ಮೂಡುಬಿದಿರೆ: ಶ್ರೀಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿ ಅವರು ಮಾ. 12 ಮತ್ತು 13ರಂದು ಹರಿಯಾಣ, ಹೊಸದಿಲ್ಲಿಯ ಜೈನ ಮಂದಿರಗಳಿಗೆ ಧಾರ್ಮಿಕ ಪ್ರವಾಸ ಕೈಗೊಂಡಿದ್ದರು.
ಹರಿಯಾಣದ ದಾರುವೇಡಾ ಭ| ಶಾಂತಿನಾಥ ಸ್ವಾಮಿ ಬಸದಿಯಲ್ಲಿ ಸ್ವಾಮೀಜಿ ಮಹಾಅಭಿಷೇಕ ನೆರವೇರಿಸಿ, ಮಾತೆ ಪದ್ಮಾವತಿ ಆರಾಧನೆ, ಪುಷ್ಪ ಅರ್ಚನೆ, ಪೂಜೆಗಳಲ್ಲಿ ಪಾಲ್ಗೊಂಡು ಆಶೀರ್ವಚನವಿತ್ತರು.
ದಾರುವೇಡದ ಸಹಸ್ರ ಕೂಟ ಜಿನಾಲಯ ಕಾಮಗಾರಿ ಪ್ರಗತಿಯಲ್ಲಿರುವುದನ್ನು ಸ್ವಾಮೀಜಿ ವೀಕ್ಷಿಸಿ ಅಧ್ಯಕ್ಷ ರಾಜ್ ಕುಮಾರ್ ಜೈನ್ ಸಹಿತ ಪದಾಧಿಕಾರಿಗಳನ್ನು ಹರಸಿದರು. ಬಳಿಕ ಹರಿಯಾಣದ ತಿಜಾರ ಅತಿಶಯ ಕ್ಷೇತ್ರಕ್ಕೆ ಭೇಟಿ ನೀಡಿದ ಸ್ವಾಮೀಜಿ ಕ್ಷೇತ್ರದ ಭ| ಚಂದ್ರಪ್ರಭ ಸ್ವಾಮಿ ದರ್ಶನ ಮಾಡಿ ಬೆಳಗ್ಗೆ 11.30ಕ್ಕೆ ಪುರ ಪ್ರವೇಶ ಮಾಡಿದ ಪ್ರಾಕೃತ ಆಚಾರ್ಯ 108 ಸುನೀಲ್ ಸಾಗರ ಮುನಿ ರಾಜರು ಹಾಗೂ ಸಂಘದ 60 ಸಾಧು ಸಾಧ್ವಿಯರನ್ನು ಭೇಟಿ ಮಾಡಿ ಸಂಘದ ಧರ್ಮಸಭೆಯಲ್ಲಿ ಪಾಲ್ಗೊಂಡು ಗೌರವವನ್ನು ಸ್ವೀಕರಿಸಿದರು.
ಸೋಮವಾರ ಬೆಳಗ್ಗೆ ಭಟ್ಟಾರಕರು ಯಮುನಾ ನದಿ ತೀರದ ಮಾನವ ಮಂದಿರದಲ್ಲಿ ಹಿರಿಯ ಸಾಧು ರೂಪ್‌ಚಂದ್ ಮುನಿರಾಜರನ್ನು ಭೇಟಿಯಾಗಿ ಪಾಕಿಸ್ಥಾನದಿಂದ ಭಾರತಕ್ಕೆ ಬಂದ ನಿರ್ವಸಿತ ಹಿಂದೂ ಸಮುದಾಯದ ಸುಮಾರು 70 ಕುಟುಂಬಗಳಿಗಾಗಿ ಅವರು ಕೈಗೊಂಡ ವಿವಿಧ ಜನ ಕಲ್ಯಾಣ ಕಾರ್ಯಗಳನ್ನು ಶ್ಲಾಘಿಸಿ ಗೌರವಾರ್ಪಣೆಗೈದರು.
ದಿಲ್ಲಿ ರಾಜ ಬಜಾರ್ ಅಗ್ರವಾಲ ದಿಗಂಬರ ಜೈನ್ ಮಂದಿರದಲ್ಲಿ ವಿರಾಜಮಾನರಾದ ಆಚಾರ್ಯ 108 ಪ್ರಾಗ್ಯ ಸಾಗರ ಮುನಿರಾಜರ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು 2550ರ ಭಗವಾನ್ ಮಹಾವೀರ್ ನಿರ್ವಾಣ ಕಾರ್ಯಕ್ರಮದ ಮುಂದಿನ ಕಾರ್ಯಕ್ರಮ ಯೋಜನೆಗಳ ಚರ್ಚೆಯಲ್ಲಿ ಪಾಲ್ಗೊಂಡರು.