ನಂಜನಗೂಡು: ಕಳಪೆ ಕಾಮಗಾರಿಯಿಂದ ಕುಸಿದು ಬಿದ್ದಿರುವ ಪರಿಶಿಷ್ಟ ಜಾತಿ-ಪಂಗಡಗಳ ಪ್ರತಿಭಾವಂತ ಬಾಲಕಿಯರ ವಸತಿ ನಿಲಯದ ಕಾಂಪೌಂಡ್‌ನ್ನು ಶಾಸಕ ಹರ್ಷವರ್ಧನ ಪರಿಶೀಲಿಸಿದರು. ಬುಧವಾರ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ “ಒಂದೇ ತಿಂಗಳಲ್ಲಿ ಕುಸಿದು ಬಿದ್ದ ಶಾಲಾ ಕಾಂಪೌಂಡ್’ ಶೀರ್ಷಿಕೆಯಡಿ ಪ್ರಕಟಗೊಂಡ ವರದಿಗೆ ಸ್ಪಂದಿಸಿ ಶಾಸಕ ಹರ್ಷವರ್ಧನ್ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಮುಗಿಸಿಕೊಂಡು ನೇರವಾಗಿ ವಸತಿ ಶಾಲೆಗೆ ಭೇಟಿ ನೀಡಿದರು.
ಅದಾಗಲೇ ಕುಸಿದು ಬಿದ್ದ ಕಾಂಪೌಂಡ್ ಮರು ನಿರ್ಮಾಣ ಕಾಮಗಾರಿಯನ್ನು ಕೂಡಲೇ ನಿಲ್ಲಿಸುವಂತೆ ಸೂಚಿಸಿದೆಉ. ಅಡಿಪಾಯ ಹಾಕದೇ ನಿರ್ಮಿಸಿರುವ ಕಾಂಪೌಂಡ್‌ಗೆ ಭದ್ರತೆ ಏನಿದೆ. ಅದು ಮತ್ತೆ ಬೀಳುತ್ತದೆ. ಗುಣಮಟ್ಟದ ವಸ್ತುಗಳನ್ನು ಬಳಸಿ ಕಾಮಗಾರಿ ನಡೆಸಬೇಕೆಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ತಹಶೀಲ್ದಾರ್ ದಯಾನಂದ, ವಸತಿ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕಾಮಗಾರಿಗೆ ಬಳಸಿರುವ ಸಾಮಗ್ರಿಗಳ ಕುರಿತು ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿ, ಆ ವರದಿ ಬರುವವರೆಗೂ ಕಾಮಗಾರಿ ಸ್ಥಗಿತಗೊಳಿಸಬೇಕು. ಕಳಪೆ ಸಾಮಗ್ರಿಗಳಿಂದ ಕಾಮಗಾರಿ ನಡೆಸುವ ಗುತ್ತಿಗೆದಾರರು, ಅದಕ್ಕೆ ಒಪ್ಪಿಗೆ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಬಳಿಕ ಬಾಲಕಿಯರ ವಸತಿ ಶಾಲೆಗೆ ಭೇಟಿ ನೀಡಿ ಕೆಟ್ಟಿರುವ ಶುದ್ಧ ನೀರು ಘಟಕ, ಸೋಲಾರ್‌ಗಳನ್ನು ಪರಿಶೀಲಿಸಿದರು. ಪಠ್ಯ ಪುಸ್ತಕಗಳು ಸರಬರಾಜಾಗದ ಬಗ್ಗೆ ಆಟದ ಮೈದಾನ ಕೊರತೆಗಳ ಕುರಿತು ಮಾಹಿತಿ ಪಡೆದು ವಸತಿ ಶಾಲೆಯಲ್ಲಿ ಎಲ್ಲಾ ಮೂಲ ಸೌಲಭ್ಯ ಕಲ್ಪಿಸುವುದಾಗಿ ಮಕ್ಕಳಿಗೆ ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ತಹಶೀಲ್ದಾರ್ ದಯಾನಂದ್, ನಗರಸಭಾ ಆಯುಕ್ತ ವಿಜಯ್, ಎಂಜನಿಯರ ಭಾಸ್ಕರ್, ತಾಪಂ ಸದಸ್ಯರಾದ ಶಿವಣ್ಣ, ಬಿಜೆಪಿ ಮುಖಂಡರಾದ ಕುಂಬರಳ್ಳಿ ಸುಬ್ಬಣ್ಣ, ಬಾಲಚಂದ್ರು ಮಹದೇವಸ್ವಾಮಿ ದೇವೀರಮ್ಮನಹಳ್ಳಿ ಬಸವರಾಜು ಇತರರಿದ್ದರು.