ಹಾರೂಗೇರಿ: ವಿದ್ಯಾರ್ಥಿ ಬದುಕು ಒಂದು ತಪಸ್ಸು. ಏಕಾಗ್ರತೆಯಿಂದ ಅಧ್ಯಯನ ಮಾಡಿ ಆ ತಪಸ್ಸನ್ನು ಗೆಲ್ಲುವುದೇ ವಿದ್ಯಾರ್ಥಿಯ ಸಾಧನೆಯಾಗಬೇಕೆಂದು ಪ್ರಗತಿಪರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಈರನಗೌಡ ಪಾಟೀಲ ಹೇಳಿದರು.
ಸ್ಥಳೀಯ ಶ್ರೀ ಸಿದ್ಧೇಶ್ವರ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯ ದಿ ಎಕ್ಸಲೆಂಟ್ ಶಾಲೆಯಲ್ಲಿ ಮಂಗಳವಾರ ಸಂಜೆ ನಡೆದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಸಹಾಯಧನ ವಿತರಣಾ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಸ್ಪರ್ಧಿಸಲು ವಿದ್ಯಾರ್ಥಿಗಳು ಸನ್ನದ್ಧರಾಗಿರಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಪ್ರದೀಪಘಂಟಿ ಮಹಾರಾಜರು ಆಶೀರ್ವಚನ ನೀಡಿ, ವಿದ್ಯಾರ್ಥಿಗಳಲ್ಲಿ ಗೆಲ್ಲುವ ಹಂಬಲವಿರಬೇಕು. ಕಠಿಣ ಪರಿಶ್ರಮ, ಸತತ ಅಧ್ಯಯನ ಮತ್ತು ಚಿತ್ತಶುದ್ಧಿಯಿಂದ ಅಸಾಧ್ಯವಾದುದನ್ನು ಸಾಧಿಸಲು ಸಾಧ್ಯ ಎಂದರು. ಅಬಕಾರಿ ಎಸ್‌ಐ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರ್‍ಯಾಂಕ್ ಪಡೆದ ದತ್ತಗುರು ಅಥಣಿ ಮತ್ತು ಖೇಲೋ ಇಂಡಿಯಾ ಯುಥ್ ಗೇಮ್‌ನಲ್ಲಿ ಚಿನ್ನದ ಪದಕ ಪಡೆದ ದಾನೇಶ್ವರಿ ಠಕ್ಕಣ್ಣವರ ಅವರನ್ನು ಸಂಸ್ಥೆ ವತಿಯಿಂದ ಸತ್ಕರಿಸಿ, ಗೌರವಿಸಲಾಯಿತು. ಈ ವೇಳೆ ಎಕ್ಸಲೆಂಟ್ ಟ್ಯಾಲೆಂಟ್ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ 40 ವಿದ್ಯಾರ್ಥಿಗಳಿಗೆ ಸಹಾಯಧನ ಮತ್ತು ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.
ಸಂಸ್ಥೆ ಅಧ್ಯಕ್ಷ ಬಿ.ಜಿ. ಕಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗೋಪಾಲ ಪೂಜೇರಿ ಸಮಾರಂಭ ಉದ್ಘಾಟಿಸಿದರು. ಪ್ರಾಚಾರ್ಯ ಮದುಸೂಧನ ಬೀಳಗಿ, ಟಿ.ಎಸ್.ವಂಟಗೂಡಿ, ಮುಖ್ಯಾಧ್ಯಾಪಕಿ ಕವಿತಾ ಕಶೆಟ್ಟಿ, ಭುಜಬಲಿ ಹರವಿ, ಉದಯ ಆಲಗೂರ ಸೇರಿದಮತೆ ಇತರರು ಇದ್ದರು. ಸಂಸ್ಥೆ ಕಾರ್ಯದರ್ಶಿ ಎಲ್.ಬಿ.ಕಶೆಟ್ಟಿ ಸ್ವಾಗತಿಸಿದರು. ಅಮಿತ್ ಸನದಿ ವಂದಿಸಿದರು.