Advertisement

ಚುನಾವಣೆಗಳಲ್ಲಿ ಎಲ್ಲ ಸ್ಥಾನ ಗೆಲ್ಲುವ ಗುರಿ: ಹರೀಶ್‌ ಕುಮಾರ್‌

03:55 AM Jul 04, 2017 | Team Udayavani |

ಮಂಗಳೂರು: ರಾಜ್ಯ ವಿಧಾನಸಭೆ, ವಿಧಾನಪರಿಷತ್‌ ಸೇರಿದಂತೆ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷ ಎಲ್ಲ ಸ್ಥಾನಗಳಲ್ಲಿ ಜಯಭೇರಿ ಬಾರಿಸುವುದು ನನ್ನ ಗುರಿಯಾಗಿದ್ದು ಈ ನಿಟ್ಟಿನಲ್ಲಿ ಪಕ್ಷವನ್ನು ಸಂಘಟಿಸಿ ಸಿದ್ಧಗೊಳಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ನೂತನ ಅಧ್ಯಕ್ಷ ಹರೀಶ್‌ ಕುಮಾರ್‌ ಹೇಳಿದರು. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸೋಮವಾರ ಜರಗಿದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು. ಇನ್ನು ಒಂದು ವರ್ಷದೊಳಗೆ ವಿಧಾನಸಭಾ ಚುನಾವಣೆ ಬರಲಿದೆ. ಕೆಲವೇ ತಿಂಗಳುಗಳಲ್ಲಿ ವಿಧಾನಪರಿಷತ್‌ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.ಇನ್ನೆರಡು ವರ್ಷಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಜಿಲ್ಲೆಯ ಎಲ್ಲ 8 ವಿಧಾನಸಭಾ ಕ್ಷೇತ್ರಗಳನ್ನು, ಸಂಸತ್ಸದಸ್ಯ ಸ್ಥಾನವನ್ನು, ವಿಧಾನ ಪರಿಷತ್‌ ಸ್ಥಾನಗಳನ್ನು ಪಕ್ಷ ಪಡೆದುಕೊಳ್ಳುವತ್ತ ನಾವು ಸಾಗಬೇಕಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಸೇರಿದಂತೆ ಎಲ್ಲರೂ ಶ್ರಮಿಸಬೇಕು. ಬೂತ್‌ ಮಟ್ಟದಿಂದ ಪಕ್ಷ ಸಂಘಟನೆ ಕಾರ್ಯ ತೀವ್ರಗೊಳ್ಳಬೇಕು ಎಂದರು.

Advertisement

ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯ ಚೇತನಗಳನ್ನು ಸ್ಮರಿಸಿಕೊಳ್ಳುತ್ತಿದ್ದೇನೆ. ಹಿರಿಯ ನಾಯಕರಾದ ಆಸ್ಕರ್‌ ಫೆರ್ನಾಂಡಿಸ್‌, ವೀರಪ್ಪ ಮೊಯಿಲಿ, ಜನಾರ್ದನ ಪೂಜಾರಿ ಹಾಗೂ ಕಳೆದ 10 ವರ್ಷಗಳಿಂದ ಪಕ್ಷದ ಅಧ್ಯಕ್ಷ ಸ್ಥಾನವನ್ನು ಸಮರ್ಥವಾಗಿ ನಿರ್ವಹಿಸಿ ಪಕ್ಷವನ್ನು ಕಟ್ಟಿಬೆಳೆಸಿದ ಬಿ. ರಮಾನಾಥ ರೈ ಅವರ ಸೇವೆಯನ್ನು ಸ್ಮರಿಸುತ್ತಿದ್ದೇನೆ ಎಂದವರು ಹೇಳಿದರು.

ಕೋಮುವಾದದ ವಿರುದ್ಧ ಹೋರಾಟ
ಜಿಲ್ಲೆಯ ಸಚಿವರು, ಶಾಸಕರು, ನಾಯಕರ ಕೂಡುವಿಕೆಯೊಂದಿಗೆ ಡಿಸಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು. ಇದರಲ್ಲಿ ಯುವಕರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುವುದು ಎಂದ ಅವರು, ಜಿಲ್ಲೆಯಲ್ಲಿ ಕೋಮುಸಾಮರಸ್ಯ ಕಾಯ್ದುಕೊಳ್ಳುವಲ್ಲಿ ಹೆಚ್ಚಿನ ಗಮನ ನೀಡಲಾಗುವುದು. ಕೋಮುವಾದದ ವಿರುದ್ಧ ನಮ್ಮ ಹೋರಾಟವಿರುತ್ತದೆ ಎಂದವರು ಹೇಳಿದರು.

ಸೂಕ್ತ ಆಯ್ಕೆ: ರಮಾನಾಥ ರೈ
ಹರೀಶ್‌ ಕುಮಾರ್‌ ಅವರು ಪಕ್ಷದಲ್ಲಿ ಕೆಳಸ್ತರದಿಂದ ಕಾರ್ಯಕರ್ತನಾಗಿ ಬಂದು ಇಂದು ಈ ಪದವಿಗೇರಿದ್ದಾರೆ. ದಿಢೀರ್‌ ಆಗಿ ನೇಮಕಗೊಂಡವರಲ್ಲ. ಕಾರ್ಯನಿರ್ವಹಣೆಯ ಅರ್ಹತೆ, ಯೋಗ್ಯತೆ ಅವರಲ್ಲಿದೆ. ಜಿಲ್ಲಾ ಕಾಂಗ್ರೆಸ್‌ ಪದವಿಗೆ ಅವರು ಅತ್ಯಂತ ಸೂಕ್ತ ಆಯ್ಕೆ. ಪಕ್ಷದ ಶಾಸಕರು, ನಾಯಕರು, ಕಾರ್ಯಕರ್ತರ ಒಮ್ಮತದ ಆಯ್ಕೆ ಇದಾಗಿದೆ ಎಂದು ಅಧಿಕಾರ ಹಸ್ತಾಂತರಿಸಿದ ನಿರ್ಗಮನ ಅಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

ವಿಧಾನಸಭಾ ಚುನಾವಣೆಗೆ ಇನ್ನೂ 275 ದಿನಗಳಿವೆ. ಪಕ್ಷ ಜಿಲ್ಲೆಯಲ್ಲಿ ಎಲ್ಲ ಶಾಸಕ ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಬೇಕಾಗಿದೆ. ಅಧಿಕಾರಕ್ಕಾಗಿ ಪದವಿಯನ್ನು ತೆಗದುಕೊಳ್ಳಬಾರದು ಕೆಲಸಕ್ಕಾಗಿ ಪದವಿಯನ್ನು ವಹಿಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದವರು ಕರೆ ನೀಡಿದರು. ಸಂಘ ಪರಿವಾರದ ಷಡ್ಯಂತ್ರಗಳ ವಿರುದ್ಧ ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕು. ಪಕ್ಷದ ಮತಗಳ ವಿಭಜನೆಯಾಗದಂತೆ ಜಾಗ್ರತೆ ವಹಿಸಬೇಕು ಎಂದರು. ಕಾಂಗ್ರೆಸ್‌ ಪಕ್ಷ ನನ್ನ ಧರ್ಮ. ಕಾಂಗ್ರೆಸ್‌ ಪಕ್ಷ ಎಲ್ಲ ಜನರನ್ನು ಪ್ರೀತಿ ಮಾಡುವ ಪಕ್ಷ. ನಾನು ಬಹುಸಂಖ್ಯಾಕ ಮತ್ತು ಅಲ್ಪಸಂಖ್ಯಾಕ ಮತೀಯವಾದಗಳ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದೇನೆ. ಜೀವದ ಹಂಗು ತೊರೆದು ಈ ಹೋರಾಟವನ್ನು ಮುಂದುವರಿಸುತ್ತೇನೆ. ನನಗೆ ಭೂಗತ ಜಗತ್ತಿನಿಂದ ಆನೇಕ ಬೆದರಿಕೆ ಕರೆಗಳು ಬಂದರೂ ನಾನು ನನ್ನ ಸಿದ್ಧಾಂತದಿಂದ ವಿಚಲಿತನಾಗಿಲ್ಲ ಎಂದವರು ಹೇಳಿದರು.

Advertisement

ಹಂಗಾಮಿ ಅಧ್ಯಕ್ಷರಾಗಿದ್ದ ಇಬ್ರಾಹಿಂ ಕೋಡಿಜಾಲ್‌ ಸ್ವಾಗತಿಸಿದರು. ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಶಾಹುಲ್‌ ಹಮೀದ್‌ ನಿರೂಪಿಸಿದರು. ಶಾಸಕರಾದ ಅಭಯಚಂದ್ರ ಜೈನ್‌, ಜೆ.ಆರ್‌. ಲೋಬೋ, ಶಕುಂತಳಾ ಶೆಟ್ಟಿ, ಮೊದಿನ್‌ ಬಾವಾ, ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ, ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಮೇಯರ್‌ ಕವಿತಾ ಸನಿಲ್‌, ಗೇರು ನಿಗಮದ ಅಧ್ಯಕ್ಷ ಬಿ.ಎಚ್‌. ಖಾದರ್‌, ಮುಡಾ ಅಧ್ಯಕ್ಷ ಸುರೇಶ್‌ ಬಲ್ಲಾಳ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶಾಲೆಟ್‌ ಪಿಂಟೋ, ಯುವಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ ಮುಖಂಡರಾದ ಎ.ಸಿ. ಭಂಡಾರಿ, ಶಶಿಧರ ಹೆಗ್ಡೆ, ಯು.ಕೆ. ಮೋನು, ಧರಣೇಂದ್ರ ಕುಮಾರ್‌, ಬಿ. ಇಬ್ರಾಹಿಂ, ಮಮತಾ ಗಟ್ಟಿ, ದಿವ್ಯಪ್ರಭಾ ಚಿಲ್ತಡ್ಕ, ಸದಾಶಿವ ಉಳ್ಳಾಲ, ಪ್ರತಿಭಾ ಕುಳಾç, ವಿಶ್ವಾಸ್‌ದಾಸ್‌, ಪಿತಾಂಬರ ಹೆರಾಜೆ, ಸುಜಿತ್‌ ವಿ. ಬಂಗೇರ, ವಿಜಯ ಕುಮಾರ್‌ ಸೊರಕೆ, ಎನ್‌.ಎಸ್‌. ಕರೀಂ, ಸಂತೋಷ್‌ ಕುಮಾರ್‌ ಶೆಟ್ಟಿ , ಟಿ.ಕೆ. ಸುಧೀರ್‌, ನಜೀರ್‌ ಬಜಾಲ್‌, ಸುಬೋಧ್‌ಆಳ್ವ, ಶೇಖರ ಕುಕ್ಕೇಡಿ, ಎನ್‌ಎಸ್‌ಯುಐ ಅಧ್ಯಕ್ಷ ಅಬ್ದುಲ್‌ ಉಪಸ್ಥಿತರಿದ್ದರು.

ಪಕ್ಷದ ಟಿಕೇಟ್‌ ಆಕಾಂಕ್ಷಿಯಲ್ಲ
ನಾನು ಚುನಾವಣೆಯಲ್ಲಿ ಪಕ್ಷದ ಟಿಕೇಟು ಅಕಾಂಕ್ಷಿಯಲ್ಲ. ಪಕ್ಷ ಸಂಘಟನೆ ನನ್ನ ಗುರಿ. ಅಧ್ಯಕ್ಷ ಪದವಿ ಹೂವಿನ ಹಾಸಿಗೆಯಲ್ಲ. ಮುಳ್ಳಿನ ಹಾಸಿಗೆ ಎಂದು ನನಗೆ ಚೆನ್ನಾಗಿ ತಿಳಿದಿದೆ. ಓರ್ವ ಸಾಮಾನ್ಯ ಕಾರ್ಯಕರ್ತನಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡ ನಾನು ಪಕ್ಷದಲ್ಲಿ ಕಳೆದ 38 ವರ್ಷಗಳಿಂದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿಕೊಂಡು ಬಂದಿರುವ ಅನುಭವದ ಹಿನ್ನೆಲೆಯಲ್ಲಿ ನಾನು ಇದನ್ನು ಚೆನ್ನಾಗಿ ನಿರ್ವಹಿಸುತ್ತೇನೆ ಎಂಬ ವಿಶ್ವಾಸವಿದೆ. ಎಲ್ಲರ ಒಮ್ಮತ ಆಯ್ಕೆಯಾಗಿ ಇಂದು ಈ ಉನ್ನತ ಹುದ್ದೆಯನ್ನು ವಹಿಸಿಕೊಂಡಿದ್ದೇನೆ ಎಂದು ಹರೀಶ್‌ ಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next