Advertisement

ಸೋಲೋ ಗೆಲುವು

12:21 PM May 05, 2018 | |

ಇಳಯರಾಜರನ್ನು ನೋಡಿ, ಹಂಸಲೇಖರನ್ನೇ ಗಮನಿಸಿ, ಹರಿಹರನ್‌…ಹೀಗೆ ಯಾರನ್ನೇ ನೋಡಿದರೂ ಅವರ ಮುಂದೆ ಹಾರ್ಮೋನಿಯಂ ಇದ್ದೇ ಇರುತ್ತದೆ. ಹಾರ್ಮೋನಿಯಂ ಇಲ್ಲದೆ ಅವರಿಲ್ಲ.  ಪ್ರತಿಭಾನ್ವಿತರ, ಸಂಗೀತ ದಿಗ್ಗಜರ ಸ್ವರಗಳು ಉಗಮವಾಗುವುದು ಹಾರ್ಮೋನಿಯಂನಲ್ಲೇ.  ಹಾರ್ಮೋನಿಯಂ ಇಲ್ಲದ ಸಂಗೀತ ಕ್ಷೇತ್ರವನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ. ಹೀಗಿರುವಾಗ ಹಾರ್ಮೋನಿಯಂ ಸೋಲೋ ಕಛೇರಿ ಕೊಡುವವರೂ ನಮ್ಮಲ್ಲಿ ಬೆರಳೆಣಿಕೆಯಷ್ಟು ಅನ್ನೋದು ಆತಂಕದ ವಿಚಾರ. ಇದಕ್ಕೆ ವೇದಿಕೆ ತೆರೆದಿಡುವ ಮನಸ್ಸುಗಳೂ ತೀರ ಕಡಿಮೆಯೇ.  ಹಾಗಾದರೆ,  ಹಾರ್ಮೋನಿಯಂ ನಂಬಿದ ಬದುಕು ಹೇಗಿರುತ್ತದೆ? ಇಲ್ಲಿದೆ ಉತ್ತರ.

Advertisement

ಹಾರ್ಮೋನಿಯಂಗೆ ರಾಷ್ಟ್ರಪ್ರಶಸ್ತಿ ಬಂದಿದೆ !
ಹೌದಾ? ಅಂತ ಕೇಳಬೇಡಿ.  ಏಕೆಂದರೆ, ಹಿಂದೂಸ್ತಾನಿ ಹಾರ್ಮೋನಿಯಂ ಕಲಾವಿದರಿಗೆ ರಾಷ್ಟ್ರಪ್ರಶಸ್ತಿ ಬಂದಷ್ಟೇ ಸಂತಸವಾಗಿರುವುದು ಖರೆ. ಇದಕ್ಕೆ ಕಾರಣ, ಹಾರ್ಮೋನಿಯಂಗೆ ಆಕಾಶವಾಣಿಯಲ್ಲಿ ಶಾಸ್ತ್ರೀಯ ಸ್ಥಾನಮಾನ ದಕ್ಕಿರುವುದು.
ಹಾಗಾದರೆ ಇಷ್ಟು ದಿವಸ ಇರಲಿಲ್ಲವೇ?
ಹೀಗಂತಲೂ ಕೇಳಬಹುದು. ಇತ್ತು. ಆದರೆ.. ಆಕಾಶವಾಣಿಯ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಹಾರ್ಮೋನಿಯಂ ಅನ್ನು ಪಕ್ಕವಾದ್ಯವಾಗಿ ನುಡಿಸಬಹುದಿತ್ತು; ಮುಖ್ಯವಾದ್ಯವಾಗಿ ಅಲ್ಲ. ವಿಚಿತ್ರ ಎಂದರೆ, ಕರ್ನಾಟಕ ಸಂಗೀತ, ಜಾನಪದ ಸಂಗೀತ, ಭಕ್ತಿ ಸಂಗೀತಕ್ಕೆ ಹಾರ್ಮೋನಿಯಂ ಬಳಸಲು ಯಾವುದೇ ತಕರಾರು ಇರಲಿಲ್ಲ. ಆದರೆ ಹಾರ್ಮೋನಿಯಂ ಸೋಲೋ ಕಾರ್ಯಕ್ರಮಕ್ಕೆ ಮಾತ್ರ ನಿರ್ಬಂಧವಿತ್ತು. ಈಗ ಅದು ತೆರೆಗೆ ಸರಿದಂತಿದೆ.

ಇದಕ್ಕೆಲ್ಲಾ ಕಾರಣ ಏನು ಅಂದರೆ- ಇದು ವಿದೇಶಿ ವಾದ್ಯ. ನಮ್ಮ ಸಂಗೀತಕ್ಕೆ ಹೊಂದಿಕೊಳ್ಳಲ್ಲ ಅನ್ನೋ ಅಲಿಖೀತ ನಿಯಮ ಮತ್ತು ನಂಬಿಕೆ.  ಹೀಗಾಗಿ, ದಶಕಗಳಿಂದ ಹಿಂದೂಸ್ತಾನಿ ಹಾರ್ಮೋನಿಯಂ ಕಲಾವಿದರಿಗೆ “ಬಿ ಹೈ’ಗ್ರೇಡೇ ಗಟ್ಟಿ. “ಎ’ ಗ್ರೇಡ್‌ ಪಡೆಯುವ ಪುಣ್ಯ ಇರಲಿಲ್ಲ. ಅಪಾರವಾದ ಜ್ಞಾನ, ಸಾಧನೆ, ಅನುಭವ ಇದ್ದರೂ ಪದವಿ ಇಲ್ಲ. ನೋಡಿ, ವಸಂತ ಕನಕಾಪುರೆ, ರಾಂಬಾವು ಬಿಜಾಪುರೆ, ವಿಠಲ್‌ರಾವ್‌, ಗ್ಯಾನಪ್ರಕಾಶ್‌, ಭಯ್ನಾಗಣಪತಿರಾವ್‌ ಹೀಗೆ ಲೆಕ್ಕಾ ಹಾಕುತ್ತಾ ಹೋದರೆ ಬದುಕನ್ನು ಹಾರ್ಮೋನಿಯಂಗಾಗಿಯೇ ಸವೆಸಿದವವರು ಹಲವಾರು ಮಂದಿ ಸಿಗುತ್ತಾರೆ. ಅವರಾರಿಗೂ “ಎ’ ಗ್ರೇಡ್‌ ಕಲಾವಿದರಾಗುವ ಭಾಗ್ಯ ದಕ್ಕಲಿಲ್ಲ. ಈಗ ದಕ್ಕಿರುವುದು ಒಬ್ಬರಿಗೆ – ಅವರೇ ಪಂ.ರವೀಂದ್ರ ಗುರುರಾಜ ಕಾಟೋಟಿ . 

“ನಮ್ಮ ಹಿಂದಿನವರಿಗೆ ಕೊಡಬೇಕಿತ್ತು. ಬದುಕು ಪೂರ್ತಿ ಅದಕ್ಕಾಗಿ ಸವೆಸಾರ. ನನಗೇನು ಸುಲಭವಾಗಿ ದಕ್ಕಲಿಲ್ಲ ರೀ. ನಾಲ್ಕು ಸಲ ಫೇಲಾಗೀನಿ. ಹಾಗಂತ ಗ್ರೇಡ್‌ಗೆ ತಕ್ಕಷ್ಟು ಜ್ಞಾನ ಇಲ್ಲಂತಲ್ಲ. ಅದೇನೋ ಗೊತ್ತಿಲ್ಲ. ಫೇಲ್‌ ಮಾಡಿದರ್ರೀ. ನಾನು ಬಿಡಬೇಕಲ್ಲ? ಮತ್ತೆ ಮತ್ತೆ ಫೈಟ್‌ ಮಾಡೇನ್ರೀ. ಆಮೇಲೆ  “ಎ’ ಗ್ರೇಡ್‌ ದೊರತೈತ್ರೀ.  ಈ ರೀತಿ ಪ್ರಯತ್ನಗಳನ್ನು ಮಾಡೋ ತಾಳ್ಮೆ ಎಲ್ಲರಿಗೂ ಬೇಕ್ರೀ…’ ಹೀಗಂತಾರೆ ಕಾಟೋಟಿ.

  ಸರಿ ಹಾಗಾದರೆ.  ವಿದೇಶವಾದ್ಯ ಅಂತ ಕಾರಣ ಹೇಳಿ, ಆಕಾಶವಾಣಿಯಂತೆ ಸಂಗೀತ ಕ್ಷೇತ್ರದಿಂದ  ಹಾರ್ಮೋನಿಯಂನ ನಿಷೇಧ ಮಾಡಿಬಿಟ್ಟರೆ ಪರಿಸ್ಥಿತಿ  ಹೇಗಿರುತ್ತದೆ ಅಂತ ಯೋಚಿಸಿದರೆ, ಎಲ್ಲ ಸ್ವರಗಳನ್ನೂ ಒಂದೇ ಏಟಿಗೆ ಕತ್ತು ಹಿಸುಕಿದಂತಾಗಿಬಿಡುತ್ತದೆ ಅನ್ನೋದು ಕಟು ವಾಸ್ತವ.
 ಇವತ್ತು ಸುಗಮ, ಸಿನಿಮಾ, ಜಾನಪದ ಯಾವುದರಲ್ಲಿ ನೋಡಿದರೂ ಸಂಗೀತ ಸ್ವರಗಳು ಹುಟ್ಟುವುದು ಹಾರ್ಮೋನಿಯಂನಲ್ಲೇ. 
 “ಹಾರ್ಮೋನಿಯಂ ಇಲ್ಲದ ಸಂಗೀತ ನೆನಪಿಸಿಕೊಳ್ರೀ  ಸಾಕು. ಸಾಧ್ಯನೇ ಇಲ್ರೀ. ಅಲ್ಲಿ ದೊಡ್ಡ ಶೂನ್ಯ ಸೃಷ್ಟಿಯಾಗ್ತದ. ಅದನ್ನು ತುಂಬೋಕೆ ಇನ್ನೊಂದು ಐವತ್ತು ವರ್ಷ ಬೇಕಾಗ್ತದ. 

Advertisement

ನಮ್ಮ ಭಾರತೀಯ ಸಂಸ್ಕೃತಿ ತಾಕತ್ತು ನೋಡ್ರೀ..ಹಾರ್ಮೋನಿಯಂ ಅನ್ನೋದು ವಿದೇಶಿವಾದ್ಯನಾ? ಅನ್ನೋ ಅನುಮಾನ ಹುಟ್ಟುವಂಗೆ ಅದನ್ನು ನಮ್ಮ ವಾದ್ಯವಾಗಿ ಒಗ್ಗಿಸಿಕೊಂಡು ಬಿಟ್ಟಿದ್ದೀವ್ರಿ. ಅಂದ್ರ, ನಾವು ಏನು ಕೊಟ್ರೂ ನುಂಗ್ತಿವಿ. ತಂತ್ರಜ್ಞಾನ, ವಾದ್ಯ, ಸಂಗೀತ- ಸಿನಿಮಾ ಸಂಗೀತ. ಆದರ ಇದೇ ವಿದೇಶದೋರಿಗೆ ನಮ್ಮ ತಂಬೂರಿ ಬಳಸಕೊಂಡು ಏನಾದ್ರು ಮಾಡ್ರಲಾ ಅಂತ ಹೇಳಿ ನೋಡೀ…ಹಾಗಂಗಿಲ್ಲ. ಇದೇ ನಮ್ಮ ತಾಕತ್ತು’  ಪರಿಣಾಮಕಾರಿಯಾಗಿ ಹೇಳ್ತಾರೆ ಕಾಟೋಟಿ.
 ಇದೆಲ್ಲಾ ಸರಿ,  ಆದರೂ ನಮ್ಮಲ್ಲಿ ಸೋಲೋ ನುಡಿಸುವ ಕಲಾವಿದರು ಹುಡುಕಿದರೂ ಸಿಗಲೊಲ್ಲರು ಏಕೆ? ಅನ್ನೋ ಯಕ್ಷಪ್ರಶ್ನೆಯಾಗಿ ಕಾಡುತ್ತಿರುವ ಪ್ರಶ್ನೆಗೂ ಕಾಟೋಟಿ ಬಳಿ ಉತ್ತರ ಸಿಕ್ಕಿತು.

 “ಹಾರ್ಮೋನಿಯಂ ಅಂದ್ರ ಅದು ಪಕ್ಕಾ ಪಕ್ಕ ವಾದ್ಯ; ಹಾಡೋರನ ಅನುಸರಿಸ್ಕೋತಾ ಹೋಗೋದು. ಒಬ್ಬ ಹಾರ್ಮೋನಿಯಂ ನುಡಿಸುವವರ ಒಳಗೂ ವಿಚಾರಗಳು ಇರ್ತವ. ಅದಕ್ಕ ಸೋಲೋ ಕಾರ್ಯಕ್ರಮ ಕೊಡಬೇಕು ಅಂದ್ರ. ಎಷ್ಟೆಲ್ಲಾ ಪಡಿಪಾಟಲು ಪಡಬೇಕ್ತದೆ ಗೊತ್ತಾ? ಅದಕ್ಕಾಗಿ ಅವರೇ ಸಂಘವೋ, ಸಂಸ್ಥೆಯೋ ಕಟ್ಕೊಬೇಕ್ರೀ..  ಅದುಬಿಟ್ಟು ಬರೀ ಸೋಲೋ ನುಡಿಸ್ತೀನ್ರೀ ಅಂದ್ರ ಯಾರೂ ಕ್ಯಾರೆ ಅನ್ನಲ್ರೀ. ಆ ಮಟ ಪರಿಸ್ಥಿತಿ ಐತ್ರೀ. ಕಲಾವಿದರು ಎಲ್ರೂ ಒಗ್ಗೂಡಿ ಜನರ ಹತ್ತಿರ ತಗೊಂಡು ಹೋಗಬೇಕ್ರಿ.  ಸಾಥಿಗೆ ಕರೆದಷ್ಟು ಸುಲಭವಾಗಿ ಸೋಲೋಕೆ ಕರೆಯಂಗಿಲ್ಲ. ಹಾರ್ಮೋನಿಯಂ ಬ್ರಾಂಡ್‌ ಹೆಂಗಾಗದ ಅಂದ್ರ, ಇಂದಿರಾ ಗಾಂಧಿ ಸತ್ತಾಗ ಶೋಕ ವ್ಯಕ್ತಪಡಿಸಲು ಸಾರಂಗಿ ಹಚ್ಚಿದ್ರು. ಮುಂದ ಸಾರಂಗಿ ಅಂದ್ರ ಸತ್ತಾಗ ನುಡಿಸೋ ವಾದ್ಯ ಅಂತ ಬ್ರಾಂಡ್‌ ಆಗ್ಹೋತ್ರೀ. ಹಂಗೇನಾ, ಹಾರ್ಮೋನಿಯಂ. ಹಾರ್ಮೋನಿಯಂ ಕಾರ್ಯಕ್ರಮ ಮಾಡ್ತೀವ್ರಿ ಅಂದ್ರ “ಓಹೋ ಭಜನೆ ಮಾಡ್ತೀರೀ”  ಅನ್ನೋ ಮಟ್ಟಕ್ಕ ಅದು ಬ್ರಾಂಡ್‌ ಆಗೇದ. ಕಾರಣ, ಆ ವಾದ್ಯದ ಬಗ್ಗೆ ತಿಳುವಳಿಕೆ ಇಲ್ಲದಿರೋದು,  ಹಾರ್ಮೋನಿಯಂ ವಿದೇಶಿ ವಾದ್ಯ ಅಂತ ಪೂರ್ವಾಗ್ರಹ ಪೀಡಿತರಾಗಿರೋದು’ ಕಾಟೋಟಿ ಬಹಳ ವಿಷಾದದಿಂದ ಹೇಳಿದರು.

ಕಾಟೋಟಿ ಅವರ ಮಾತು ಸತ್ಯವೇ. ಹಾರ್ಮೋನಿಯಂ ಸೋಲೋ ಕಛೇರಿ ಸಿಗೋದಿಲ್ಲ, ಯಾರಿಗೂ ಆಸಕ್ತಿ ಇಲ್ಲ ಅನ್ನೋದು ಖರೆ. ಆದರೆ ಎರಡು ಕೈ ಸೇರಿದರೆ ತಾನೇ ಚಪ್ಪಾಳೆ?  ಇದರಲ್ಲಿ ಕಲಾವಿದನ ಪಾತ್ರ ಇಲ್ಲವೇ? ಅಂದಾಗ “ಇದ್ದೇ ಇದೆ’ ಅಂತಾರೆ ಕಾಟೋಟಿ.
 “ನೋಡ್ರಲಾ, ನಮ್ಮಲ್ಲಿ ಬಹುತೇಕ ಪೆಟ್ಟಿಗೆ ನುಡಿಸೋರು ಹನ್ನೊಂದರಾಗ ಇನ್ನೊಂದು ಅಂತಷ್ಟೇ ಕಲೀತಾರ. ಎಲ್ರೀಗೂ ಇದೇ ಪ್ರೊಫೆಷನ್‌ ಆಗಿರೊಲುª. ಸೈಡ್‌ ಮ್ಯೂಸಿಕ್‌. ಹಂಗಾಗಿ ಇಂಥ ಮನೋಧರ್ಮದವರಿಗೆ ಸೋಲೋ ಕಲಿಕೆ ಬೇಕಿಲ್ರೀ. ಸಾಥಿದಾರರಾದರೆ ಅಷ್ಟೇ ಸಾಕು.  ನಾಲ್ಕು ಪ್ರೋಗ್ರಾಂ ಕೊಟ್ಟರ, ಶಾಲು ಹೋದಿಸಿ, ಸನ್ಮಾನ ಮಾಡ್ತಾರ. ಕಛೇರಿ ಕಡೆಗ “ಪಂಡಿತ್‌…’ ಅಂತ ಅನೌನ್ಸ್‌ ಮಾಡ್ತಾರ.  ಹೀಗೆ ಪ್ರಸಿದ್ಧಿಗೆ ಬರ್ತಾರ.  ಅರ್ಹತೆ ಗಳಿಸ್ಯಾರೋ ಇಲ್ಲವೋ, ಪಂಡಿತರಾಗಿ ಬಿಡ್ತಾರ.. ಆದರೆ ಸೋಲೋದಾಗ ಹಂಗಿಲ್ಲ. ವಾದ್ಯವಾಗಿ ಕಲೀಬೇಕಾಗ್ತದಾ, ವಿಚಾರ ಮಾಡಬೇಕಾಗ್ತದ, ಅದಕ್ಕೆ ಸಾಕಷ್ಟು ತ್ರಾಸ ಪಡಬೇಕಾಗ್ತದ, ಸತತ ರಿಯಾಜ್‌ ಮಾಡಬೇಕಾಗ್ತದ- ಹಿಂಗಾಗಿ ಅದರ ಗೊಡವೆ ಬೇಡ ಅಂತಾರ  ಮಂದಿ. ಇದರ ಪರಿಣಾಮ ಏನಗೆôತಿ ಅಂದ್ರ ಗಟ್ಟಿ ಸಂಗೀತ ಹುಟ್ಟೊಲ್ದು..’ ಕಾಟೋಟಿ ಎಳೆ ಎಳೆಯಾಗಿ  ಹಾರ್ಮೋನಿಯಂ ಬದುಕಿನ ಸತ್ಯಗಳನ್ನು ಬಿಚ್ಚಿಟ್ಟರು.
 ಸಮಸ್ಯೆ ಇಷ್ಟಕ್ಕೇ ಮುಗಿಯುವುದಿಲ್ಲವಲ್ಲ, ಕಾಟೋಟಿ ಹೇಳಿದಂತೆ ಸೋಲೋ ಬಗ್ಗೆ ಕೆಲವು ಕಲಾವಿದರಿಗೆ ಆಸಕ್ತಿ ಇಲ್ಲ ಸರಿ, ಆದ್ರೆ ಕಲಿತವರಿಗೆ ನುಡಿಸಲು ಸೋಲೋ ಕಾರ್ಯಕ್ರಮಗಳೇ ಸಿಗುತ್ತಿಲ್ಲ ಅನ್ನೋದು ಸುಳ್ಳಲ್ಲ. ವರ್ಷಕ್ಕೆ ನಾಲ್ಕು, ಐದು ಸೋಲೋ ಕಛೇರಿಗಳು ನಡೆಯೋಲ್ಲ ಅನ್ನೋ ಹೆಗ್ಗಳಿಕೆ ನಮ್ಮ ರಾಜ್ಯಕ್ಕೆ ಅಂಟಿದೆ.  ಇಂಥ ಸಂದರ್ಭದಲ್ಲಿ ಯಾರು ತಾನೇ ಹಾರ್ಮೋನಿಯಂ ಸೋಲೋ ಕಲಿಯುತ್ತಾರೆ? ಅಲ್ವೇ ಅಂದಾಗ ಕಾಟೋಟಿ ಹೀಗಂದರು; 
 “ಪರಿಸ್ಥಿತಿ ಹಂಗೇ ಅದ. ನೋಡ್ರೀ, ಸಿಎ ಮಾಡಿದ್ರ ಮುಂದ ಅಕೌಂಟೆಂಟ್‌ ಆಗಬೋದು. ಅದಕ್ಕೂ ಮುಂದ ಆಫೀಸರ್‌ ಆಗಬೋದು. ಕೈತುಂಬ ರೊಕ್ಕ ಪಡೀಬೋದು. ಹಿಂಗ, ಯಾವುದೂ ಆಸೆ ಹುಟ್ಟಿ, ಅದೇ ಗುರಿಯಾಗ್ತದ. ಆದರೆ ನೀವು ಸಿಎ ಮಾಡಿದ್ರ ಬರೀ ಕ್ಲಾರ್ಕ್‌ ಆಗಬೋದು ಅನ್ರೀ. ಯಾರೂ ಕಷ್ಟ ಪಟ್ಟು ಸಿಎ ಮಾಡಲ್ರೀ . ಹಂಗೇನ ಹಾರ್ಮೋನಿಯಂನಾಗೂ. ಅವರಿಗೆ ಕಲಿಕೆಗೆ ಹಚ್ಚೋಕೆ ಮೋಟಿವೇಟ್‌ ಮಾಡಕ್ಕಾದರೂ ಏನಾದ್ರು ಬೇಕಲ್ಲ. ಇಲ್ರ ಪ್ಪಾ, ಹಾರ್ಮೋನಿಯಂ ಕಲಿತ್ರ ನೀವು ಸಾಥಿದಾರರಾಗಬಹುದು ಅಷ್ಟೇ ಅಂದ್ರ ಯಾರು ತಾನೇ ಕಲೀತಾರ?  ಅವರಿಗೂ ಸ್ವತಂತ್ರ ಯೋಚನೆ ಇರ್ತದ. ವಿಚಾರಗಳು ಬರ್ತವ. ಅದನ್ನು ಪ್ರಸ್ತುತ ಪಡಿಸಲಿಕ್ಕಾದ್ರು ಸೋಲೋ ಬೇಕಲ್ಲ? ಯಾರು ಕೋಡ್ತಾರ ಸೋಲೋಗೆ ವೇದಿಕೆ, ಹೇಳ್ರಲ?ಎಲ್ಲರ ಮೈಂಡ್‌ ಸೆಟ್‌ ಬದಲಾಗಬೇಕ್ರೀ’ ಹೀಗಂತ ಹೇಳಿ “ರಾಮನ ಅವತಾರ ರಘುಕುಲ ಸೋಮನ ಅವತಾರ’ ಹಾಡನ್ನು ನುಡಿಸಿದರು.
“ನೋಡ್ರಲಾ, ಈ ಹಾಡ್‌ನ‌ಗ ವೆಸ್ಟ್ರನ್‌ ಅರೇಂಜ್‌ಮೆಂಟ್‌ ಹೆಂಗದ. ಹಾಡು ಕೇಳಿದ್ರ ಎಲ್ಲಾದ್ರು ಅಭಾಸ ಆಗ್ತದೇನ್ರೀ? ನುಡಿಸಿರೋದು ವಿದೇಶಿ ವಾದ್ಯದಾಗ ಅಂತ ತಿಳೀತದೇನ್ರೀ? ಸಂಗೀತರಸಕ್ಕೆ ಎಲ್ಲಾದ್ರು ತ್ರಾಸ ಆಕ್ತದೇನ್ರೀ. ಇಲ್ಲ.  ಇದೇ ನೋಡ್ರೀ ನಮ್ಮ ವಾದ್ಯದ, ಸಂಗೀತಗಾರರ ತಾಕತ್ತು ‘ ಹೀಗೆ ಹೇಳಿ ಮಾತು ನಿಲ್ಲಿಸಿ, ಮುಂದುವರಿದ ಹಾಡನ್ನು ನುಡಿಸುತ್ತಾ ಹೋದರು. 

 ಕಾಲಿಗೆ ಬೀಳಬೇಕ್ರೀ
“ನಮ್ಮಲ್ಲಿ ಪ್ರತಿಭಾನ್ವಿತರು ಹಾರ್ಮೋನಿಯಂ ಕಲೀತ ಇದ್ದಾರ. ಕ್ರಿಯೇಟಿವಿಟಿ ಇಟ್ಕೊಂಡು ಕೆಲ್ಸ ಮಾಡ್ತಾ ಇದ್ದಾರ. ಆದ್ರ ಅವರಿಗೆ ಎಕ್ಸೋಪಜರ್‌ ಇಲ್ಲ. ನಾನು ಸೋಲೋ ಕಲ್ತಿದ್ದೀನಪ್ಪಾ, ನುಡಿಸ್ತೀನ್ರೀ ಅವಕಾಶ ಕೋಡ್ರಿ ಅಂದ್ರ 40-50 ಜನರ ಕಾಲಿಗೆ ಬೀಳಬೇಕಾದ ಸ್ಥಿತಿ ಐತ್ರಿ.  ಆದ್ರ ವೋಕಲ್‌ ಕಲಿಯೋರಿಗೆ ಈ ಸಮಸ್ಯೆ ಎದುರಾಗಲುª. ನಾಲ್ಕು ವರ್ಷ ಕಲಿತು, ರಾಮನವಮಿ ಸಂಗೀತೋತ್ಸವದಾಗ ಹಾಡ್ತಾನ. ಚಪ್ಪಾಳೆ ತಟ್ಟತಾರಾ.  ಇಂಥವರ ಗಾಯನ ತಂಡದವರಿಂದ ಕಾರ್ಯಕ್ರಮ ಅಂತ ಪೇಪರ್‌ನಗ ಬರ್ತದ. ಇದರೊಳಗ ಹಾರ್ಮೋನಿಯಂ ನುಡಿಸೋನು ಸೇರಿಬಿಟ್ಟಿರ್ತಾನ. ಅಂದ್ರ ಜೀವನಪರ್ಯಂತ ಶ್ರಮ ಸುರಿದ ಕಲಿತ ಕಲಾವಿದ ಕೊನೆ ತನಕ ತಂಡದ ಸದಸ್ಯನೇ. ಎಷ್ಟು ಚಲೋ ನುಡಿಸದ್ರನೂ ಅವನ್ಯಾರು ಅನ್ನೋದನ್ನು ವೇದಿಕೆ ಮ್ಯಾಗೇ ತಿಳ್ಕೊಬೇಕ್ರೀ.    ಈ ಸಾಥಿ ಮಾಡೋದು ಗೌರವಯುತ ಕೆಲಸ ರೀ.  ಆದ್ರ ಇಲ್ಲಿ ಗಾಯಕನ ವಿಚಾರದ ಹಿಂದ ನಾವು ಹೋಗ್ತಾ ಇರ್ತೀವಿ. ಸ್ವಂತ ವಿಚಾರಗಳು ಹೊಳೆದರೂ ಅದನ್ನು ಹೇಳಕ್ಕಾಗಂಗಿಲ್ಲ. ಅವುಗಳನ್ನ ಹೇಳಬೇಕು ಅಂದಾಗ ಸೋಲೋ ಕಛೇರಿಗಳೇ ಬೇಕಾಗ್ತದ.  ಸಾಥಿದಾರ ಸ್ಟೆನೋ ಗ್ರಾಫ‌ರ್‌ ಥರ. ಹೇಳಿದ್ದನ್ನು ಬರೀತಾನ. ಇವ ಹಾಡಿದ್ದನ್ನು ನುಡಿಸ್ಕೋತಾ ಹೋಗ್ತಾನ. ಅವನನ್ನು ಸ್ವತಃ ಏನಾದ್ರು ಬರೀಯಪ್ಪಾ ಅಂದ್ರ ಏನ್‌ಮಾಡ್ತಾನ? ಕಸರತ್ತು ಮಾಡ್ತಾನ. ಹಾಗೇನೇ, ಸೋಲೋ ನುಡಿಸಪ್ಪಾ  ಅಂದಾಗ ವಾದ್ಯವಾಗಿ ಕಲೀಬೇಕಾಗ್ತದ, ಅದರದೇ ವಿಶಿಷ್ಟ ಭಾಷೆಯನ್ನು ಕರಗತ ಮಾಡಿಕೊಂಡು ಮೈಗೂಡಿಸಿಕೊಳ್ಳಬೇಕಾಗ್ತದ. ಇದನ್ನೆಲ್ಲಾ ಮಾಡೋ ಅನಿವಾರ್ಯ ಸೃಷ್ಟಿ ಆಗೋದು. ಸೋಲೋ ಕಛೇರಿಗಳು ಸಿಕ್ಕಾಗ, ಕಛೇರಿ ಕೊಟ್ಟಾಗ.’

 ಮೀಂಡ್‌ ಬರಂಗಿಲ್ಲಾ
“ಲಿಮಿಟಿಷನ್‌ ಯಾರಿಗಿಲ್ರೀ..? ಮನುಷ್ಯನಿಗೇ ಅದಂತ. ಅವನು 
ಮಾಡಿದ ವಾದ್ಯಕ್ಕಿಲ್ಲೇನು?  ಸಾರಂಗಿ, ಹಾರ್ಮೋನಿಯಂ ಒಂದು ಭಾಷೆ.  ಸಿತಾರ ಒಂದು ಭಾಷೆ. ಪ್ರತಿ ಭಾಷೇ ಒಳಗ ವಿಚಾರ ಹೇಳ್ತೀರ್ತೀವಿ.  ಈಗ ಸಿತಾರ ಭಾರಿಸಬೇಕು ಅಂದ್ರ. ಅದರ ವಿಚಾರಗಳನ್ನು ಹೇಳ್ತಾ ಹೋಗಬೇಕು.. ಅಯ್ಯೋ ಹಾರ್ಮೋನಿಯಂನೊಳಗೆ ಮೀಂಡ್‌ ಬರಂಗಿಲ್ಲ ಅಂತಾರ. ಹೌದ್ರೀ, ಸಾರಂಗಿ ಒಳಗ ಹಾರ್ಮೋನಿಯಂ ನಷ್ಟು ಸ್ಪೀಡ್‌ ಬರಂಗಿಲ್ಲ. ಸಾಥಿ ಕೊಡೋವಾಗ ಕಂಟ್ಯೂನಿಟಿ ಇರಂಗಿಲ್ಲ.  ಹಾರ್ಮೋನಿಯಂ ಮಧ್ಯಾಹ್ನದ ನೆರಳಂಗ ಗಾಯನದ ಬುಡದಲ್ಲೇ ಚಲಿಸ್ತಾ ಇರ್ತದ.   ಹಾರ್ಮೋನಿಯಂ ನಷ್ಟು ಸ್ಟ್ರಾಂಗ್‌ ಸಾರಂಗಿ ಸ್ವರಕ್ಕಿಲ್ಲ ಅಂತಾರ. ಇದಕ್ಕೇನು ಹೇಳ್ತೀರಿ? ನೋಡ್ರಲಾ, ನೀವು ಹೋಟಲ್‌ಗೆ ಹೊಕ್ಕೀರಿ. ಅಲ್ಲಿ ನನಗೆ ಇಂಥ ತಿಂಡಿ ಬೇಕು ಅಂತ ಕೇಳ್ತೀರೇನು? ಇಲ್ವಲ್ಲ. ಏನು ಐತ್ರೀ ಅಂತಿರ.  ಹೌದಲ್ಲೋ?  ಹಂಗೇನೇ, ಹಾರ್ಮೋನಿಯಂನಗೆ ಏನು ಬೆಸ್ಟ್‌ ಅದ್ಯೋ ಅದನ್ನ ಪಡಕೋಬೇಕು. ಇದಿಲ್ಲ, ಅದಿಲ್ಲ, ಇದಿರಬೇಕಿತ್ತು, ಅದು ಇದ್ದಿದ್ರ ಚಂದಿತ್ತು ಅಂತೆಲ್ಲಾ ತಪ್ಪು ತೆಗೆಯೋಕೆ ಶುರು ಮಾಡಿದ್ರ. ನೀವು ಸಂಗೀತ ಕೇಳ್ಳೋಕೆ ಬಂದಿಲ್ಲ ಅನ್ನೋದು ಸ್ಪಷ್ಟ ಆಗ್ತದ.’

ಕಟ್ಟೆ ಗುರುರಾಜ್‌ 

Advertisement

Udayavani is now on Telegram. Click here to join our channel and stay updated with the latest news.

Next