತಿದ್ದಾರೆ. ಆದರೆ, ಪರೀಕ್ಷೆ ಬರೆಯಲೆಂದು ಬಂದಿರುವ ಇವರಿಗೆ ಯಾವ ಕಾಲೇಜಿನಲ್ಲಿ ಪರೀಕ್ಷೆ ಬರೆಯುತ್ತೀರಿ ಎಂಬುದು ಗೊತ್ತಿಲ್ಲ. ಪರೀಕ್ಷೆ ಪ್ರವೇಶ ಪತ್ರ ಸಹ ಅವರ ಬಳಿಯಿಲ್ಲ.
ಕೇಳಿದರೆ ತಮ್ಮನ್ನು ಕರೆತಂದಿರುವ ವ್ಯಕ್ತಿಯ ಬಳಿಯಿದೆ ಎನ್ನುತ್ತಾರೆ. ಎಲ್ಲೆಡೆ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ, ಬಳ್ಳಾರಿ ನಗರದಲ್ಲಿ ಕೋವಿಡ್ ಪರಿಸ್ಥಿತಿ ಏನಿದೆ ಎಂಬುದನ್ನು ಅವರು ಸಹ ಯೋಚಿಸದೆ ಬಂದಿದ್ದಾರೆ. ನರ್ಸಿಂಗ್ ಪರೀಕ್ಷೆ ಬರೆಯಲೆಂದು ಹರ್ಯಾಣದಿಂದ ಬಳ್ಳಾರಿಗೆ ಬಂದಿರುವ ನೂರಾರು ವಿದ್ಯಾರ್ಥಿಗಳಲ್ಲಿ ಕೇವಲ ಇಬ್ಬರ ಬಳಿ
ಮಾತ್ರ ನೆಗೆಟಿವ್ ವರದಿಯಿತ್ತು.
ಇದನ್ನೂ ಓದಿ : ಪಿಡಬ್ಲ್ಯೂಡಿ ಖಾಸಗಿ ಕಂಪನಿಯಾ?: ಅಧಿಕಾರಿಗಳಿಗೆ ಸಂಸದ ಉಮೇಶ ಜಾಧವ್ ತರಾಟೆ
ಇನ್ನುಳಿದ ಯಾರ ಬಳಿಯೂ ನೆಗೆಟಿವ್ ವರದಿ ಇರಲಿಲ್ಲ. ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ಲಾಡ್ಜ್ ಗಳತ್ತ ತೆರಳುತ್ತಿದ್ದ ಇವರನ್ನು ಸಂಚಾರಿ ಪೊಲೀಸರು ತಡೆದು ವಿಚಾರಿಸಿದಾಗ ತಬ್ಬಿಬ್ಟಾದ ವಿದ್ಯಾರ್ಥಿಗಳು, ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣ ಪತ್ರವನ್ನು ತೋರಿಸಿದ್ದಾರೆ. ಬಳಿಕ ಅವರನ್ನು ಲಾಡ್ಜ್ ಗಳತ್ತ ಕಳುಹಿಸಿಕೊಡಲಾಯಿತು. ಸದ್ಯ ಇವರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ ಎನ್ನಲಾಗಿದೆ. ಬಳಿಕ ತಾಲೂಕು ಆರೋಗ್ಯಾಧಿಕಾರಿಗಳು ಸಹ ಎಲ್ಲರಿಗೂ ಕೋವಿಡ್ ಪರೀಕ್ಷೆ
ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.