ಹೊಸದಿಲ್ಲಿ: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದಿಂದ ಆಹಾರ ಸಂಸ್ಕರಣ ಖಾತೆ ಸಚಿವೆ, ಶಿರೋಮಣಿ ಅಕಾಲಿ ದಳದ ನಾಯಕಿ ಹರ್‌ಸಿಮ್ರತ್ ಕೌರ್ ಬಾದಲ್ ರಾಜೀನಾಮೆ ನೀಡಿದ್ದಾರೆ. ಕೌರ್ ರಾಜೀನಾಮೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶುಕ್ರವಾರ (ಸೆಪ್ಟೆಂಬರ್ 18, 2020) ಸ್ವೀಕರಿಸಿರುವುದಾಗಿ ವರದಿ ತಿಳಿಸಿದೆ.
ಹರ್ ಸಿಮ್ರತ್ ಕೌರ್ ರಾಜೀನಾಮೆಯಿಂದ ಸ್ಥಾನ ತೆರವಾದ ನಿಟ್ಟಿನಲ್ಲಿ ಆಹಾರ ಸಂಸ್ಕರಣ ಖಾತೆಯ ಹೆಚ್ಚುವರಿ ಹೊಣೆಯನ್ನು ನರೇಂದ್ರ ಸಿಂಗ್ ತೋಮರ್ ವಹಿಸಿಕೊಳ್ಳಬೇಕೆಂದು ರಾಷ್ಟ್ರಪತಿ ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ: ಉದಯವಾಣಿ ಅಭಿಯಾನದ ಫಲಶ್ರುತಿ; ಕರಾವಳಿಗರಿಗೆ ಸಂದ ಜಯ; ಪಿಸಿಐಟಿ ಕಚೇರಿ ಎತ್ತಂಗಡಿ ಇಲ್ಲ
ಎನ್ ಡಿಎ ಬಹುಕಾಲದ ಮೈತ್ರಿಪಕ್ಷ ಅಕಾಲಿದಳ ಮುನಿಸು:
ಈ ಬಗ್ಗೆ ಲೋಕಸಭೆಯಲ್ಲಿ ಪಕ್ಷದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಮಾಹಿತಿ ನೀಡಿದ್ದಾರೆ. ಕೃಷಿ ಸೇವೆಗಳು ಮತ್ತು ರೈತರ ಬೆಳೆಗಳಿಗೆ ಸೂಕ್ತ ಬೆಲೆ ನೀಡುವ (ಅಭಿವೃದ್ಧಿ ಮತ್ತು ರಕ್ಷಣೆ) ಮಸೂದೆ ಮತ್ತು ರೈತರು ಉತ್ಪಾದಿಸಿದ ವಸ್ತುಗಳು ಮತ್ತು ಮಾರಾಟ (ಉತ್ತೇಜನ, ಅನುಕೂಲ) ಮಸೂದೆಗಳ ವಿರುದ್ಧ ಈಗಾಗಲೇ ಅಭಿಪ್ರಾಯಗಳು ರೂಪುಗೊಂಡಿರುವ ಹಿನ್ನೆಲೆ ಯಲ್ಲಿ ಕೌರ್ ರಾಜೀನಾಮೆ ಮಹತ್ವ ಪಡೆದಿದೆ.
ರೈತರು ಉತ್ಪಾದಿಸಿದ ವಸ್ತುಗಳ ಮತ್ತು ಮಾರಾಟ ಮಸೂದೆಗೆ ತೀವ್ರ ವಿರೋಧ ಇರುವುದಾಗಿ ಅಕಾಲಿದಳ ತಿಳಿಸಿದೆ. ಅಲ್ಲದೇ ಸರ್ಕಾರಕ್ಕೆ ಬಾಹ್ಯ ಬೆಂಬಲ ಕೊಡುವುದಾಗಿ ಹೇಳಿದೆ.
2019ರಲ್ಲಿ 2ನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬಳಿಕ ಮೋದಿ ನೇತೃತ್ವದ ಸರಕಾರದಿಂದ ರಾಜೀನಾಮೆ ನೀಡುತ್ತಿರುವ ಮೊದಲ ಸಚಿವೆ ಕೌರ್.