Advertisement

ಬಹುಮುಖ ಪ್ರತಿಭೆ: ಕಾಲಪೆಟ್ಟಿಗೆಯ ಹಾರ್ಮೋನಿಯಂ ಕಲಾವಿದ ಸದಾಶಿವ ತೇಲಿ

01:02 PM Jul 01, 2024 | Team Udayavani |
ರಬಕವಿ-ಬನಹಟ್ಟಿ: ಬನಹಟ್ಟಿಯ ಸದಾಶಿವ ತೇಲಿ ಬಹು ಪ್ರತಿಭೆಯ ಕಲಾವಿದರು. ನಟನೆ, ನಿರ್ದೇಶನ ಭಜನಾ ಹಾಡುಗಾರಿಕೆಯ ಜೊತೆಗೆ ತಾಳ ವಾದನ, ದಮಡಿ, ದಪ್ಪಗಳನ್ನು ನುಡಿಸುವುದರ ಜೊತೆಗೆ ನಮ್ಮಿಂದ ದೂರವಾಗುತ್ತಿರುವ ಕಾಲಪೆಟ್ಟಿಯ ಹಾರ್ಮೋನಿಯಂನ ಬೆರಳೆಣಿಕೆ ಕಲಾವಿದರಾಲ್ಲಿ ಒಬ್ಬರಾಗಿ ಗಮನ ಸೆಳೆದಿದ್ದಾರೆ.
ಕೆಲವು ದಶಕಗಳ ಹಿಂದ ಪಾರಿಜಾತ, ನಾಟಕ, ಸನ್ನಾಟ ಮತ್ತು ಭಜನಾ ಕಾರ್ಯಕ್ರಮಗಳಲ್ಲಿ ಕಾಲಪೆಟ್ಟಿಗೆ ಹಾರ್ಮೋನಿಯಂ ಬಳಸುತ್ತಿದ್ದರು. ಆದರೆ ಇಂದು ಆಧುನಿಕತೆಗೆ ತಕ್ಕಂತೆ ಸಂಗೀತ ಸಾಧನಗಳು ಕೂಡಾ ಬದಲಾಗ ತೊಡಗಿದವು. ಕಾಲಪೆಟ್ಟಿಗೆ ಹಾರ್ಮೋನಿಯಂ ಬದಲಾಗಿ ಹಾರ್ಮೋನಿಯಂ ಗಳನ್ನು ಬಳಸಲಾಗುತ್ತಿತ್ತು. ಈಗ ಹಾರ್ಮೋನಿಯಂಗಳ ಸ್ಥಾನವನ್ನು ಕ್ಯಾಸಿಯೋಗಳು ತುಂಬಿವೆ.
ಕಾಲಪೆಟ್ಟಿಗೆಯ ಹಾರ್ಮೋನಿಯಂ ವಿಶೇಷವಾದ ಸಂಗೀತ ಸಾಧನವಾಗಿದ್ದು, ಎರಡು ಕೈಗಳಿಂದ ಕೀಗಳನ್ನು ಒತ್ತುವುದರ ಜೊತೆಗೆ ಕೆಳಗಡೆ ಇರುವ ಪ್ಯಾಡ್ ಗಳನ್ನು ಕಾಲಿನಿಂದ ತುಳಿಯುತ್ತಿರಬೇಕು. ಶತಮಾನಗಳ ಹಿಂದೆ ಈ ಹಾರ್ಮೋನಿಯಂಗಳನ್ನು ಸಂಕೇಶ್ವರದಲ್ಲಿ ತಯಾರು ಮಾಡುತ್ತಿದ್ದರು. ಜರ್ಮನ್ ಸ್ವರಗಳನ್ನು ಹೊಂದಿರುವ ಕಾಲಪೆಟ್ಟಿಗೆಯ ಹಾರ್ಮೋನಿಯಂಗಳು ಉತ್ತಮ ವಾದವನ್ನು ಹೊರಡಿಸುತ್ತವೆ. ಇದರ ಶಬ್ದ ಜೋರಾಗಿಯೂ ಕೇಳುತ್ತದೆ. ಮೈಕ್ ಗಳು ಇಲ್ಲದೆ ಇರುವ ಸಂದರ್ಭದಲ್ಲಿ ಇವುಗಳನ್ನು ಬಳಸಲಾಗುತ್ತಿತ್ತು ಎನ್ನುತ್ತಾರೆ ಸದಾಶಿವ ತೇಲಿಯವರು.
ಈಗ ಕೇವಲ ಬೆರಣಿಕೆಯಷ್ಟು ಮಾತ್ರ ಕಾಲಪೆಟ್ಟಿಗೆಯ ಕಲಾವಿದರು ಉಳಿದುಕೊಂಡಿದ್ದಾರೆ. ಅವರಲ್ಲಿ ಸದಾಶಿವ ತೇಲಿಯವರು ಒಬ್ಬರು. ನಾಲ್ಕುವರೆ ದಶಕಗಳಿಂದ ಸದಾಶಿವ ತೇಲಿಯವರು ಈ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ.
ಸದಾಶಿವರ ತಂದೆ ಉಳ್ಳಪ್ಪ ಕೂಡಾ ಕಾಲಪೆಟ್ಟಿಗೆಯ ಹಾರ್ಮೋನಿಯಂ ಕಲಾವಿದರು. ತಂದೆಯಿಂದ ಬಳುವಳಿಯಾಗಿ ಬಂದ ಕಲೆಯನ್ನು ಮುಂದುವರೆಸಿಕೊAಡು ಬಂದಿದ್ದಾರೆ. ಆರವತ್ತರ ಆಸುಪಾಸಿನ ಸದಾಶಿವ ತೇಲಿಯವರು ಕಾಲಪೆಟ್ಟಿಯನ್ನು ಹೊತ್ತುಕೊಂಡೆ ನಾಡಿನ ಸುತ್ತ ಮುತ್ತಲಿನ ಪ್ರಮುಖ ಪ್ರದೇಶಗಳಲ್ಲಿ ಕಲೆಯನ್ನು ಪ್ರದರ್ಶನ ಮಾಡಿದ್ದಾರೆ.
ಈ ನಾಡಿನ ಪ್ರಮುಖ ಪಾರಿಜಾತ ಕಲಾವಿದರಾಗಿದ್ದ ರಾಚಯ್ಯ ಬರಗಿ, ಟಕ್ಕಳಕಿ ವಿಠ್ಠಲರಾವ, ಅಪ್ಪಲಾಲ ನದಾಫ್, ಮಲ್ಲಯ್ಯ ಸ್ವಾಮಿ ಅಥಣಿಯವರ ಪಾರಿಜಾತ ತಂಡಗಳಲ್ಲಿ ನಂತರ ರಬಕವಿ ಬನಹಟ್ಟಿ, ಮುಧೋಳ, ಲೋಕಾಪುರ ಹಾಗೂ ಬೇರೆ ಬೇರೆ ಪಾರಿಜಾತ ಮತ್ತು ನಾಟಕ ಕಂಪನಿಗಳಲ್ಲಿಯೂ ಕಾಲ ಪೆಟ್ಟಿಯ ಕಲಾವಿದರಾಗಿ ಗಮನ ಸೆಳೆದಿದ್ದಾರೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ, ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಮುಧೋಳ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ರಬಕವಿ ಬನಹಟ್ಟಿ ಜಮಖಂಡಿ, ಜಮಖಂಡಿ, ಅಥಣಿ ತಾಲ್ಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಕರ್ನಾಟಕ ಮಹಾರಾಷ್ಟ್ರದ ಗಡಿ ಭಾಗದ ಅನೇಕ ಕಡೆಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶನ ಮಾಡಿದ್ದಾರೆ.
ಆಸಕ್ತರಿಗೆ ಕಾಲಪೆಟ್ಟಿಗೆಯ ಹಾರ್ಮೋನಿಯಂ ಕಲೆಯನ್ನು ಕಲಿಸುವುದರ ಜೊತೆಗೆ ಪಾರಿಜಾತ ಹಾಗೂ ಸಾಮಾಜಿಕ ನಾಟಕಗಳನ್ನು ನಿರ್ದೇಶನ ಮಾಡುವುದರ ಮೂಲಕ ನಮ್ಮಿಂದ ದೂರವಾಗುತ್ತಿರುವ ಕಲೆಗೆ ಜೀವಂತಿಕೆಯನ್ನು ನೀಡುತ್ತಾ, ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಸದಾಶಿವ ತೇಲಿಯವರನ್ನು ಕಲಾ ಜಗತ್ತು ಗುರುತಿಸದೆ ಇರುವುದು ಬೇಸರದ ಸಂಗತಿಯಾಗಿದೆ. ಇವರ ಸೇವೆ ಗುರುತಿಸಿ ಗೌರವಿಸಬೇಕಾಗಿದೆ.
-ಕಿರಣ ಶ್ರೀಶೈಲ ಆಳಗಿ
Advertisement

Udayavani is now on Telegram. Click here to join our channel and stay updated with the latest news.

Next