ಸಾಗರ: ಮರಳು ದಂಧೆ ನಡೆಸುವವರಿಂದ ಶಾಸಕ ಎಚ್.ಹಾಲಪ್ಪ ಹರತಾಳು ಕಮಿಷನ್ ಪಡೆಯುತ್ತಾರೆ. ಈ ಬಗ್ಗೆ ಧರ್ಮಸ್ಥಳದ ಮಂಜುನಾಥೇಶ್ವರ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಸಿದ್ಧ ಎಂದು ಮಾಜಿ ಶಾಸಕ, ಕಾಂಗ್ರೆಸ್ ರಾಜ್ಯ ವಕ್ತಾರ ಗೋಪಾಲಕೃಷ್ಣ ಬೇಳೂರು ಘೋಷಿಸುವ ಮೂಲಕ ಆರಂಭವಾದ ವಿವಾದ ಇದೀಗ ಒಂದು ಸುತ್ತು ಬಂದಿದೆ.
ಈ ಸಂಬಂಧ ಶುಕ್ರವಾರ ಪತ್ರಿಕಾ ಪ್ರಕಟಣೆ ಹಾಗೂ ವಿಡಿಯೋ ಬಿಡುಗಡೆ ಮಾಡಿರುವ ಬೇಳೂರು ಅವರು, ಹಾಲಪ್ಪ ಅವರು ಸವಾಲಿನಲ್ಲಿ ತಿಳಿಸಿರುವಂತೆ ನಾನು ಫೆ. 12ರ ಶನಿವಾರ ಮಧ್ಯಾಹ್ನ 12 ಕ್ಕೆ ಧರ್ಮಸ್ಥಳಕ್ಕೆ ಹೋಗುತ್ತಿದ್ದೇನೆ. ಅದಕ್ಕಾಗಿ ಗೋವಾದಲ್ಲಿನ ಚುನಾವಣಾ ಪ್ರಚಾರ ಕೆಲಸವನ್ನೂ ರದ್ದುಗೊಳಿಸಿದ್ದೇನೆ. ಹಾಲಪ್ಪ ಅವರು ತಮ್ಮ ಜೊತೆಗೆ ವಿನಾಯಕಭಟ್ಟರನ್ನೂ ಕರೆದುಕೊಂಡು ಧರ್ಮಸ್ಥಳದ ಮಂಜುನಾಥೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಆಣೆ ಪ್ರಮಾಣ ಮಾಡಲಿ. ನಾನು ಕೂಡ ಈ ರೀತಿಯ ಯಾವುದೇ ಲಂಚವನ್ನು ನನ್ನ ಶಾಸಕ ಅವಧಿಯಲ್ಲಿ ಪಡೆದಿಲ್ಲ ಎಂದು ಪ್ರಮಾಣ ಮಾಡುವೆ ಎಂದು ಸಾರಿದ್ದಾರೆ.
ಪಕ್ಕದ ರಾಜ್ಯ ಗೋವಾದಲ್ಲಿ ಫೆ. 14ಕ್ಕೆ ಚುನಾವಣೆ ನಡೆಯಲಿದೆ. 11ಕ್ಕೆ ಬಹಿರಂಗ ಪ್ರಚಾರ ಮುಗಿಯುತ್ತದೆ. ಹೀಗಿರುವಾಗ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಫೆ. 12ಕ್ಕೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲು ಅಡ್ಡಿ ಏನಿದೆ ಎಂದು ಶಾಸಕ ಹಾಲಪ್ಪ ವ್ಯಂಗ್ಯವಾಗಿ ಪ್ರಶ್ನಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಬೇಳೂರು, ಬಹಿರಂಗ ಪ್ರಚಾರ ಮುಗಿಯುವುದು 12ರ ಸಂಜೆಗೆ. ಮೂರು ಬಾರಿ ಎಂಎಲ್‌ಎ, ಒಂದು ಬಾರಿ ಸಚಿವರಾಗಿರುವ ತಮಗೆ ಸರಿಯಾದ ಮಾಹಿತಿ ಇಲ್ಲದಿದ್ದರೂ ದೊಡ್ಡ ಮೇಧಾವಿ ತರಹ ಶೋ ಕೊಡುತ್ತಿದ್ದೀರಿ ಎಂದು ತಿರುಗೇಟು ನೀಡಿದ್ದಾರೆ.
ಧರ್ಮಸ್ಥಳದ ಭೇಟಿ ಸಂಬಂಧ ಫೆ. 13 ಎಂದು ಮೊದಲು ದಿನಾಂಕ ನಿಗದಿ ಮಾಡಿದ್ದು ನೀವು. ಅದಕ್ಕೆ ಒಪ್ಪಿ ನಾನು ನಿಮ್ಮ ಸೋದರ ಸಂಬಂಧಿ ರವಿ ಬಸ್ರಾಣಿ ಅವರಿಗೂ ಮಾಹಿತಿ ನೀಡಿದ್ದೆ. ನಂತರ ದಿನಾಂಕ ಬದಲಿಸಿದವರು ನೀವು. ತಮಗೆ ಮಾತ್ರ ಕೆಲಸ ಇರುತ್ತದೆ, ಬೇರೆಯವರಿಗೆ ಇರಲ್ಲ ಎನ್ನುವುದು ಮೊಂಡುತನ ಅಲ್ಲವೇ ಎಂದು ಕಟುವಾಗಿ ಪ್ರಶ್ನಿಸಿರುವ ಬೇಳೂರು, ಬೇಳೂರು ಮನೆಮನೆ ಪ್ರಚಾರಕ್ಕೆ ಹೋಗಲು ಅವರಿಗೆ ಅಲ್ಲಿನ ಭಾಷೆ ಕೊರತೆ ಇದೆ. ಅವರು ಯಾವ ಭಾಷೆಯಲ್ಲಿ ಗೋವಾದಲ್ಲಿ ಪ್ರಚಾರ ಮಾಡುತ್ತಾರೆ ಎಂದು ಅಪಹಾಸ್ಯ ಮಾಡಿರುವಿರಿ. ಪ್ರಧಾನಿ ನರೇಂದ್ರ ಮೋದಿಯವರಿಗೆ, ಅಮಿತ್ ಷಾ ಅವರಿಗೆ ಕನ್ನಡ ಬರದಿದ್ದರೂ ಕರ್ನಾಟಕಕ್ಕೆ ಬಂದು ಚುನಾವಣಾ ಪ್ರಚಾರ ಮಾಡಿ ಹೋಗ್ತಾವುದು, ಸಿ.ಟಿ. ರವಿ ತಮಿಳುನಾಡು ಉಸ್ತುವಾರಿ ಆದರೂ ತಮಿಳು ಬರದೆ ತೊದಲಿ ಮಾತನಾಡುವುದು, ತಮ್ಮ ಪಕ್ಷದ ಕರ್ನಾಟಕ ಉಸ್ತುವಾರಿ ಅವರಿಗೆ ಕನ್ನಡ ಬರದಿರುವುದನ್ನು ನೆನಪಿಸಿಕೊಳ್ಳಿ ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಮತಯಾಚನೆಗೆ ಭಾಷೆ ಮುಖ್ಯ ಅಲ್ಲ. ಬಂದಿರೋದು ಚುನಾವಣೆಗೆ ಮತ ಕೇಳೋಕೆ ಅಂತ ಜನರಿಗೇ ಗೊತ್ತಿರುವಾಗ ನೀವು ಇಂತಹ ಪ್ರಶ್ನೆ ಕೇಳಿ ಬಫೂನ್ ಆಗಿದ್ದೀರಿ ಎಂದು ಲೇವಡಿ ಮಾಡಿದ್ದಾರೆ.
ಈಗಾಗಲೇ ಶಾಸಕ ಹಾಲಪ್ಪ, ನಾವು ಧರ್ಮಸ್ಥಳಕ್ಕೆ ಶ್ರದ್ಧಾಭಕ್ತಿಯಿಂದ ನಡೆದುಕೊಂಡವರು. ನಾನು ಕಮಿಷನ್ ಪಡೆದಿಲ್ಲ ಎನ್ನುವ ಧೈರ್ಯದಿಂದ ಧರ್ಮಸ್ಥಳಕ್ಕೆ ಪ್ರಮಾಣ ಮಾಡಲು ಒಪ್ಪಿಕೊಂಡಿದ್ದೇನೆ ಎಂದು 12ನೇ ತಾರೀಖು ಧರ್ಮಸ್ಥಳಕ್ಕೆ ತೆರಳುವುದನ್ನು ಈಗಾಗಲೇ ದೃಢಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.