Advertisement

ಕಟಾವು ವೆಚ್ಚ ಸಮಸ್ಯೆ: ಶೀಘ್ರ ಸಮಿತಿ ರಚನೆ

12:23 PM Jul 03, 2019 | Team Udayavani |

ಬಾಗಲಕೋಟೆ: ಕಾರ್ಖಾನೆಗಳು ರೈತರಿಂದ ಕಬ್ಬು ಕಟಾವು ಮತ್ತು ಸಾರಿಗೆ (ಎಚ್ಎನ್‌ಟಿ) ವೆಚ್ಚವನ್ನು ಒಂದೊಂದು ಕಾರ್ಖಾನೆ ಒಂದೊಂದು ರೀತಿ ಪಡೆಯುತ್ತಿದ್ದು, ಇದು ಕಾರ್ಖಾನೆ ಮತ್ತು ರೈತರ ಮಧ್ಯೆ ಸಮಸ್ಯೆಗೆ ಕಾರಣವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ನೀಡಲು ಪರಿಶೀಲನಾ ಸಮಿತಿ ರಚಿಸಲಾಗುವುದು ಎಂದು ಸಕ್ಕರೆ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು.

Advertisement

ನವನಗರದ ಹೊಸ ಪ್ರವಾಸಿ ಮಂದಿರದಲ್ಲಿ ನಡೆದ ಜಿಲ್ಲೆಯ ಕಬ್ಬು ಬೆಳೆಗಾರರ ಸಭೆಯಲ್ಲಿ ಅವರು ಮಾತನಾಡಿದರು.

ಕಬ್ಬು ಕಟಾವು ವೆಚ್ಚಕ್ಕಿಂತ ಸಾರಿಗೆ ವೆಚ್ಚ ಹೆಚ್ಚಳವಾಗಬಾರದು ಎಂಬ ನಿಯಮವಿದೆ. ಆದರೆ, ಎಲ್ಲಾ ಸಕ್ಕರೆ ಕಾರ್ಖಾನೆಗಳು, ಕಟಾವಿಗಿಂತ ಸಾರಿಗೆ ವೆಚ್ಚವನ್ನೇ ಹೆಚ್ಚು ಪಡೆಯುತ್ತಿವೆ. ಹೀಗಾಗಿ ಸರ್ಕಾರದ ನಿಯಮಗಳಲ್ಲಿ ಕೆಲವು ಬದಲಾವಣೆ ಮಾಡುವ ಜತೆಗೆ, ನಿರ್ದಿಷ್ಟ ಮತ್ತು ಕಡ್ಡಾಯ ಮಾನದಂಡ ರೂಪಿಸಲು ಸಕ್ಕರೆ ಕಾರ್ಖಾನೆಗಳು, ರೈತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಳಗೊಂಡ ಒಂದು ಕಮೀಟಿ ರಚಿಸಲಾಗುವುದು. ಕಮೀಟಿಯ ವರದಿ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತೂಕ ಯಂತ್ರ ಅಳವಡಿಸಿ:

ಕಬ್ಬು ಬೆಳೆಗಾರ ಪ್ರಮುಖರು ಮಾತನಾಡಿ, ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲಿ ಅವರೇ ಸ್ಥಾಪಿಸಿದ ತೂಕದ ಯಂತ್ರ (ವೇಬ್ರಿಜ್‌) ಇವೆ. ಕಬ್ಬು ತೂಕದಲ್ಲೇ ಕಾರ್ಖಾನೆಯವರು ನಮಗೆ ಮೋಸ ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರವೇ ಎಲ್ಲ ಕಾರ್ಖಾನೆಗಳಲ್ಲಿ ವೇಬ್ರಿಜ್‌ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

Advertisement

ಕೇಂದ್ರ ಸರ್ಕಾರದ ಎಫ್‌ಆರ್‌ಪಿ ನಿಯಮಾವಳಿ ಪ್ರಕಾರ, ಉತ್ತರ ಕರ್ನಾಟಕ ಭಾಗದ ಸಕ್ಕರೆ ಕಾರ್ಖಾನೆಗಳೇ ಎಚ್ಎನ್‌ಟಿ ವೆಚ್ಚ ಭರಿಸಬೇಕು. ಎಫ್‌ಆರ್‌ಪಿ ದರದ ಅನ್ವಯ ಕಬ್ಬು ದರ ನೀಡುವುದಾಗಿ ಹಿಂದೆ ಎಲ್ಲ ಕಾರ್ಖಾನೆಗಳು, ಜಿಲ್ಲಾಧಿಕಾರಿಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾರೆ. ಆದರೆ, ಈಗ ಎಚ್ಎನ್‌ಟಿ ಕಡಿತಗೊಳಿಸಿ, ಕಬ್ಬು ಬಾಕಿ ಹಣ ಕೊಡುತ್ತಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತದೆ. ಎಚ್.ಎನ್‌.ಟಿ ದರ ಕಡಿತಗೊಳಿಸದೇ ಬಾಕಿ ಕೊಡಿಸಬೇಕು ಎಂದು ಒತ್ತಾಯಿಸಿದರು. ಎಲ್ಲ ಕಾರ್ಖಾನೆಗಳು ಪ್ರತಿ ವರ್ಷ ಸಕ್ಕರೆ ಇಳುವರಿ ನೀಡುತ್ತಾರೆ. ಇದನ್ನು ಮೂರು ವರ್ಷಕ್ಕೊಮ್ಮೆ ಮಾಡಬೇಕು ಎಂದೂ ರೈತರು ಆಗ್ರಹಿಸಿದರು. ರೈತರ ಸಲಹೆ ಪಡೆದ ಸಚಿವ ತಿಮ್ಮಾಪುರ, ಬೆಂಗಳೂರಿನಲ್ಲಿ ಜು.3ರಂದು ನಡೆಯುವ ಸಭೆಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ರೈತ ಮುಖಂಡರಾದ ಆರ್‌.ಎಸ್‌. ಪಾಟೀಲ, ಗೋವಿಂದಪ್ಪ ಗುಜ್ಜನವರ, ಬಿ.ವಿ. ಹೊಸಮನಿ, ಆರ್‌.ಟಿ. ಬುದ್ನಿ, ಮಲ್ಲಪ್ಪ ಹುಲ್ಯಾಳ, ಭೀಮಪ್ಪ, ಸದಾಶಿವ, ಕೆ.ಟಿ. ಪಾಟೀಲ, ಡಾ|ಕೆ.ಆರ್‌. ಮೊಕಾಶಿ, ಡಾ|ವಿ.ಕೆ. ಹೊಸಟ್ಟಿ, ರಂಗನಗೌಡ ಪಾಟೀಲ, ಕೃಷ್ಣಪ್ಪ ಸಾರವಾಡ, ಆರ್‌.ಬಿ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next