Advertisement

Haryana ಹಿಂಸಾಚಾರ: ಶುಕ್ರವಾರದ ನಮಾಜ್ ಮನೆಯಲ್ಲೇ ಮಾಡಿ ಎಂದ ಮಸೀದಿಗಳು

04:46 PM Aug 04, 2023 | Team Udayavani |

ನುಹ್‌ : ಆರು ಜೀವಗಳನ್ನು ಬಲಿ ತೆಗೆದುಕೊಂಡ ಕೋಮು ಹಿಂಸಾಚಾರದ ನಂತರ ಹರಿಯಾಣದ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿನ ಮಸೀದಿಗಳು ಶುಕ್ರವಾರದ ಪ್ರಾರ್ಥನೆಯನ್ನು ರದ್ದುಗೊಳಿಸಿದ್ದು, ಮನೆಗಳಲ್ಲೇ ತಮ್ಮ ಪ್ರಾರ್ಥನೆಗಳನ್ನು ಮಾಡಲು ಸಲಹೆ ನೀಡಿವೆ.

Advertisement

ನುಹ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಮೆರವಣಿಗೆಯ ಸಂದರ್ಭದಲ್ಲಿ ಸೋಮವಾರ ಘರ್ಷಣೆಗಳು ನಡೆದ ನಂತರ ಹಿಂಸಾಚಾರವು ನೆರೆಯ ಗುರುಗ್ರಾಮ್‌ಗೂ ಹರಡಿತ್ತು, ಅಲ್ಲಿ ಹಲವಾರು ರೆಸ್ಟೋರೆಂಟ್‌ಗಳು ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಿ ಸುಟ್ಟುಹಾಕಲಾಗಿತ್ತು.

ಹಿಂಸಾಚಾರದಿಂದ ಹೆಚ್ಚು ಹಾನಿಗೊಳಗಾದ ಸ್ಥಳಗಳಲ್ಲಿ ಒಂದಾದ ಗುರುಗ್ರಾಮ್‌ನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಸೀದಿಗಳು ಮತ್ತು ತೆರೆದ ಪ್ರದೇಶಗಳಲ್ಲಿ ನಮಾಜ್ ಮಾಡುವುದನ್ನು ತಡೆಯಲು ನಗರದ ಮುಸ್ಲಿಂ ಕೌನ್ಸಿಲ್ ಜನರನ್ನು ಒತ್ತಾಯಿಸಿದೆ.

ಗುರುಗ್ರಾಮ್‌ನ ಸೆಕ್ಟರ್ 57 ರಲ್ಲಿನ ಮಸೀದಿಯೊಂದಕ್ಕೆ ದಾಳಿ ನಡೆಸಿದ ಗುಂಪೊಂದು ಆ 1 ರ ತಡರಾತ್ರಿ ಬೆಂಕಿ ಹಚ್ಚಿ ಒಬ್ಬ ಧರ್ಮಗುರುವನ್ನು ಹತ್ಯೆಗೈದಿತ್ತು.

ಅಕ್ರಮ ವಲಸಿಗರ ಗುಡಿಸಲುಗಳು ನೆಲಸಮ
ಹಿಂಸಾಚಾರ ಪೀಡಿತ ನುಹ್‌ನಿಂದ ಸುಮಾರು 20 ಕಿಮೀ ದೂರದಲ್ಲಿರುವ ತೌರುದಲ್ಲಿ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಕ್ಕಾಗಿ ಹರಿಯಾಣ ಸರ್ಕಾರ ಗುರುವಾರ ಸಂಜೆ ವಲಸಿಗರ ಗುಡಿಸಲುಗಳನ್ನು ನೆಲಸಮಗೊಳಿಸಿದೆ.

Advertisement

ಈ ಹಿಂದೆ ಅಸ್ಸಾಂನಲ್ಲಿ ವಾಸಿಸುತ್ತಿದ್ದ ಬಾಂಗ್ಲಾದೇಶದ ಅಕ್ರಮ ವಲಸಿಗರು ತೌರು ಪಟ್ಟಣದ ಮೊಹಮ್ಮದ್‌ಪುರ ರಸ್ತೆಯ ವಾರ್ಡ್ ಸಂಖ್ಯೆ ಒಂದರಲ್ಲಿ ಹರಿಯಾಣ ಅರ್ಬನ್ ಅಥಾರಿಟಿ ಜಮೀನಿನಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದರು. ಸುಮಾರು ಒಂದು ಎಕರೆ ಪ್ರದೇಶದಲ್ಲಿ 250ಕ್ಕೂ ಹೆಚ್ಚು ಗುಡಿಸಲುಗಳನ್ನು ನಿರ್ಮಿಸಲಾಗಿದ್ದು, ಅವರು ಕಳೆದ ನಾಲ್ಕು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದರು ಎಂದು ವರದಿಯಾಗಿದೆ.

ವಿಎಚ್‌ಪಿ ಮೆರವಣಿಗೆ ಮೇಲಿನ ದಾಳಿಯಲ್ಲಿ ಒಳನುಸುಳುಕೋರರು ಸೇರಿದಂತೆ ಹೊರಗಿನವರು ಭಾಗಿಯಾಗಿದ್ದಾರೆ ಎಂದು ಪೊಲೀಸರು ಮತ್ತು ಆಡಳಿತ ಆರೋಪಿಸಿದೆ.

ಭುಗಿಲೆದ್ದ ಘರ್ಷಣೆಯಲ್ಲಿ ಇಬ್ಬರು ಹೋಮ್ ಗಾರ್ಡ್‌ಗಳು ಮತ್ತು ಒಬ್ಬ ಧರ್ಮಗುರು ಸೇರಿದಂತೆ ಆರು ಜನರು ಸಾವನ್ನಪ್ಪಿದವರಲ್ಲಿ ಸೇರಿದ್ದಾರೆ. ಇದುವರೆಗೆ 176 ಜನರನ್ನು ಬಂಧಿಸಲಾಗಿದೆ ಮತ್ತು 90 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ. ನಲವತ್ತೊಂದು ಪ್ರಕರಣಗಳು ದಾಖಲಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next