Advertisement

ಬಡ ವಿದ್ಯಾರ್ಥಿಗಳ ಆಶಾಕಿರಣ ರಬಕವಿಯ ಪರಿಸರ ಸ್ನೇಹಿ ಪಾಲಿಟೆಕ್ನಿಕ್ ಮಹಾವಿದ್ಯಾಲಯ

06:30 PM Jun 04, 2024 | Team Udayavani |
ರಬಕವಿ-ಬನಹಟ್ಟಿ: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯ ತನ್ನ ಉತ್ತಮ ಪರಿಸರ ಸ್ನೇಹಿ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣದಿಂದ ಈ ಭಾಗದಲ್ಲಿ ಬಡವರ ಆಶಾ ಕಿರಣವಾಗಿ ಬೆಳೆದು ನಿಂತಿದೆ.
ನೇಕಾರಿಕೆಯನ್ನೇ ಕಸುಬನ್ನಾಗಿಸಿಕೊಂಡು ಬದುಕುತ್ತಿರುವ ತಾಲೂಕಿನ ರಬಕವಿ ಬನಹಟ್ಟಿ ಹಾಗೂ ಸುತ್ತಮುತ್ತಲೀನ ನಗರದ ಬಡ ಕೂಲಿ ನೇಕಾರರಿಗೆ ಈ ಪಾಲಿಟೆಕ್ನಿಕ್ ಮಹಾವಿದ್ಯಾಲಯ ವರವಾಗಿದೆ. 2009ರಲ್ಲಿ ರಬಕವಿಯ ಸರ್ವೆ ನಂ. 8 ರಲ್ಲಿ ಸುಮಾರು 7 ಎಕರೆ ಪ್ರದೇಶದಲ್ಲಿ ತಲೆ ಎತ್ತಿ ನಿಂತಿರುವ ತಾಂತಿಕ ಮಹಾವಿದ್ಯಾಲಯ ಸ್ವಚ್ಛ ಹಸಿರಿನ ವಾತಾವರಣದಲ್ಲಿ ವಿದ್ಯಾರ್ಥಿಗಳನ್ನು ತನ್ನೆಡೆಗೆ ಸೆಳೆಯುತ್ತಿದೆ.
ಎಲೆಕ್ಟ್ರಾನಿಕ್ಸ್, ಮೆಕಾನಿಕಲ್, ಸಿವಿಲ್, ಕಂಪ್ಯೂಟ್‌ರ ಸೈನ್ಸ್, ಕ್ಲೌಡ ಕಂಪ್ಯೂಟಿಂಗ್ ಸೇರಿ ಒಟ್ಟು 5 ವಿಭಾಗಗಳನ್ನು ಹೊಂದಿದ್ದು, ಅತಿ ಕಡಿಮೆ ದರದಲ್ಲಿ ಡಿಪ್ಲೋಮಾ ಮಾಡಲು ಇಲ್ಲಿನ ಬಡ ಜನತೆಗೆ ಅನುಕೂಲವಾಗಿದೆ. ಒಟ್ಟು 5 ವಿಭಾಗಗಳಲ್ಲಿ 592 ಜನ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದು, 37 ಜನ ಶಿಕ್ಷಕರು, 16 ಜನ ಸಿಬ್ಬಂದಿ ವರ್ಗದವರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿ ಮಲ್ಲು ನಾವಿ ಅವರ ಸಹಕಾರದಿಂದ ಇಲ್ಲಿ ನೆಟ್ಟಿರುವ ಮರಗಳು ಈಗ ಹೆಮ್ಮರವಾಗಿ ಬೆಳೆದು ನಿಂತಿದ್ದು ಕಾಲೇಜಿನ ಅಂದವನ್ನು ಹೆಚ್ಚಿಸಿವೆ. ಅಲ್ಲದೇ ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಡಿಯಲ್ಲಿ 1 ವಿದ್ಯಾರ್ಥಿ 1 ಗಿಡ ಬೆಳೆಸುವ ಯೋಜನೆ ಹಾಕಿಕೊಂಡಿದ್ದು ಆ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎನ್ನುತ್ತಾರೆ ಅಲ್ಲಿನ ಎನ್‌ಎಸ್‌ಎಸ್ ಅಧಿಕಾರಿ ಪ್ರಸಾದ ಮಾವರಕರ.
ಇಲ್ಲಿ ಒಟ್ಟು 300ಕ್ಕೂ ಅಧಿಕ ಗಿಡಗಳನ್ನು ಹಚ್ಚಲಾಗಿದ್ದು ಮುಂದಿನ ದಿನಮಾನಗಳಲ್ಲಿ ಕ್ಯಾಂಪಸ್‌ನ ಸುತ್ತ ಮೂತ್ತಲೂ ಇನ್ನೂ ಹೆಚ್ಚಿನ ಗಿಡಗಳನ್ನು ಬೆಳೆಸಿ ಗ್ರೀನ್ ಕ್ಯಾಂಪಸ್ ಹಾಗೂ ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ನಿರ್ಮಾಣಕ್ಕೆ ಯೋಜನೆ ಹಾಕಿ ಕೊಂಡಿರುವುದಾಗಿ ಪ್ರಾಚಾರ್ಯ ವಿಠ್ಠಲ ಚಿಕ್ಕಲಕಿ ಹೇಳುತ್ತಾರೆ.
ಇಲ್ಲಿ ಕಲೆತಂತಹ ಶೇ. 90 ರಷ್ಟು ವಿದ್ಯಾರ್ಥಿಗಳು ಸಾಪ್ಟವೇರ್ ಮತ್ತು ಹಾರ್ಡವೇರ್‌ನಂತಹ ಮಲ್ಟಿ ನ್ಯಾಷನಲ್ ಕಂಪನಿಗಳಲ್ಲಿ ಉನ್ನತ ಹುದ್ದೆ ಹೊಂದಿದ್ದಾರೆ ಮತ್ತು ಕೆಲವೊಂದು ಜನ ಸ್ವಂತ ಕಂಪನಿಗಳನ್ನು ತೆಗೆದಿದ್ದಾರೆ. ಮಹಾವಿದ್ಯಾಲಯ ಬಡ ವಿದ್ಯಾವಂತ ಮಕ್ಕಳಿಗೆ ಬಹಳಷ್ಟು ಅನುಕೂಲವಾಗಿದೆ.
–  ವಿಠ್ಠಲ ಚಿಕ್ಕಲಕಿ ಪ್ರಚಾರ್ಯರು, ಸರಕಾರಿ ತಾಂತ್ರಿಕ ಮಹಾವಿದ್ಯಾಲಯ ರಬಕವಿ  
– ಕಿರಣ ಶ್ರೀಶೈಲ ಆಳಗಿ
Advertisement

Udayavani is now on Telegram. Click here to join our channel and stay updated with the latest news.

Next