Advertisement

ಹರ್ಯಾಣ ಕೋಮು ಘರ್ಷಣೆ: 3 ಮಂದಿ ಮೃತ್ಯು, ಇಂಟರ್ನೆಟ್ ಸ್ಥಗಿತ, ಶಾಲೆಗಳಿಗೆ ರಜೆ

09:23 AM Aug 01, 2023 | Team Udayavani |

ಚಂಡೀಗಢ: ಹರ್ಯಾಣದ ಮೇವತ್‌ ಪ್ರದೇಶದ ನಂದ್‌ಗ್ರಾಮ್‌ನಲ್ಲಿ ಸೋಮವಾರ ವಿಶ್ವ ಹಿಂದೂ ಪರಿಷತ್‌ ವತಿಯಿಂದ ಆಯೋಜಿಸಲಾಗಿದ್ದ ಮೆರವಣಿಗೆ ಮೇಲೆ ಇನ್ನೊಂದು ಕೋಮಿನ ಯುವಕರು ಕಲ್ಲುತೂರಾಟ ನಡೆಸಿ ಉಂಟಾದ ಕೋಮು ಘರ್ಷಣೆಯಲ್ಲಿ ಮೂರು ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿರುವ ಕುರಿತು ವರದಿಯಾಗಿದೆ.

Advertisement

ಸೋಮವಾರ ನಡೆದ ಘರ್ಷಣೆಯಲ್ಲಿ ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿಗಳು ಮತ್ತು ಓರ್ವ ನಾಗರಿಕ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.

ಹರ್ಯಾಣದ ನುಹ್‌ನಲ್ಲಿ ಧಾರ್ಮಿಕ ಮೆರವಣಿಗೆಯ ಸಂದರ್ಭದಲ್ಲಿ ಒಂದು ಗುಂಪು ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆಯನ್ನು ತಡೆಯಲು ಪ್ರಯತ್ನಿಸಿದೆ ಈ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ಭುಗಿಲೆದ್ದಿದ್ದರಿಂದ ಕಲ್ಲು ತೂರಾಟ ನಡೆಸಿ ಉದ್ರಿಕ್ತರ ಗುಂಪು ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ.

ನುಹ್‌ನಲ್ಲಿ ಹಿಂಸಾಚಾರದ ಸುದ್ದಿ ಹರಡುತ್ತಿದ್ದಂತೆ, ಎರಡು ಸಮುದಾಯಗಳ ಸದಸ್ಯರು ಗುರುಗ್ರಾಮ್‌ನ ಸೊಹ್ನಾ ರಸ್ತೆಯ ಬಳಿ ಘರ್ಷಣೆ ನಡೆಸಿದರು, ಇದರ ಪರಿಣಾಮವಾಗಿ ಹಲವಾರು ವಾಹನಗಳಿಗೆ ಹಾನಿಯಾಗಿದೆ. ಪ್ರತಿಭಟನಾಕಾರರು ಗಂಟೆಗಟ್ಟಲೆ ರಸ್ತೆ ತಡೆ ನಡೆಸಿದರು. ಈ ವೇಳೆ ತಡೆಯಲು ಬಂದ ಪೊಲೀಸರ ಮೇಲೂ ಹಲ್ಲೆ ನಡೆಸಲಾಯಿತು.

Advertisement

ಇಂಟರ್ನೆಟ್ ಸ್ಥಗಿತ, ಶಾಲೆಗಳು ಬಂದ್ :
ಉದ್ವಿಗ್ನತೆಯನ್ನು ನಿಯಂತ್ರಿಸಲು ನುಹ್ ಜಿಲ್ಲೆಯಲ್ಲಿ ಬುಧವಾರ, ಆಗಸ್ಟ್ 2 ರವರೆಗೆ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಹರಿಯಾಣ ಸರ್ಕಾರ ತಿಳಿಸಿದೆ. ಅಲ್ಲದೆ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಗುರುಗ್ರಾಮ್ ಮತ್ತು ಫರಿದಾಬಾದ್‌ನ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳಿಗೆ ಮಂಗಳವಾರದಂದು ರಜೆ ಘೋಷಿಸಲಾಗಿದೆ. ಗುರುಗ್ರಾಮ್ ಮತ್ತು ನುಹ್‌ನಲ್ಲಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಲಾಗಿದೆ.

ಇದನ್ನೂ ಓದಿ: ಕೇದಾರನಾಥ ಯಾತ್ರೆಗೆ ತೆರಳಿದ್ದ ಚಿಕ್ಕಮಗಳೂರು ಮೂಲದ ಯುವಕ ಮೃತ್ಯು

 

Advertisement

Udayavani is now on Telegram. Click here to join our channel and stay updated with the latest news.

Next