ಹೊಳೆಹೊನ್ನೂರು: ಶಿವಮೊಗ್ಗ ತಾಲೂಕಿನ ಹಾರೋಬೆನವಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಿವೇಶನ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದ ಹಿನ್ನಲೆಯಲ್ಲಿ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದ 8 ಮಂದಿಯನ್ನು ಪೊಲೀಸರು ಬಂಧಿದ್ದಾರೆ.
ಹಿನ್ನಲೆ: ಶಿವಮೊಗ್ಗ ತಾಲೂಕಿನ ಹಾರೋಬೆನವಳ್ಳಿಯ ಗ್ರಾಮದಲ್ಲಿ ನಿವೇಶನವನ್ನು ಹಂಚಿಕೆ ಮಾಡಲಾಗಿತ್ತು. ಇದರಂತೆ ರಸೂಲ್ ಎಂಬಾತನಿಗೆ ನಾಲ್ಕು ಜನ ಅಣ್ಣತಮ್ಮರೆಂದು ಗ್ರಾಮಸ್ಥರು 2 ನಿವೇಶನ ನೀಡಲಾಗಿದ್ದು, ಒಂದರಲ್ಲಿ ಮನೆಯನ್ನು ಕಟ್ಟಿಸಿಕೊಂಡು ಹಾಗೂ ಇನ್ನೊಂದು ಖಾಲಿ ನಿವೇಶನ ಹಾಗೇ ಇದ್ದರೂ ಕೂಡ ರಸೂಲ್ ರಾಕೇಶ್ ಗೆ ಸೇರಿದ ನಿವೇಶನದಲ್ಲಿ ಕಳೆದರೆಡು ತಿಂಗಳಿಂದ ಶೆಡ್ ನಿರ್ಮಿಸಿ ಅಡಿಕೆ ಹಾಳೆ ತಟ್ಟೆಯನ್ನು ತಯಾರಿಸುವ ಮಿಷನ್ ಇಟ್ಟುಕೊಂಡಿದ್ದನು.
ರಾಕೇಶ್ ಪದೇ ಪದೇ ವಿಚಾರವಾಗಿ ಇದು ನನ್ನ ನಿವೇಶನ, ಕೂಡಲೇ ಖಾಲಿ ಮಾಡು ಎನ್ನುತ್ತಿದ್ದರೂ ಕವಡೆ ಕಾಸಿನ ಕಿಮ್ಮತ್ತು ನೀಡದೇ ಯಥಾಪ್ರಕಾರ ತನ್ನ ಕಾರ್ಯವನ್ನು ರಸೂಲ್ ನಿರ್ವಹಿಸುತ್ತಿದ್ದನು. ರಾಕೇಶ್ ನು ಶುಕ್ರವಾರ ಬೆಳಗ್ಗೆ ಶೆಡ್ ನ ಒಂದು ಗೂಟವನ್ನು ತೆಗೆದು ತನ್ನ ಪಾಡಿಗೆ ಪ್ಲಂಬರ್ ಕೆಲಸಕ್ಕೆ ತೆರಳುತ್ತಾನೆ.
ಸಂಜೆ ವೇಳೆಗೆ ಮನೆಗೆ ಬರುತ್ತಿರುವಾಗ ರಸೂಲ್ ಮನೆ ಬಳಿ ರಸೂಲ್ ಹಾಗೂ ಶಿವಮೊಗ್ಗ 8 ರಿಂದ 10 ಯುವಕರ ಗುಂಪು ಏಕಾಏಕಿ ರಾಕೇಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ತದ ನಂತರ ರಾಕೇಶ ಕಡೆಯವರು ಬಂದ ನಂತರ ರಸೂಲ್ ಕಡೆಯವರು ಅವರ ಮನೆಯಲ್ಲಿ ಅವಿತು ಕುಳಿತಿದ್ದಾರೆ. ನಂತರ ಬಂದ ಪಟ್ಟಣದ ಸಿಪಿಐ ಲಕ್ಷ್ಮೀಪತಿ ನೇತೃತ್ವದ ತಂಡ ಅದರಲ್ಲಿರುವ 8 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇಬ್ಬರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಎಸ್.ಪಿ. ಮಿಥನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ರಕ್ಷಣಾ ಸಿಬಂದಿ ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದು, ಸದ್ಯ ಪರಿಸ್ಥಿತಿ ಶಾಂತವಾಗಿದೆ.