Advertisement

ಆವೇಶದ ಹೇಳಿಕೆಗಳಿಂದ ಡಬ್ಬಿಂಗ್‌ ವಿವಾದ ಬಗೆಹರಿಯಲ್ಲ: ಶಿವಣ್ಣ

12:03 PM Mar 03, 2017 | Team Udayavani |

ಬೆಂಗಳೂರು: “ಡಬ್ಬಿಂಗ್‌ ವಿವಾದವನ್ನು ಆವೇಶದ ಹೇಳಿಕೆಗಳಿಂದ ಬಗೆಹರಿಸಲು ಸಾಧ್ಯವಿಲ್ಲ. ಯಾವ ರೀತಿ ಹೋರಾಡಬೇಕೆಂಬ ಬಗ್ಗೆ ಚರ್ಚಿಸಬೇಕು. ಕೇವಲ ಚಿತ್ರರಂಗವಷ್ಟೇ ಅಲ್ಲದೇ ಕನ್ನಡ ಜನತೆ ಕೂಡ ಕೈ ಜೋಡಿಸಿದಾಗ ಮಾತ್ರ ಈ ವಿವಾದ ಬಗೆಹರಿಸಲು ಸಾಧ್ಯ’ ಎಂದು ನಟ ಶಿವರಾಜಕುಮಾರ್‌ ಹೇಳಿದ್ದಾರೆ. 

Advertisement

ತಮಿಳಿನ “ಎನೈ ಅರಿಂದನಾಳ್‌’ ಚಿತ್ರವು ಕನ್ನಡದಲ್ಲಿ “ಸತ್ಯದೇವ ಐಪಿಎಸ್‌’ ಎಂಬ ಹೆಸರಲ್ಲಿ ಡಬ್‌ ಆಗಿ ಇಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಹಲವು ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಡಬ್ಬಿಂಗ್‌ ವಿವಾದದ ಕುರಿತಾಗಿ ಗುರುವಾರ ಮಾತನಾಡಿದ ಶಿವರಾಜಕುಮಾರ್‌, “ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುತ್ತೇವೆಂಬ ಆವೇಶ ಭರಿತ ಹೇಳಿಕೆಗಳಿಂದ ಡಬ್ಬಿಂಗ್‌ ನಿಲ್ಲಿಸಲು ಸಾಧ್ಯವಿಲ್ಲ.

ಈ ಬಗ್ಗೆ ಕನ್ನಡ ಜನತೆಗೆ ಮನವರಿಕೆ ಮಾಡಬೇಕು. ಡಬ್ಬಿಂಗ್‌ ಬಂದರೆ ಏನೇನು ಸಮಸ್ಯೆಗಳಾಗುತ್ತೆ, ಕನ್ನಡಕ್ಕೆ ಏನೆಲ್ಲ ತೊಂದರೆಯಾಗುತ್ತದೆಂಬ ತಿಳಿವಳಿಕೆಯನ್ನು ಜನತೆಗೆ ನೀಡಬೇಕು. ಜನರು ಕೂಡಾ ಈ ಹೋರಾಟಕ್ಕೆ ಸಹಕರಿಸಬೇಕು.  ಕಲಾವಿದರು ಬಂದು ಮಾತನಾಡಿದ್ದನ್ನು ಕೇಳಿಸಿಕೊಂಡು ಶಿಳ್ಳೆ ಹೊಡೆದು ಹೋಗುವ ಬದಲು ಈ ತರಹದ ಹೋರಾಟಗಳನ್ನು ಬೆಂಬಲಿಸಬೇಕು’ ಎಂದರು. 

ನಾವು ಯಾವುದೇ ಭಾಷೆಯ ವಿರೋಧಿಗಳಲ್ಲ ಎಂದ ಶಿವರಾಜಕುಮಾರ್‌, “ಡಬ್ಬಿಂಗ್‌ ಬೇಕು ಎನ್ನುವ ನಿರ್ಮಾಪಕರು ಪರಭಾಷೆಯ ಸಿನಿಮಾಗಳನ್ನು ಇಲ್ಲಿ ಬಿಡುಗಡೆ ಮಾಡಲು ಬಿಡಬಾರದು. ಅದನ್ನು ಕೂಡ ಡಬ್‌ ಮಾಡಿಯೇ ಬಿಡುಗಡೆ ಮಾಡಬೇಕು. ಆಗ ಕನ್ನಡ ಮತ್ತಷ್ಟು ಬೆಳೆಯುತ್ತದೆ. ನಾನು ಡಬ್ಬಿಂಗ್‌ ವಿರೋಧಿ. ಅದರಲ್ಲಿ ಯಾವ ಸಂದೇಹವೂ ಇಲ್ಲ. ಅತ್ತ ಕಡೆ ಪರಭಾಷೆಯ ಚಿತ್ರಗಳು, ಇತ್ತ ಡಬ್ಬಿಂಗ್‌ ಸಿನಿಮಾಗಳು ಎಲ್ಲವೂ ಜತೆಯಾದರೆ ಇಲ್ಲಿನ ಸ್ಥಿತಿ ಏನಾಗಬಹುದೆಂದು ಯೋಚಿಸಬೇಕು.

ಈಗ ಸಿನಿಮಾ ಡಬ್ಬಿಂಗ್‌ ಆರಂಭವಾಗಿದೆ. ಮುಂದೆ ಧಾರಾವಾಹಿಗಳು ಕೂಡಾ ಡಬ್‌ ಆಗಿ ಬರುತ್ತವೆ. ಆಗ ಇಲ್ಲಿನವರ ಗತಿಯೇನು? ನಾವು ಆ ಬಗ್ಗೆ ಯೋಚಿಸಬೇಕು. ಅದಕ್ಕಾಗಿಯಾದರೂ ಹೋರಾಟ ಮಾಡಬೇಕು. ಹೋರಾಟ ಅಂದರೆ ಕೇವಲ ಬಿಸಿ ತಟ್ಟಿದಾಗ ಮಾತ್ರ ಮಾಡೋದಲ್ಲ. ಅದಕ್ಕೊಂದು ರೂಪುರೇಷೆ ಸಿದ್ಧಪಡಿಸಿ, ಯಾವ ರೀತಿ ಸಮಸ್ಯೆ ಬಗೆಹರಿಸಬೇಕೆಂದು ಚರ್ಚಿಸಬೇಕು’ ಎಂದು ಶಿವರಾಜಕುಮಾರ್‌ ಹೇಳಿದರು. 

Advertisement

ಡಬ್ಬಿಂಗ್‌ ಸಿನಿಮಾಗಳಿಂದ ರಿಮೇಕ್‌ ನಿಲ್ಲುತ್ತೆ ಅನ್ನೋದು ಸುಳ್ಳು ಎಂದ ಅವರು, “ಯಾವ ನಟರೂ ಸಹ ಯಾವಾಗಲೂ ರಿಮೇಕ್‌ ಮಾಡುತ್ತಲೇ ಇರುವುದಿಲ್ಲ. ಅಪರೂಪಕ್ಕೆಂಬಂತೆ ರಿಮೇಕ್‌ ಮಾಡುತ್ತಾರೆ. ಮೊದಲು ಚಿತ್ರರಂಗದಿಂದ ಹಿಡಿದು ಪ್ರತಿ ಕ್ಷೇತ್ರದವರ ಜತೆ ಡಬ್ಬಿಂಗ್‌ ಕುರಿತು ಚರ್ಚಿಸಬೇಕು. ಎಧಿಲ್ಲರ ಅಭಿಪ್ರಾಯ ಸಂಗ್ರಹಿಸಬೇಕು. ಆ ಮೂಲಕ ಹೋರಾಟದ ರೂಪುರೇಷೆಯನ್ನು ಸಿದ್ಧಪಡಿಸಬೇಕು ಎಂದರು.

ಇದು ನಿಜಕ್ಕೂ  ಬೇಸರದ ಸಂಗತಿ. ದೊಡ್ಡ ದೊಡ್ಡ ಮಹನೀಯರು ಕಟ್ಟಿಬೆಳೆಸಿದ ಉದ್ಯಮವಿದು. ಅನೇಕರ ಬೆವರಿನ ಶ್ರಮವಿದೆ. ಇವತ್ತು ಡಬ್ಬಿಂಗ್‌ ಪ್ರಭಾವಕ್ಕೆ ತುತ್ತಾಗಿರೋದು ವಿಷಾದನೀಯ. ಸಾವಿರಾರು ಜನರು ಇದನ್ನು ನಂಬಿಕೊಂಡು ಜೀವನ ಕಟ್ಟಿಕೊಂಡಿದ್ದೇವೆ. ಈ ಹೋರಾಟಕ್ಕೆ ಕೇವಲ ಚಿತ್ರರಂಗವಷ್ಟೇ ಅಲ್ಲದೇ, ಎಲ್ಲರೂ ಕೈ ಜೋಡಿಸಬೇಕು. ನಮ್ಮ ಧ್ವನಿಯನ್ನು ಎಲ್ಲಿ ಮುಟ್ಟಿಸಬೇಕೋ ಅಲ್ಲಿ ಮುಟ್ಟಿಸಬೇಕು.
-ಶರಣ್‌, ನಟ

ಡಬ್ಬಿಂಗ್‌ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದೆ. ಆದರೆ ಕೆಲವರು ಬಿಟ್ಟರೆ ಮಿಕ್ಕಂತೆ ಯಾರೂ ಮಾತನಾಡುತ್ತಿಲ್ಲ. ಒಬ್ಬರಿಂದ, ಇಬ್ಬರಿಂದ ವಿರೋಧ ಸಾಧ್ಯವಿಲ್ಲ. ಪರಿಸ್ಥಿತಿ ಏನಾಗಿದೆ ಎಂಬುದೇ ಅರ್ಥವಾಗುತ್ತಿಲ್ಲ.  
-ಪ್ರೇಮ್‌, ನಟ

ಬೆಂಗಳೂರಿನಲ್ಲಿ “ಸತ್ಯದೇವ್‌ ಐಪಿಎಸ್‌’ ಇಲ್ಲ
ಈ ಮಧ್ಯೆ ಇಂದು ಬಿಡುಗಡೆಯಾಗಬೇಕಿದ್ದ “ಸತ್ಯದೇವ್‌ ಐಪಿಎಸ್‌’ ಚಿತ್ರವು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿಲ್ಲ. ಬೆಂಗಳೂರನ್ನು ಹೊರತುಪಡಿಸಿ, ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬೆಂಗಳೂರಿನಲ್ಲಿ ನಟರಾಜ ಅಥವಾ ಸಂಪಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಈಗಾಗಲೇ ಅಲ್ಲಿ ತಮಿಳು ಚಿತ್ರವೊಂದು ಬಿಡುಗಡೆಯಾಗುತ್ತಿರುವುದರಿಂದ, “ಸತ್ಯದೇವ್‌ ಐಪಿಎಸ್‌’ ಚಿತ್ರದ ಬಿಡುಗಡೆಯನ್ನು ಬೆಂಗಳೂರಿನಲ್ಲಿ ಮುಂದೂಡಲಾಗಿದೆ.

ಈ ಕುರಿತು ಮಾತನಾಡಿದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ, “ಇಂದು ಡಬ್ಬಿಂಗ್‌ ಚಿತ್ರ “ಸತ್ಯದೇವ್‌ ಐಪಿಎಸ್‌’ ಸುಮಾರು 60 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಕಾನೂನಿನಲ್ಲೇ ಅವಕಾಶವಿದೆ. ಯಾವುದೇ ಅಹಿತಕರ ಘಟನೆಯಾಗದಂತೆ ತಡೆಯಲು ಪೊಲೀಸರ ಸಹಕಾರ ಪಡೆಯುತ್ತಿದ್ದೇವೆ. ಬೆಂಗಳೂರಿನಲ್ಲಿ ನಾವು ಕೇಳಿದ ಚಿತ್ರಮಂದಿರದಲ್ಲಿ ಈಗಾಗಲೇ ತಮಿಳು ಚಿತ್ರವೊಂದು ಬಿಡುಗಡೆಯಾಗಿರುವುದರಿಂದ ನಮಗೆ ಇಲ್ಲಿ ಚಿತ್ರಮಂದಿರ ಸಿಕ್ಕಿಲ್ಲ. ಆ ಬಗ್ಗೆ ಪ್ರಯತ್ನಿಸುತ್ತಿದ್ದೇವೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next