ಹರ್ಯಾಣ: ಹರ್ಯಾಣದ ಭಿವಾನಿ ಜಿಲ್ಲೆಯಲ್ಲಿನ ಗಣಿಗಾರಿಕೆ ಪ್ರದೇಶದಲ್ಲಿ ದಿಢೀರ್ ಭೂಕುಸಿತ ಸಂಭವಿಸಿದ ಪರಿಣಾಮ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, ಹಲವಾರು ಮಂದಿ ಅವಶೇಷಗಳಡಿ ಸಿಲುಕಿರುವ ಘಟನೆ ಶನಿವಾರ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಮಹಾರಾಷ್ಟ್ರ: ಹತ್ತು ಸಚಿವರು, 20ಕ್ಕೂ ಅಧಿಕ ಶಾಸಕರಿಗೆ ಕೋವಿಡ್ ಪಾಸಿಟಿವ್: ಡಿಸಿಎಂ ಪವಾರ್
ತೋಷಮ್ ಬ್ಲಾಕ್ ನ ದಡಮ್ ಗಣಿಗಾರಿಕೆ ಪ್ರದೇಶದಲ್ಲಿ ಜಿಲ್ಲಾಡಳಿತ ರಕ್ಷಣಾ ಕಾರ್ಯದಲ್ಲಿ ತೊಡಗಿರುವುದಾಗಿ ವರದಿ ಹೇಳಿದೆ. ಶೀಘ್ರವೇ ರಕ್ಷಣಾ ಕಾರ್ಯದಲ್ಲಿ ತೊಡಗಿ, ಘಟನೆಯಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ನೀಡುವಂತೆ ಸ್ಥಳೀಯ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದಿರುವುದಾಗಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಟ್ರಕ್ ಗಳಲ್ಲಿ ಜನರು ಮತ್ತೊಂದು ಸ್ಥಳಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿಯೇ ಭೂಕುಸಿತ ಸಂಭವಿಸಿದ ಪರಿಣಾಮ ಈ ದುರ್ಘಟನೆ ನಡೆದಿದೆ. ಭೂಕುಸಿತದಿಂದ ಟ್ರಕ್ ಗಳಲ್ಲಿದ್ದ ಜನರು ಅವಶೇಷಗಳಡಿ ಸಿಲುಕುವಂತಾಗಿದೆ ಎಂದು ವರದಿ ವಿವರಿಸಿದೆ.
ಈವರೆಗೆ ಮೂವರನ್ನು ರಕ್ಷಿಸಲಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೃಷಿ ಸಚಿವ ಜೆಪಿ ದಲಾಲ್ ಮತ್ತು ಎಸ್ ಪಿ ಅಜಿತ್ ಸಿಂಗ್ ಶೇಖಾವತ್ ಅವರು ಕೂಡಾ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು. ಪರಿಶೀಲನೆ ನಡೆಸುತ್ತಿದ್ದಾರೆ.
ಕೆಲವು ಜನರು ಸಾವನ್ನಪ್ಪಿರಬಹುದು, ಈಗಾಗಲೇ ನಿಖರವಾದ ಸಂಖ್ಯೆ ಹೇಳಲು ಸಾಧ್ಯವಿಲ್ಲ. ನಮಗೆ ಸಾಧ್ಯವಾದಷ್ಟು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ ಎಂದು ಸಚಿವ ದಲಾಲ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.