Advertisement

ಭಾರತದ ವನಿತಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕ್ಯಾಪ್ಟನ್ಸಿಗೆ ಕುತ್ತು?

11:19 PM Oct 16, 2024 | Team Udayavani |

ಹೊಸದಿಲ್ಲಿ: ಭಾರತದ ವನಿತಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರ ನಾಯಕತ್ವದ ಕುರ್ಚಿ ಅಲುಗಾಡಲಾರಂಭಿಸಿದೆ. ತಂಡದ ಕಳಪೆ ನಿರ್ವಹಣೆಯ ಹಿನ್ನೆಲೆಯಲ್ಲಿ ಕೌರ್‌ ಅವರನ್ನು ಕೇವಲ ಆಟಗಾರ್ತಿಯಾಗಿ ಮುಂದುವರಿಸುವುದು ಬಿಸಿಸಿಐ ಉದ್ದೇಶ ಎಂಬ ಸುದ್ದಿ ಹರಿದಾಡುತ್ತಿದೆ.

Advertisement

ಇತ್ತೀಚೆಗೆ ಭಾರತ ತಂಡ ಹರ್ಮನ್‌ಪ್ರೀತ್‌ ನಾಯಕತ್ವದಲ್ಲಿ ತೀರಾ ಕಳಪೆ ಪ್ರದರ್ಶನ ನೀಡುತ್ತಿದೆ. ಕಳೆದ ಏಷ್ಯಾ ಕಪ್‌ ಹಾಗೂ ಈಗ ನಡೆಯುತ್ತಿರುವ ಟಿ20 ವಿಶ್ವಕಪ್‌ ಪಂದ್ಯಾವಳಿಯೇ ಇದಕ್ಕೆ ಸಾಕ್ಷಿ.

ಸದ್ಯದಲ್ಲೇ ಆಯ್ಕೆ ಸಮಿತಿ ಹಾಗೂ ಕೋಚ್‌ ಅಮೋಲ್‌ ಮಜುಂದಾರ್ ಅವರೊಂದಿಗೆ ಬಿಸಿಸಿಐ ಸಭೆ ನಡೆಸಲಿದೆ. ಇಲ್ಲಿ ಕೌರ್‌ ಅವರ ನಾಯಕತ್ವದ ಬಗ್ಗೆ ದೊಡ್ಡದೊಂದು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಅ. 24ರಂದು ಆರಂಭವಾಗಲಿರುವ ನ್ಯೂಜಿಲ್ಯಾಂಡ್‌ ಎದುರಿನ 3 ಪಂದ್ಯಗಳ ಏಕದಿನ ಸರಣಿಗೆ ತಂಡವನ್ನು ಆಯ್ಕೆ ಮಾಡುವ ಮೊದಲು ಈ ಸಭೆ ನಡೆಯಲಿದೆ.

ಕಳಪೆ ಪ್ರದರ್ಶನ, ಬ್ಯಾಟಿಂಗ್‌ ಕ್ರಮಾಂಕದಲ್ಲಿ ನಿರಂತರ ಬದಲಾವಣೆ, ಕೈಕೊಟ್ಟಿರುವ ಫಾರ್ಮ್, ಸತತ ಸೋಲು… ಇವೆಲ್ಲವೂ ಹರ್ಮನ್‌ಪ್ರೀತ್‌ ನಾಯಕತ್ವಕ್ಕೆ ಕುತ್ತು ತರುವುದು ಖಚಿತ ಎನ್ನಲಾಗಿದೆ.

ಇನ್ನೊಂದು ಲೆಕ್ಕಾಚಾರ
ಇಲ್ಲಿ ಇನ್ನೊಂದು ಲೆಕ್ಕಾಚಾರವೂ ಇದೆ. 2025ರ ಏಕದಿನ ವಿಶ್ವಕಪ್‌ ಭಾರತದಲ್ಲಿ ನಡೆಯುವ ಕಾರಣ ನೂತನ ನಾಯಕಿಯನ್ನು ನೇಮಿಸಿದರೆ ತಂಡವನ್ನು ಮುನ್ನಡೆಸಲು ಸಾಕಷ್ಟು ಸಮಯಾವಕಾಶ ಲಭಿಸಲಿದೆ ಎಂಬುದು. ಕೌರ್‌ ಭಾರತ ತಂಡದ ಪ್ರಮುಖ ಆಟಗಾರ್ತಿ, ಆದರೆ ಬಿಸಿಸಿಐ ಪರಿವರ್ತನೆ ಬಯಸುತ್ತಿದೆ ಎಂಬುದಾಗಿ ಸ್ವತಃ ಮಂಡಳಿ ಮೂಲವೊಂದು ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next