ರಂಗದ ಮೇಲೆ ಮಿಂಚಿನ ಬಳ್ಳಿಯೊಂದು ಝಳಪಿಸಿದಂತೆ ಅದಮ್ಯ ಚೈತನ್ಯದಿಂದ ಲೀಲಾಜಾಲವಾಗಿ ನರ್ತಿಸಿದವಳು ಭರತನಾಟ್ಯ ಕಲಾವಿದೆ ಹರ್ಷಿತಾ ಜಗದೀಶ್. ಅದು ಅವಳ ಮೊದಲ ರಂಗಾರ್ಪಣೆ ಅಂತ ನೆರೆದವರಿಗೆ ಅನ್ನಿಸಲೇ ಇಲ್ಲ. ಆತ್ಮವಿಶ್ವಾಸ, ಹರ್ಷಚಿತ್ತ-ಹಸನ್ಮುಖದಿಂದ, ಲವಲವಿಕೆಯ ಅಂಗಿಕಾಭಿನಯಗಳಿಂದ ಭರವಸೆಯ ಕಲಾವಿದೆಯಾಗಿ ಹೊರಹೊಮ್ಮಿದ ಹರ್ಷಿತಾ, ಇತ್ತೀಚಿಗೆ ಎ.ಡಿ.ಎ.ರಂಗಮಂದಿರದಲ್ಲಿ “ರಂಗಪ್ರವೇಶ’ ನೆರವೇರಿಸಿಕೊಂಡಳು.
ಶ್ರುತಿಲಯ ಫೈನ್ ಆರ್ಟ್ಸ್ ನೃತ್ಯಶಾಲೆಯ ನುರಿತ ನಾಟ್ಯಗುರು ಹೇಮಲತಾ ಪ್ರಕಾಶರ ಸಮರ್ಥ ತರಬೇತಿಯಲ್ಲಿ ರೂಪುಗೊಂಡ ಕಲಾಶಿಲ್ಪ ಹರ್ಷಿತಾ. ಅಂದು ಆಕೆ ಪ್ರದರ್ಶಿಸಿದ ಕೃತಿಗಳೆಲ್ಲ ಉತ್ತಮ ಆಯ್ಕೆಯಿಂದ ಕೂಡಿದ್ದು, ಕಲಾವಿದೆಯ ಅಂತಃಸತ್ವಕ್ಕೆ, ಕಲಾಪ್ರಪೂರ್ಣತೆಗೆ ಕನ್ನಡಿ ಹಿಡಿದವು. “ಆಕರ್ಷಕ ಪುಷ್ಪಾಂಜಲಿ’ಯಿಂದ ಆರಂಭಿಸಿ, ನರ್ತನ ಗಣಪತಿಯನ್ನು ಸ್ತುತಿಸಿ, ಮೈಸೂರು ಅರಸರ ಕಾಲದಲ್ಲಿ ದೇವದಾಸಿಯರು ಪ್ರಸ್ತುತಪಡಿಸುತ್ತಿದ್ದ “ಮೈಸೂರು ಜತಿ’ಯನ್ನು ಅತ್ಯಂತ ಮನೋಹರ ನೃತ್ತ, ಮುದವಾದ ಭಂಗಿಗಳ ಮೂಲಕ ನೃತ್ಯಾರ್ಪಣೆ ಮಾಡಿದಳು.
ಗುರು ಹೇಮಲತಾ ಅವರ ಕವಿತಾತ್ಮಕ ನಿರೂಪಣೆ, ನಟುವಾಂಗ ಪರಿಣಾಮಕಾರಿಯಾಗಿತ್ತು. ಅನಂತರ, ಅಪರೂಪದ ಉತ್ಕೃಷ್ಟಮಟ್ಟದ “ಗೋಕುಲಬಾಲ ಪದವರ್ಣ’ದಲ್ಲಿ ಶ್ರೀಕೃಷ್ಣನ ಬಾಲಲೀಲಾ ವಿಶೇಷಗಳನ್ನು, ತನ್ನ ನಂಬಿದ ಭಕ್ತರನ್ನು ಶ್ರೀಕೃಷ್ಣ ಕಾಪಾಡಿದ ಹಲವಾರು ಮನನೀಯ ಸಂಚಾರಿಗಳ ನಾಟಕೀಯ ಸನ್ನಿವೇಶಗಳ ಮೂಲಕ ಜತಿಗಳ ಝೇಂಕಾರಗಳಲ್ಲಿ ಕಟ್ಟಿಕೊಟ್ಟಳು ಕಲಾವಿದೆ. ತುಂಟಕೃಷ್ಣ ಯಶೋದೆ ಮೇಲೆ ಮುಚ್ಚಿಟ್ಟಿದ್ದ ಬೆಣ್ಣೆಯನ್ನು ಕದ್ದನಷ್ಟೇ ಅಲ್ಲ, ಅಂದವನು ನೋಡುಗರ ಹೃದಯಗಳನ್ನೂ ಅಪಹರಿಸಿಬಿಟ್ಟಿದ್ದ!
“ಶಿವಸ್ತುತಿ’ಯಲ್ಲಿ ಕಲಾವಿದೆಯ ಅಂಗಶುದ್ಧಿ, ಅಭಿನಯ ಸಾಮರ್ಥ್ಯ ಅಭಿವ್ಯಕ್ತವಾದರೆ, ದಾಸರ ದೇವರನಾಮದ ಸಾಕ್ಷಾತ್ಕಾರದ ಭಾವುಕತೆಯಲ್ಲಿ ಹರ್ಷಿತಾಳಿಗೆ ಇಡೀ ರಂಗ ಆಡುಂಬೊಲವಾಗಿತ್ತು. ಕೊರವಂಜಿಯ ನೃತ್ಯವಂತೂ ಉಲ್ಲಾಸಮಯವಾಗಿದ್ದು, ಜಾನಪದ ಆಯಾಮಗಳ ಹೆಜ್ಜೆ-ಗೆಜ್ಜೆಗಳ ಮಟ್ಟು ಆನಂದದಾಯಕವಾಗಿತ್ತು. ಕೊನೆಯ ನೃತ್ಯಬಂಧ- “ತಿಲ್ಲಾನ’ದಲ್ಲಿ ಹರ್ಷಿತಾ, ನವಚೈತನ್ಯದ ಚಿಲುಮೆಯಾಗಿ ನರ್ತನದ ಪ್ರತಿರೂಪವಾಗಿ ಮನಸೂರೆಗೊಂಡಳು.
* ವೈ.ಕೆ.ಸಂಧ್ಯಾ ಶರ್ಮ