Advertisement

Haryana ಬಿಜೆಪಿ ಸರಕಾರಕ್ಕೆ ಶಾಕ್: ಕೈಗೆ ಬೆಂಬಲ ನೀಡಿದ 3 ಪಕ್ಷೇತರರು

03:35 PM May 08, 2024 | Vishnudas Patil |

ಗುರುಗ್ರಾಮ್: ಹರಿಯಾಣದಲ್ಲಿ ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರಕಾರವನ್ನು ಬೆಂಬಲಿಸುತ್ತಿದ್ದ ಮೂವರು ಪಕ್ಷೇತರ ಶಾಸಕರು ಮಂಗಳವಾರ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ.

Advertisement

ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಬಿಜೆಪಿಯ ಹಿಸಾರ್ ಲೋಕಸಭೆ ಅಭ್ಯರ್ಥಿ ರಂಜಿತ್ ಸಿಂಗ್ ರಾಜೀನಾಮೆ ನೀಡಿದ ಬಳಿಕ 90 ಸದಸ್ಯರ ಸದನ ಪ್ರಸ್ತುತ 88 ಸದಸ್ಯರ ಬಲವನ್ನು ಹೊಂದಿದೆ. ಸದನದಲ್ಲಿ ಕೇವಲ 43 ಶಾಸಕರ ಬಲ ಹೊಂದಿರುವ ಕಾರಣ ಬಿಜೆಪಿ ಸರಕಾರ ಸಂಕಷ್ಟಕ್ಕೆ ಸಿಲುಕಿದೆ.

ವಿಧಾನಸಭೆಯ ವಿಪಕ್ಷದ ನಾಯಕ, ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ, ಈ ಬೆಳವಣಿಗೆಗೆ ಪ್ರತಿಕ್ರಿಯಿಸಿ ರಾಜ್ಯದಲ್ಲಿ ತತ್ ಕ್ಷಣ ರಾಷ್ಟ್ರಪತಿ ಆಳ್ವಿಕೆ ಹೇರಿ ವಿಧಾನಸಭೆಗೆ ಶೀಘ್ರ ಚುನಾವಣೆ ಘೋಷಿಸಬೇಕು ಎಂದು ಕರೆ ನೀಡಿದ್ದಾರೆ.

ಮೂವರು ಶಾಸಕರಾದ ಚಾರ್ಖಿ ದಾದ್ರಿಯ ಸೋಂಬಿರ್ ಸಾಂಗ್ವಾನ್, ಪುಂಡ್ರಿಯ ರಣಧೀರ್ ಸಿಂಗ್ ಗೊಲ್ಲೆನ್ ಮತ್ತು ನಿಲೋಖೇರಿಯ ಧರಂಪಾಲ್ ಗೊಂಡರ್ ಅವರು ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿ ರೋಹ್ಟಕ್‌ನಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಹಾಜರಿದ್ದರು.

ಬಹುಮತ ಇದೆ
ಹರಿಯಾಣ ಸರ್ಕಾರದ ಮಾಧ್ಯಮ ಕಾರ್ಯದರ್ಶಿ ಪರ್ವೀನ್ ಅಟ್ರೆ ಪ್ರತಿಕ್ರಿಯಿಸಿ, ನಯಾಬ್ ಸಿಂಗ್ ಸೈನಿ ಅವರ ಸರ್ಕಾರಕ್ಕೆ 47 ಶಾಸಕರ ಬೆಂಬಲವಿದೆ ಎಂದು ಹೇಳಿದ್ದಾರೆ. ಮಾರ್ಚ್‌ನಲ್ಲಿ ಬಿಜೆಪಿಗೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡ ದುಷ್ಯಂತ್ ಚೌಟಾಲಾ ನೇತೃತ್ವದ ಜನನಾಯಕ್ ಜನತಾ ಪಾರ್ಟಿಯ ನಾಲ್ವರು ಶಾಸಕರ ಹೆಸರನ್ನು ಸಹ ಪಟ್ಟಿ ಮಾಡಿದ್ದಾರೆ.

Advertisement

ಬಿಜೆಪಿಯ 40 ಶಾಸಕರಿದ್ದು, ಹರಿಯಾಣದ ಲೋಕಿತ್ ಪಕ್ಷದ ಗೋಪಾಲ್ ಕಾಂಡ, ಇಬ್ಬರು ಪಕ್ಷೇತರರು ಮತ್ತು ನಾಲ್ವರು ಜೆಜೆಪಿ ಶಾಸಕರ ಬೆಂಬಲವಿದೆ ಎಂದು ಅಟ್ರೆ ಹೇಳಿದ್ದಾರೆ.

ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್ ಈ ವರ್ಷದ ಫೆಬ್ರವರಿ 23 ರಂದು ಸೈನಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ತಂದಿದ್ದು ಆ ದಿನಾಂಕದಿಂದ ಆರು ತಿಂಗಳ ನಂತರ ಯಾವುದೇ ಹೊಸ ನಿರ್ಣಯವನ್ನು ತರಲು ಸಾಧ್ಯವಿಲ್ಲ ಎಂದು ಅಟ್ರೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next