ಹೊಸದಿಲ್ಲಿ: 2024ರ ಲೋಕಸಭಾ ಚುನಾವಣೆಗೆ ಕೇವಲ ಎರಡು ತಿಂಗಳು ಬಾಕಿ ಇರುವಂತೆ, ವಿಧಾನಸಭೆ ಚುನಾವಣೆಗೆ ಐದು ತಿಂಗಳು ಬಾಕಿ ಉಳಿದಂತೆ ತನ್ನ ಆಡಳಿತವಿದ್ದ ಹರ್ಯಾಣ (Haryana) ದಲ್ಲಿ ಭಾರತೀಯ ಜನತಾ ಪಕ್ಷವು (BJP) ಮುಖ್ಯಮಂತ್ರಿ ಬದಲಾವಣೆ ಮಾಡುವ ಸಾಹಸ ಮಾಡಿತ್ತು. ಹಿರಿಯ ರಾಜಕಾರಣಿ ಮನೋಹರ್ ಲಾಲ್ ಖಟ್ಟರ್ (Manohar Lal Khattar) ಅವರನ್ನು ಸಿಎಂ ಪಟ್ಟದಿಂದ ಕೆಳಗಿಳಿಸಿ ಎರಡು ಬಾರಿಯ ಶಾಸಕ ನಯಾಬ್ ಸಿಂಗ್ ಸೈನಿ (Nayab Singh Saini) ಅವರನ್ನು ಸಿಎಂ ಮಾಡಿತ್ತು.
ಚುನಾವಣೆಗೆ ಮೊದಲು ಸಿಎಂ ಬದಲಾವಣೆ ಮಾಡುವ ಬಿಜೆಪಿಯ ಶೈಲಿ ಹಲವರಿಗೆ ಹೆಚ್ಚಿನ ಅಚ್ಚರಿ ಮೂಡಿಸಲಿಲ್ಲ. ಆದರೆ ಎರಡು ತಿಂಗಳ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ಹರ್ಯಾಣದಲ್ಲಿ ಗೆದ್ದಿದ್ದು ಕೇವಲ ಐದು ಸ್ಥಾನ ಮಾತ್ರ. ಸತತ ಎರಡು ಅವಧಿಯಲ್ಲಿ ರಾಜ್ಯಭಾರ ಮಾಡಿದ ಬಿಜೆಪಿಗೆ ಹರ್ಯಾಣದಲ್ಲಿ ಸಹಜವಾಗಿಯೇ ಅಧಿಕಾರ ವಿರೋಧಿ ಅಲೆಯಿತ್ತು.
ಇದಕ್ಕೆ ಸರಿಯಾಗಿ ಕೆಲ ದಿನಗಳ ಹಿಂದೆ ಪ್ರಕಟವಾದ ಚುನಾವಣೋತ್ತರ ಸಮೀಕ್ಷೆಯೂ ಇದನ್ನೇ ಸೂಚಿಸುತ್ತಿತ್ತು. ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರರೂಢ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದಿತ್ತು ಎಕ್ಸಿಟ್ ಪೋಲ್ ಭವಿಷ್ಯ.
ಆದರೆ ಮಂಗಳವಾರ (ಅ.08) ನಡೆದ ಮತ ಎಣಿಕೆಯಲ್ಲಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಬಿಜೆಪಿಯ ಈ ಗೆಲುವಿನ ಯಾತ್ರೆಯ ಪ್ರಮುಖ ರೂವಾರಿ ಸಿಎಂ ನಯಾಬ್ ಸಿಂಗ್ ಸೈನಿ. ಕೆಲ ತಿಂಗಳ ಹಿಂದೆ ಕಾಂಗ್ರೆಸ್ ನ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಅವರು ಸೈನಿ ಅವರನ್ನು ʼಡಮ್ಮಿ ಸಿಎಂʼ ಎಂದು ಕರೆದಿದ್ದರು. ಆಡಳಿತ-ವಿರೋಧಿ ಪ್ರಮುಖ ಪಾತ್ರವನ್ನು ವಹಿಸುವ ನಿರೀಕ್ಷೆಯಿದ್ದ ಚುನಾವಣೆಯಲ್ಲಿ, ಸೈನಿ ಅವರು ನಿಜವಾಗಿಯೂ “ನಯಾಬ್” (ಅಸಾಧಾರಣ) ಎಂದು ಸಾಬೀತುಪಡಿಸಿದ್ದಾರೆ.
ವಿಶೇಷವೆಂದರೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಹರ್ಯಾಣದಲ್ಲಿ ಹೆಚ್ಚಿನ ಪ್ರಚಾರ ನಡೆಸಿರಲಿಲ್ಲ. ಸೈನಿ ಅವರೇ ಬಿಜೆಪಿ ಪ್ರಚಾರದ ಮುಂಚೂಣಿಯಲ್ಲಿದ್ದರು. ಆಡಳಿತ ವಿರೋಧಿ ಅಲೆಯನ್ನು ಯಶಸ್ವಿಯಾಗಿ ಎದುರಿಸಿದ ಸೈನಿ ಕೇವಲ 200 ದಿನದ ಆಡಳಿತದಲ್ಲಿ ಇತಿಹಾಸ ಬರೆದಿದ್ದಾರೆ.
ಮಂಗಳವಾರ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಸೈನಿ, “ನಾವು ಸೋತರೆ, ಜವಾಬ್ದಾರಿ ನನ್ನದು. ನಾನು ಈ ಅಭಿಯಾನದ ಮುಖವಾಗಿದ್ದೆ. ಆದರೆ ನಮ್ಮ ಗೆಲುವಿನ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ” ಎಂದು ಹೇಳಿದ್ದರು. ಇದು ಅವರ ನಾಯಕತ್ವದ ಗುಣವನ್ನು ತೋರಿಸುತ್ತದೆ.
ಅತ್ಯಂತ ಸೂಕ್ಷ ಸಮಯದಲ್ಲಿ ನಾಯಕತ್ವದ ಚುಕ್ಕಾಣಿ ಹಿಡಿದ ಸೈನಿ ಮೊದಲ ಯಶಸ್ಸಿನ ಮೆಟ್ಟಿಲೇರಿದ್ದಾರೆ. 2024ರ ಮಾರ್ಚ್ ನಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸೈನಿ, ಅವರಿಗೆ ಮನೋಹರ್ ಲಾಲ್ ಖಟ್ಟರ್ ಬೆಂಬಲ ನೀಡಿದ್ದರು. ಹರ್ಯಾಣ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯ ಹಿಂದೆಯೂ ಖಟ್ಟರ್ ಕೆಲಸ ಮಾಡಿದ್ದರು.
ಕೇಂದ್ರ ಸರ್ಕಾರದ ಕೃಷಿ ನೀತಿ ಮತ್ತು ಅಗ್ನಿಪಥ್ ಯೋಜನೆಯು ಹರ್ಯಾಣದಲ್ಲಿ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿತ್ತು. ಕೃಷಿ ನೀತಿಯ ವಿರುದ್ದ ದೇಶದಾದ್ಯಂತ ರ್ಯಾಲಿಗಳು ನಡೆದರೂ ಅದರ ಕೇಂದ್ರ ಬಿಂದುವಾಗಿದ್ದು ಹರ್ಯಾಣ. ಹೀಗಾಗಿ ಮೋದಿ ಸರ್ಕಾರ ಮತ್ತು ಖಟ್ಟರ್ ಸರ್ಕಾರ ಎರಡೂ ಇದರ ಬಿಸಿ ಅನುಭವಿಸಿತ್ತು.
ಗ್ರೌಂಡ್ ಲೆವೆಲ್ ನಲ್ಲಿ ಅವರ ನಾಯಕತ್ವ, ಪಕ್ಷದ ಪ್ರಚಾರಗಳಲ್ಲಿ ಪ್ರಮುಖ ಪಾತ್ರ ಮತ್ತು ಪಕ್ಷದ ಬಲವಾದ ಸಾಂಸ್ಥಿಕ ಚೌಕಟ್ಟುಗಳು ಸೈನಿ ಅವರ ಸ್ವಂತ ಸ್ಥಾನವಾದ ಲಾಡ್ವಾ ಸೇರಿದಂತೆ ಹಲವಾರು ಪ್ರಮುಖ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಮುನ್ನಡೆಸಲು ಸಹಾಯ ಮಾಡಿತು.
ಮೊದಲ ಬಾರಿಗೆ ಸಿಎಂ ಆಗಿ ಕೇವಲ 210 ದಿನಗಳ ಅವಕಾಶ ಸಿಕ್ಕರೂ ಸೈನಿ ನಡೆಸಿದ ಅಭಿವೃದ್ದಿ ಕಾರ್ಯಗಳು ಜನರ ನಡುವೆ ಹೆಸರು ಬೆಳೆಯುವಂತೆ ಮಾಡಲು ಕಾರಣವಾಯಿತು. ಮುಖ್ಯಮಂತ್ರಿಯಾಗಿ, ಜನಜೀವನ ಸುಧಾರಿಸುವ ಉದ್ದೇಶದಿಂದ ಸೈನಿ ಹಲವಾರು ಕ್ರಮಗಳನ್ನು ಜಾರಿಗೆ ತಂದರು. ಅವರು ಗ್ರಾಮ ಪಂಚಾಯಿತಿಗಳ ವೆಚ್ಚದ ಮಿತಿಯನ್ನು 5 ಲಕ್ಷದಿಂದ 21 ಲಕ್ಷಕ್ಕೆ ಹೆಚ್ಚಿಸಿದರು, ಈ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಅನುವು ಮಾಡಿಕೊಟ್ಟರು.
ಜನರಿಗೆ ವಿದ್ಯುತ್ ಹೊರೆ ಬೀಳದಂತೆ ಯೂನಿಟ್ ಗಳಿಗೆ ಕಡಿಮೆ ದರ ನಿಗದಿ ಮಾಡಿದರು. ಪ್ರಧಾನ್ ಮಂತ್ರಿ ಸೂರ್ಯ ಘರ್ ಮುಫ್ತಿ ಬಿಜಲಿ ಯೋಜನಾಗೆ ರಾಜ್ಯ ಸರ್ಕಾರದಿಂದ ಹೆಚ್ಚಿನ ಸಬ್ಸಿಡಿ ನೀಡಿ ಹೆಚ್ಚಿನ ಸೋಲಾರ್ ಬಳಕೆಗೆ ಒತ್ತು ನೀಡಿದರು. ಇದೆಲ್ಲಾ ಇದೀಗ ಮತಗಳಾಗಿ ಪರಿವರ್ತನೆಯಾಗಿದೆ.