ಮಂಗಳೂರು: ಭಾರತ್ ಜೋಡೊ ಯಾತ್ರೆ 2ನೇ ಸ್ವಾತಂತ್ರ್ಯ ಸಂಗ್ರಾಮವಾಗಿದೆ. ಅಂದು ಮಹಾತ್ಮಾಗಾಂಧಿ ಬೇರೆ ಬೇರೆ ಪ್ರಾಂತ್ಯಗಳಾಗಿದ್ದ ದೇಶವನ್ನು ಒಟ್ಟುಗೂಡಿಸಿದ್ದರು. ಇಂದು ಅಖೀಲ ಭಾರತ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಕನ್ಯಾಕುಮಾರಿಯಿಂದ ಕಾಶ್ಮೀರ ವರೆಗೆ ಭಾರತ್ ಜೋಡೊ ಯಾತ್ರೆಯ ಮುಖಾಂತರ ಜನರ ಹೃದಯವನ್ನು ಬೆಸೆದು ಪ್ರೀತಿ ಹಂಚಿದ್ದಾರೆ. ಈ ಎರಡೂ ಘಟನೆಗಳು ಐತಿಹಾಸಿಕ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಹೇಳಿದರು.
ಯಾತ್ರೆ ಸೋಮವಾರ ಕಾಶ್ಮೀರದಲ್ಲಿ ಸಂಪನ್ನಗೊಂಡ ಹಿನ್ನೆಲೆಯಲ್ಲಿ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾದ ಧ್ವಜಾ ರೋಹಣ ಹಾಗೂ ಮಹಾತ್ಮಾಗಾಂಧಿ ಅವರ 75ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಡಾ| ಮಂಜುನಾಥ ಭಂಡಾರಿ ಮಾತ ನಾಡಿ, ಗಾಂಧೀಜಿ 1915ರಲ್ಲಿ ಭಾರತಕ್ಕೆ ಮರಳಿದ ಸಂದರ್ಭ ಭಾರತ ಒಂದಾಗಿರಲಿಲ್ಲ. ಅಖೀಲ ಭಾರತ ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ಭಾರತವನ್ನು ಒಂದಾಗಿಸಿದ ಮಹಾನ್ ನಾಯಕ ಅವರು. ಪ್ರಸ್ತುತ ಬಿಜೆಪಿ ಭಾರತವನ್ನು ಒಡೆಯಲು ಹೊರಟಿದ್ದು, ಧರ್ಮ-ಜಾತಿಗಳ ಮಧ್ಯೆ ವಿಷಬೀಜವನ್ನು ಬಿತ್ತಿ ಆಡಳಿತ ನಡೆಸುತ್ತಿದೆ ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಜೆ.ಆರ್. ಲೋಬೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ, ಶಾಸಕ ಯು.ಟಿ. ಖಾದರ್, ಕೆಪಿಸಿಸಿ ಸದಸ್ಯೆ ಎಸ್. ಅಪ್ಪಿ, ಮುಂಚೂಣಿ ಘಟಕದ ಜಿಲ್ಲಾಧ್ಯಕ್ಷರಾದ ಲುಕಾ¾ನ್ ಬಂಟ್ವಾಳ್, ಶಾಲೆಟ್ ಪಿಂಟೊ, ವಿಶ್ವಾಸ್ ಕುಮಾರ್ ದಾಸ್, ಲಾರೆನ್ಸ್ ಡಿ’ಸೋಜಾ, ಶಾಹುಲ್ ಹಮೀದ್, ಮನಪಾ ವಿಪಕ್ಷ ನಾಯಕ ನವೀನ್ ಡಿ’ಸೋಜಾ, ಮಾಜಿ ಮೇಯರಾದ ಶಶಿಧರ್ ಹೆಗ್ಡೆ, ಕವಿತಾ ಸನಿಲ್, ಜೆಸಿಂತಾ ವಿಜಯ್ ಆಲ್ಫೆ†ಡ್, ನಗರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್ ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಜೋಕ್ಕಿಂ ಡಿ’ಸೋಜಾ ಧ್ವಜರಕ್ಷಕರಾಗಿದ್ದರು.