Advertisement

ನವೆಂಬರ್‌ ತಿಂಗಳಿನಲ್ಲಿ ಹರಿಪ್ರಿಯಾ ಕನ್ನಡ ಪಾಠ

06:06 PM Oct 26, 2019 | mahesh |

ಈ ವರ್ಷದ ಆರಂಭದಿಂದಲೂ ಒಂದರ ಹಿಂದೊಂದು ಚಿತ್ರಗಳಲ್ಲಿ ಅಭಿನಯಿಸುತ್ತ, ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿರುವ ನಟಿ ಹರಿಪ್ರಿಯಾ. ಇತ್ತೀಚೆಗಷ್ಟೇ ಹರಿಪ್ರಿಯಾ ನಾಯಕಿಯಾಗಿ ಅಭಿನಯಿಸಿರುವ ಎಲ್ಲಿದ್ದೆ ಇಲ್ಲಿ ತನಕ ಚಿತ್ರ ಅದ್ಧೂರಿಯಾಗಿ ತೆರೆಗೆ ಬಂದಿತ್ತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ, ಹರಿಪ್ರಿಯಾ ಅಭಿನಯವನ್ನು ಅಭಿಮಾನಿಗಳು ಮೆಚ್ಚಿಕೊಳ್ಳುತ್ತಿದ್ದಾರೆ. ಈಗ ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ನಾಯಕಿ ಪ್ರಧಾನ ಚಿತ್ರ ಕನ್ನಡ್‌ ಗೊತ್ತಿಲ್ಲ ತೆರೆಗೆ ಬರಲು ಸಿದ್ಧವಾಗುತ್ತಿದೆ.

Advertisement

ಅಂದಹಾಗೆ, ನವೆಂಬರ್‌ ಅಂದ್ರೆ ಕರ್ನಾಟಕದ ಎಲ್ಲೆಡೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಜೋರಾಗಿಯೇ ಇರುತ್ತದೆ. ಕನ್ನಡದ ಬಗ್ಗೆ, ಕನ್ನಡ ನಾಡು-ನುಡಿ, ಸಂಸ್ಕೃತಿಯ ಬಗ್ಗೆ ಹತ್ತು ಹಲವು ಕಾರ್ಯಕ್ರಮಗಳು ಎಲ್ಲೆಡೆ ಆಯೋಜನೆ ಆಗುತ್ತಲೇ ಇರುತ್ತವೆ. ಇದೇ ವೇಳೆ ಹರಿಪ್ರಿಯಾ ತಮ್ಮ ಚಿತ್ರದ ಮೂಲಕ ಕನ್ನಡ ಪಾಠ ಹೇಳುತ್ತಿದ್ದಾರಂತೆ.

ಹೌದು, ಹೆಸರೇ ಹೇಳುವಂತೆ ಕನ್ನಡ್‌ ಗೊತ್ತಿಲ್ಲ ಚಿತ್ರ ಕನ್ನಡದ ಭಾಷಾಭಿಮಾನವನ್ನು ತೋರಿಸುವ ಚಿತ್ರವಂತೆ. ಈಗಾಗಲೇ ಚಿತ್ರದ ಕೆಲಸಗಳು ಪೂರ್ಣಗೊಂಡಿದ್ದರೂ, ಅದು ಕನ್ನಡಕ್ಕೆ ಸಂಬಂಧಿಸಿದ ಚಿತ್ರ ಎನ್ನುವ ಕಾರಣಕ್ಕೆ ನವೆಂಬರ್‌ ತಿಂಗಳಿನಲ್ಲೇ ತೆರೆಗೆ ತರಬೇಕೆಂದು ಕಾದು ಕುಳಿತು ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದೆ.

ಹಾಗಾದರೆ, ಈ ಚಿತ್ರದಲ್ಲಿ ಹರಿಪ್ರಿಯಾ ಅವರದ್ದೇನು ಪಾತ್ರ, ಅದರ ವಿಶೇಷತೆ ಏನು ಅನ್ನೋದನ್ನ ಅವರೇ ವಿವರಿಸುತ್ತಾರೆ, “ಹೊರ ರಾಜ್ಯಗಳಿಂದ ಬರುವ ಅನ್ಯಭಾಷಿಗರು ಹಲವಾರು ವರ್ಷಗಳಿಂದಲೂ ಕರ್ನಾಟಕದಲ್ಲೇ ನೆಲೆಸಿದ್ದರೂ, ಕನ್ನಡ ಭಾಷೆಯನ್ನು ಕಲಿತಿರುವುದಿಲ್ಲ. ಅವರನ್ನು ಕನ್ನಡದಲ್ಲಿ ಮಾತನಾಡಿಸಲು ಪ್ರಯತ್ನಿಸಿದರೂ ಕೂಡ ಸಾರಿ, ನಮಗೆ ಕನ್ನಡ್‌ ಗೊತ್ತಿಲ್ಲ ಎಂದು ಬಹಳ ಸುಲಭವಾಗಿ ಹೇಳಿಬಿಡುತ್ತಾರೆ. ಇಂಥದೇ ವಿಷಯವನ್ನು ಪ್ರಮುಖವಾಗಿಟ್ಟುಕೊಂಡು ಕನ್ನಡ್‌ ಗೊತ್ತಿಲ್ಲ ಚಿತ್ರವನ್ನು ಮಾಡಲಾಗಿದೆ. ಒಂದು ರಾಜ್ಯ ಅಥವಾ ಒಂದು ಊರಿನಲ್ಲಿ ನೆಲೆಸಬೇಕಾದ್ರೆ ಭಾಷೆ ಅನ್ನೋದು ಎಷ್ಟು ಮುಖ್ಯವಾಗುತ್ತದೆ ಅನ್ನೋದನ್ನ ಈ ಚಿತ್ರದಲ್ಲಿ ಹೇಳಿದ್ದೇವೆ. ಇದರಲ್ಲಿ ನನ್ನದು ಪೊಲೀಸ್‌ ಅಧಿಕಾರಿಯ ಪಾತ್ರ. ಒಂದು ಕೊಲೆಯ ತನಿಖೆಯ ಜಾಡು ಹಿಡಿದು ಹೊರಟಾಗ ಏನೇನು ಸಂಗತಿಗಳು ಎದುರಾಗುತ್ತವೆ ಅನ್ನೋದನ್ನ ನನ್ನ ಪಾತ್ರ ತೋರಿಸುತ್ತದೆ. ಇದು ಪ್ರತಿಯೊಬ್ಬ ಕನ್ನಡಿಗನಿಗೂ ಅನ್ವಯವಾಗುವಂಥ ಚಿತ್ರ. ಮನರಂಜನೆಯ ಜೊತೆಗೆ ಒಂದೊಳ್ಳೆ ಸಂದೇಶ ಕೂಡ ಇದರಲ್ಲಿದೆ. ಅಪ್ಪಟ ಕನ್ನಡದ ಪ್ರತಿಭೆಗಳು ಸೇರಿ ಈ ಚಿತ್ರ ಮಾಡಿದ್ದೇವೆ’ ಎನ್ನುತ್ತಾರೆ.

ಆರ್‌. ಜೆ. ಮಯೂರ್‌ ನಿರ್ದೇಶನದಲ್ಲಿ ಮೂಡಿ ಬಂದಿರುವ ಕನ್ನಡ್‌ ಗೊತ್ತಿಲ್ಲ ಚಿತ್ರದಲ್ಲಿ ಹರಿಪ್ರಿಯಾ ಅವರೊಂದಿಗೆ ಸುಧಾರಾಣಿ, ಪವನ್‌ ಕುಮಾರ್‌, ಧರ್ಮಣ್ಣ, ಸಂತೋಷ್‌ ಕರ್ಕಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಒಟ್ಟಾರೆ ಸದ್ಯ ಕನ್ನಡ್‌ ಗೊತ್ತಿಲ್ಲ ಅನ್ನೋರಿಗೆ ಹರಿಪ್ರಿಯಾ ಹೇಗೆ ಪಾಠ ಹೇಳಿಕೊಡುತ್ತಾರೆ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next